

ಕಾರವಾರ: ಸ್ಕ್ರಾಪ್ (Scrap) ಆದ ಕಾರಿನ ಮಾಲೀಕರ ಹೆಸರಿಗೆ ದಂಡದ ನೋಟೀಸು ಬಂದಿರುವುದು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದ್ದು, ಈ ಸಂಬಂಧ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾರವಾರದ ಐಟಿಐ ಕಾಲೇಜ್ ಸಮೀಪದ ಬ್ಯಾಂಕ್ ಕಾಲನಿಯ ನಿವಾಸಿ, ನಿವೃತ್ತ ಸರ್ಕಾರಿ ಉದ್ಯೋಗಿ ಶೀಲಾ ಪ್ರಕಾಶ ನಾಯ್ಕ ಚಿತ್ತಾಕುಲಾದ ಭಾರತ ಆಟೋ ಕಾರ್ಸ್ ಶೋ ರೂಂ ವಿರುದ್ಧ ಚಿತ್ತಾಕುಲಾ ಪೊಲೀಸ್ ಠಾಣೆಯಲ್ಲಿ ವಂಚನೆಯ ದೂರು ನೀಡಿದ್ದಾರೆ. 2013 ರಲ್ಲಿ ಅವರು ಭಾರತ ಆಟೋ ಕಾರ್ಸ್‌ನಿಂದ ಸ್ವಫ್ಟ್ ವಿಎಕ್ಸ್‌ಐ ಕಾರು ಖರೀದಿಸಿ ಕಾರವಾರ ಆರ್‌ಟಿಒ ಅವರಲ್ಲಿ ನೋಂದಣಿ ಮಾಡಿಸಿದ್ದರು. 2016 ರ ಡಿಸೆಂಬರ್ 18 ರಂದು ಕಾರು ರಸ್ತೆ ಬದಿಯ ಹೊಂಡಕ್ಕೆ ಬಿದ್ದು ಹಾಳಾಗಿತ್ತು. ಅದಕ್ಕೆ ಮಾಲೀಕರು 2017 ರಲ್ಲಿ ಬಜಾಜ್ ವಿಮೆ ಕಂಪನಿಯಿಂದ ವಿಮಾ ಮೊತ್ತ ಪಡೆದಿದ್ದರು. ನಂತರ ಕಾರನ್ನು ಸ್ಕ್ರಾಪ್ ಮಾಡಲು ಸೂಚಿಸಿದ್ದರಿಂದ ಅದನ್ನು ಶೋ ರೂಂನಲ್ಲಿಯೇ ಬಿಟ್ಟು ಬಂದಿದ್ದರು.
ಆದರೆ, ಇತ್ತೀಚೆಗೆ ಬೆಂಗಳೂರು ಸಿಟಿ ಟ್ರಾಫಿಕ್ ಪೊಲೀಸ್ ಠಾಣೆಯಿಂದ ಶೀಲಾ ಅವರ ಹೆಸರಿಗೆ ನೋಟಿಸ್ ಒಂದು ಬಂದಿದ್ದು, ಅವರು ಈ ಹಿಂದೆ ಬಳಸುತ್ತಿದ್ದ ಕಾರ್ ನಂಬರ್ ಕೆಎ-30 ಎಂ 6335 ಸಂಖ್ಯೆಯ ಕಾರು ಸಂಚಾರಿ ನಿಯಮ ಉಲ್ಲಂಘಿಸಿದ ಬಗ್ಗೆ 2 ಸಾವಿರ ರೂ. ದಂಡ ತುಂಬುವಂತೆ ಸೂಚಿಸಲಾಗಿತ್ತು.
ತಾವು ಸ್ಕ್ರಾಪ್ ಗಾಗಿ ನೀಡಿದ ಕಾರನ್ನು ಭಾರತ ಆಟೋ ಕಾರ್ಸ್‌ನವರು ಸ್ಕ್ರಾಪ್ ಮಾಡದೇ ಮಾರಾಟ ಮಾಡಿದ್ದಾರೆ. ಅದರಿಂದ ಕಾರು ಅಲ್ಲಿ ಓಡುತ್ತಿದೆ ಎಂಬುದು ದೂರುದಾರರ ಆರೋಪ. ಪ್ರಕರಣ ದಾಖಲಿಸಿಕೊಂಡ ಚಿತ್ತಾಕುಲಾ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.