ಮದ್ಯದಂಗಡಿ ತೆರೆಯುವುದನ್ನು ವಿರೋಧಿಸಿ ಎಸ್‌ಡಿಪಿಐ ಪ್ರತಿಭಟನೆ

protests
Published on

ಮೈಸೂರು: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮದ್ಯದಂಗಡಿ ತೆರೆಯಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಕಾರ್ಯಕರ್ತರು ನಗರದ ಗಾಂಧಿ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.


ರಾಜ್ಯದಲ್ಲಿ ಸಾವಿರಾರು ಕನ್ನಡ ಶಾಲೆಗಳಿಗೆ ಸಮರ್ಪಕವಾದ ಕಟ್ಟಡಗಳಿಲ್ಲದೆ ಮುಚ್ಚಲಾಗುತ್ತಿದೆ. ಸೂಕ್ತ ಗ್ರಂಥಾಲಯಗಳಿಲ್ಲ. ಜನರಿಗೆ ಉದ್ಯೋಗ ಇಲ್ಲ. ಇಂತಹ ಸಂದರ್ಭದಲ್ಲಿ ಸರ್ಕಾರ ತನ್ನ ಆದಾಯ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಮದ್ಯದಂಗಡಿಗಳಿಗೆ ಪರವಾನಗಿ ನೀಡಲು ಮುಂದಾಗಿದೆ. ಮದ್ಯಪಾನ ನಿಷೇಧ ಮಾಡುವ ಬದಲು, ಅದನ್ನು ಗ್ರಾಮಗಳ ಮಟ್ಟಕ್ಕೆ ಕೊಂಡೊಯ್ಯುತ್ತಿರುವುದು ವಿಷಾದನೀಯ ಎಂದು ಪಕ್ಷದ ಜಿಲ್ಲಾಧ್ಯಕ್ಷ ರಫತ್ ಖಾನ್ ಕಿಡಿಕಾರಿದರು


ಮದ್ಯಪಾನದಿಂದ ಸಾಮಾಜಿಕ ಸಮಸ್ಯೆಗಳು, ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಇದ್ಯಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೆ ಮದ್ಯದಂಗಡಿಗಳ ಸಂಖ್ಯೆ ಹೆಚ್ಚಿಸಲು ರಾಜ್ಯ ಸರ್ಕಾರ ಹೊರಟಿದೆ. ಜನರನ್ನು ಮದ್ಯಪಾನಕ್ಕೆ ಉತ್ತೇಜಿಸುವ ಸರ್ಕಾರಕ್ಕೆ ಪಾನಮುಕ್ತ ಸಮಾಜದ ಕನಸು ಕಂಡಿದ್ದ ಗಾಂಧೀಜಿ ಜಯಂತಿ ಆಚರಿಸುವ ಯಾವುದೇ ನೈತಿಕತೆ ಇಲ್ಲ.

ಇದು ಗಾಂಧೀಜಿ ಅವರಿಗೆ ಸರ್ಕಾರ ಮಾಡುವ ಅವಮಾನವಾಗಿದೆ. ಸರ್ಕಾರಕ್ಕೆ ನಿಜವಾಗಿಯೂ ಗಾಂಧೀಜಿ ಮೇಲೆ ಗೌರವ ಇದ್ದರೆ ತಕ್ಷಣವೇ ರಾಜ್ಯದಲ್ಲಿ ಸಂಪೂರ್ಣ ಪಾನ ನಿಷೇಧ ಮಾಡಲಿ ಎಂದು ಸವಾಲು ಹಾಕಿದರು


ಎಸ್‌ಡಿಪಿಐ ರಾಜ್ಯ ಉಪಾಧ್ಯಕ್ಷ ದೇವನೂರು ಪುಟ್ಟನಂಜಯ್ಯ, ಮುಖಂಡರಾದ ಎಸ್.ಸ್ವಾಮಿ, ಸಫಿಯುಲ್ಲಾ, ಫರ್ದಿನ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net