ಅಕ್ರಮ ಗಾಂಜಾ ಸಾಗಾಟ; ಬಿಬಿಎಂಪಿ ಮಾಜಿ ಕಾರ್ಪೋರೇಟರ್​ ಪುತ್ರ ಸೇರಿದಂತೆ ಮೂವರು ಅರೆಸ್ಟ್​​

Ganja Supply
Published on

ಬೆಂಗಳೂರು: ಒಡಿಶಾದಿಂದ ಕರ್ನಾಟಕಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಬೆಂಗಳೂರು ಮೂಲದ ಮೂವರನ್ನು ಆಂಧ್ರಪ್ರದೇಶದ ವಿಶೇಷ ಜಾರಿ ಬ್ಯೂರೋ (SEB) ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಗುಂಟೂರಿನಲ್ಲಿ ವಶಕ್ಕೆ ಪಡೆದಿದ್ದಾರೆ.

ಬಮಧಿತರನ್ನು ಎಚ್​ಎಸ್​ಆರ್​ ಲೇಔಟ್​ ನಿವಾಸಿ ಕಿಶೋರ್ ಪಾಲಾಕ್ಷ ರೆಡ್ಡಿ (34), ಸುದ್ದುಗುಂಟೆಪಾಳ್ಯ ಮಾಜಿ ಬಿಬಿಎಂಪಿ ಸದಸ್ಯನ ಪುತ್ರ ಅಭಿನಯ್​ (30), ಸುಮಂತ್ ಕುಮಾರ್ (24) ಎಂದು ಗುರುತಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಆರಿಫ್ ಹಜೀಫ್, ಆರೋಪಿಗಳು ಒಡಿಶಾದ ಕೊರಾಪುಟ್ ಜಿಲ್ಲೆಯ ಅರಗೊಂಡಾ ಗ್ರಾಮದಲ್ಲಿ 60 ಕೆಜಿ ಗಾಂಜಾ ಖರೀದಿಸಿ ಬೆಂಗಳೂರಿನತ್ತ ಪ್ರಯಾಣಿಸುತ್ತಿದ್ದರು. ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಆಧರಿಸಿ ತನಿಖೆ ನಡೆಸಿದಾಗ ಗುಂಟೂರು ಜಿಲ್ಲೆಯ ಪೊಟ್ಟೂರು ಗ್ರಾಮದ ಹೆದ್ದಾರಿಯಲ್ಲಿ ಅವರನ್ನು ಬಂಧಿಸಲಾಗಿದೆ.

ಬಂಧಿತರಿಂದ 60 ಕೆಜಿ ಗಾಂಜಾ, ಏಳು ಮೊಬೈಲ್, ಎರಡು ಕಾರು ಮತ್ತು 2.28 ಲಕ್ಷ ನಗದು ಸೇರಿದಂತೆ ಒಟ್ಟು 44 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಗುಂಟೂರು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಆರಿಫ್ ಹಜೀಫ್ ಮಾಹಿತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net