ಟಿ20 ವಿಶ್ವಕಪ್‌ಗೆ ಸ್ಕಾಟ್ಲೆಂಡ್ ತಂಡದ ಜೆರ್ಸಿ ವಿನ್ಯಾಸಗೊಳಿಸಿದ್ದು 12 ವರ್ಷದ ಬಾಲಕಿ!

scotland web
Published on

ದುಬೈ: ಕ್ರಿಕೆಟ್ ಶಿಶು ಎನಿಸಿರುವ ಸ್ಕಾಟ್ಲೆಂಡ್ ತಂಡ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ತಂಡಕ್ಕೆ ಸೋಲುಣಿಸಿ ಅಚ್ಚರಿ ಸೃಷ್ಟಿಸಿತ್ತು. ಅದಕ್ಕಿಂತಲೂ ಅಚ್ಚರಿ ಸಂಗತಿಯೊಂದು ಇದೀಗ ಬೆಳಕಿಗೆ ಬಂದಿದೆ. ಅದೇನೆಂದರೆ, ಸ್ಕಾಟ್ಲೆಂಡ್ ತಂಡದ ನೇರಳೆ ಮತ್ತು ಕಡು ನೀಲಿ ಬಣ್ಣದ ಜೆರ್ಸಿಯನ್ನು 12 ವರ್ಷದ ಬಾಲಕಿಯೊಬ್ಬಳು ವಿನ್ಯಾಸಗೊಳಿಸಿದ್ದಾಳೆ!

ಸ್ಕಾಟ್ಲೆಂಡ್ ಕ್ರಿಕೆಟ್ ಮಂಡಳಿ, ದೇಶದ ಶಾಲಾ ಮಕ್ಕಳಿಗೆ ರಾಷ್ಟ್ರೀಯ ಕ್ರಿಕೆಟ್ ತಂಡದ ಹೊಸ ಜೆರ್ಸಿ ವಿನ್ಯಾಸಗೊಳಿಸುವ ಸ್ಪರ್ಧೆ ಏರ್ಪಡಿಸಿತ್ತು. ಇದರಲ್ಲಿ ಬಂದ 200ಕ್ಕೂ ಅಧಿಕ ವಿನ್ಯಾಸಗಳಲ್ಲಿ, ರೆಬೆಕಾ ಡೋವ್ನಿ ಹೆಸರಿನ 12 ವರ್ಷದ ಬಾಲಕಿ ರೂಪಿಸಿದ ಜೆರ್ಸಿ ಆಯ್ಕೆಯಾಗಿದೆ. ಸ್ಕಾಟ್ಲೆಂಡ್‌ನ ರಾಷ್ಟ್ರೀಯ ಲಾಂಛನವಾದ ‘ತಿಸಲ್’ ಹೂವಿನ ಬಣ್ಣದಿಂದ ಪ್ರೇರಿತವಾಗಿ ಈ ಜೆರ್ಸಿ ವಿನ್ಯಾಸಗೊಳಿಸಲಾಗಿದೆ.

ಜೆರ್ಸಿಯನ್ನು ರೂಪಿಸಿದ ರೆಬೆಕಾಗೆ ಸ್ಕಾಟ್ಲೆಂಡ್ ಕ್ರಿಕೆಟ್ ಮಂಡಳಿ ಧನ್ಯವಾದ ಸಲ್ಲಿಸಿದ್ದು, ಆಕೆ ಇದೇ ಜೆರ್ಸಿ ಧರಿಸಿ ಬಾಂಗ್ಲಾ ವಿರುದ್ಧದ ಪಂದ್ಯದ ವೇಳೆ ಸ್ಕಾಟ್ಲೆಂಡ್ ತಂಡವನ್ನು ಹುರಿದುಂಬಿಸಿದ ಚಿತ್ರವನ್ನೂ ಟ್ವೀಟಿಸಿದೆ. ಸ್ಕಾಟ್ಲೆಂಡ್ ತಂಡ ವಿಶ್ವಕಪ್ ಆಡಲು ಓಮನ್‌ಗೆ ಪ್ರಯಾಣ ಬೆಳೆಸುವ ಮುನ್ನ ರೆಬೆಕಾಳೇ ತಂಡದ ಎಲ್ಲ ಆಟಗಾರರಿಗೆ ಹೊಸ ಜೆರ್ಸಿ ವಿತರಿಸಿದ್ದಳು.

‘ಹೊಸ ಜೆರ್ಸಿ ವಿನ್ಯಾಸ ತಂಡಕ್ಕೆ ಹೆಮ್ಮೆ ತಂದಿದೆ. ವಿಶ್ವಕಪ್ ನಿರ್ವಹಣೆಯ ಮೂಲಕ ನಾವು ಈ ಜೆರ್ಸಿ ಗೌರವ ಹೆಚ್ಚಿಸಲಿದ್ದೇವೆ. ಅಭಿಮಾನಿಗಳಿಗೂ ನಮ್ಮ ಹೊಸ ಜೆರ್ಸಿಯ ವಿನ್ಯಾಸ ಖುಷಿ ನೀಡಿದೆ’ ಎಂದು ಸ್ಕಾಟ್ಲೆಂಡ್ ತಂಡದ ನಾಯಕ ಕೈಲ್ ಕೋಯೆಟ್ಜರ್ ಹೇಳಿದ್ದಾರೆ. ಟೂರ್ನಿಯ ಮೊದಲ ಸುತ್ತಿನಲ್ಲಿ ಆಡಿದ ಎರಡೂ ಪಂದ್ಯ ಜಯಿಸಿ ಬಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿರುವ ಸ್ಕಾಟ್ಲೆಂಡ್, ಸೂಪರ್-12 ಹಂತಕ್ಕೇರುವುದು ಬಹುತೇಕ ಖಚಿತವೆನಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net