

ಬೆಳ್ತಂಗಡಿ: ಪ್ರತಿಯೊಂದು ವಿಚಾರವನ್ನು ನೇರವಾಗಿ ಒಪ್ಪದೆ ಅದನ್ನು ಪ್ರಶ್ನಿಸುವ ಅಭ್ಯಾಸ ಬೆಳೆಸಿಕೊಂಡಾಗ ಕ್ರಿಯಾಶೀಲತೆ ಹೆಚ್ಚಾಗುತ್ತದೆ. ಆ ಸ್ಪಷ್ಟತೆ ಇದ್ದರೆ ಮಾತ್ರ ಯಶಸ್ಸು ನಮ್ಮದಾಗುತ್ತದೆ. ಪ್ರಪಂಚ ಅನ್ವೇಷಕರನ್ನು ಸದಾ ನೆನಪಿಟ್ಟುಕೊಳ್ಳುತ್ತದೆಎಂದು ಬೆಂಗಳೂರಿನ ಅಮೆಜಾನ್ ಡೆವಲಪ್ಮೆಂಟ್ ಸೆಂಟರ್ನ ರಿಸ್ಕ್ ಇನ್ವೆಸ್ಟಿಗೇಷನ್ ಮ್ಯಾನೇಜರ್ ದೀಪಕ್ ರಾಜ್ ಹೇಳಿದರು.
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ವಾಣಿಜ್ಯ ಮತ್ತು ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗ ಆಶ್ರಯದಲ್ಲಿ ಕಾಮರ್ಸ್ ಕ್ಯಾಂಪಸ್ ಅಸೋಸಿಯೇಷನ್(ಸಿ.ಸಿ.ಎ.) ಮಾ.15ರಂದು ಆಯೋಜಿಸಿದ್ದ ರಾಜ್ಯಮಟ್ಟದ ಅಂತರ್ ಕಾಲೇಜು ವಾಣಿಜ್ಯ ಮತ್ತು ವ್ಯವಹಾರ ಆಡಳಿತ ಉತ್ಸವ ‘ವೆಂಚುರ-2025’ ಉದ್ಘಾಟಿಸಿ ಮಾತನಾಡಿದರು.
ಕಾಲೇಜು ಆಂತರಿಕ ಗುಣಮಟ್ಟ ಭರವಸೆ ಕೋಶ(ಐಕ್ಯೂಎಸಿ) ಸಂಯೋಜಕ ಗಜಾನನ ಆರ್.ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಾಣಿಜ್ಯ, ಉದ್ಯಮ ಎನ್ನುವುದು ಎಲ್ಲ ಅಪಾಯಗಳ ವಿರುದ್ಧ ಹೋರಾಡುವುದನ್ನು ಕಲಿಸುವ ಪ್ರಪಂಚವಾಗಿದೆ. ಉದ್ಯಮಿಗಳು ದೇಶ ನಿರ್ಮಾಣ ಮಾಡುವವರು. ಹಣ ಎನ್ನುವುದು ನಮಗೆ ಹೂಡಿಕೆ ಮತ್ತು ಗಳಿಸುವುದನ್ನು ಕಲಿಸುತ್ತದೆ ಎಂದರು.
ವಾಣಿಜ್ಯ ನಿಕಾಯದ ಡೀನ್, ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ವಿಭಾಗ ಮುಖ್ಯಸ್ಥೆ ಶಕುಂತಲಾ ಅವರಿಗೆ ನಿವೃತ್ತ ಪ್ರಾಂಶುಪಾಲ ಡಾ.ಉದಯಚಂದ್ರ ಪಿ.ಎನ್. ಸಂಶೋಧನೆಗೆ ನೆರವಾಗಲು ಪ್ರೋತ್ಸಾಹಧನ ನೀಡಿದರು. ಫೆಸ್ಟ್ ಅಂಗವಾಗಿ ಆಯೋಜಿಸಿದ್ದ ಅಂತರ್ ತರಗತಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸಿ.ಎಸ್.ಇ.ಇ.ಟಿ., ಸಿ.ಎ. ಫೌಂಡೇಷನ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಾಣಿಜ್ಯ ವಿಭಾಗ ಮುಖ್ಯಸ್ಥೆ ಡಾ.ರತ್ನಾವತಿ ಕೆ., ಕಾರ್ಯಕ್ರಮ ಸಂಯೋಜಕರಾದ ವಿನುತಾ ಡಿ.ಎಂ., ಗುರುರಾಜ್ ಜಿ., ಸಿ.ಸಿ.ಎ. ಸಿಇಒ ದೀಕ್ಷಿತಾ, ಕಾಲೇಜು ವಿವಿಧ ವಿಭಾಗ ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಪ್ರತಿನಿಧಿಗಳು ಉಪಸ್ಥಿತರಿದ್ದರು. ಶಕುಂತಲಾ ಸ್ವಾಗತಿಸಿದರು. ಕ್ಷಿತಿ ಮತ್ತು ತಂಡ ಪ್ರಾರ್ಥಿಸಿತು. ಸಿ.ಸಿ.ಎ. ಕಾರ್ಯದರ್ಶಿ ಸಹನಾ ಡೋಂಗ್ರೆ ವಂದಿಸಿದರು. ಸುಶ್ಮಿತಾ ಬಿ., ಜಯಸೂರ್ಯ ನಾಯಕ್, ಕ್ಷಿತಿ ಕೆ. ರೈ, ಐಶ್ರೀ ಕೆ., ಶರ್ಮಿಳಾ ಎಂ.ಆರ್., ಭೂಮಿಕಾ ಕೆ.ಎಲ್.ಜೈನ್ ಕಾರ್ಯಕ್ರಮ ನಿರೂಪಿಸಿದರು.