

| ರಮೇಶ ಜಹಗೀರದಾರ್ ದಾವಣಗೆರೆ
ವಿಜ್ಞಾನ ಕಬ್ಬಿಣದ ಕಡಲೆಯಲ್ಲ, ಆಸಕ್ತಿಯಿಂದ ಓದಿದರೆ ಅದೇ ನಿಮ್ಮ ಫೇವರಿಟ್ ವಿಷಯ ಆಗುತ್ತದೆ. ಓದಿನ ಜತೆಗೆ ಪ್ರಯೋಗಶೀಲತೆ ಇದ್ದಲ್ಲಿ ಹೊಸ ಆವಿಷ್ಕಾರಗಳನ್ನು ಮಾಡುತ್ತಾ ಸಮಾಜಕ್ಕೆ ಕೊಡುಗೆ ನೀಡಬಹುದು. ಓದುವ ಮತ್ತು ವೈಜ್ಞಾನಿಕವಾಗಿ ವಿಶ್ಲೇಷಿಸುವ ಸಾಮರ್ಥ್ಯವನ್ನು ಎಳೆವಯಸ್ಸಿನಲ್ಲಿಯೇ ಬೆಳೆಸಿಕೊಂಡರೆ ಮುಂದಿನ ಹಾದಿ ಸುಗಮ. ಇದನ್ನು ಅರಿತ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಾಯೋಜಕತ್ವದಲ್ಲಿ ಪ್ರತಿ ವರ್ಷ ಸಮಾವೇಶ ಆಯೋಜಿಸಿ ಹೊಸ ಹೊಸ ಬಾಲವಿಜ್ಞಾನಿಗಳನ್ನು ಬೆಳಕಿಗೆ ತರುತ್ತಿದೆ. ಇದಕ್ಕಾಗಿ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲಿ ವಿಶೇಷ ಸ್ಪರ್ಧೆಗಳನ್ನ ಆಯೋಜಿಸಲಾಗುತ್ತಿದೆ.
ರಾಜ್ಯದ ಬಾಲ ವಿಜ್ಞಾನಿಗಳು ಇವರು: ಯಾದಗಿರಿ ಜಿಲ್ಲೆ ಸೈದಾಪುರ ಪಟ್ಟಣದಲ್ಲಿ ಇತ್ತೀಚೆಗೆ ನಡೆದ ಪ್ರಸಕ್ತ ಸಾಲಿನ ರಾಜ್ಯಮಟ್ಟದ ಯುವ ವಿಜ್ಞಾನಿಗಳ ಸಮಾವೇಶದಲ್ಲಿ ನಾಲ್ಕು ಮಕ್ಕಳು ‘ರಾಜ್ಯ ಬಾಲವಿಜ್ಞಾನಿ’ ಸ್ಥಾನ ಅಲಂಕರಿಸಿದ್ದಾರೆ. ಆ ಸಾಧಕರೇ ಯೋಗಪ್ರಿಯ, ಯಶಸ್ವಿ ಶೆಟ್ಟಿ, ಸುಮೇಧ ಮತ್ತು ಕಾರ್ತಿಕ.