

ಬೆಂಗಳೂರು: ಕೋವಿಡ್ ಮಾರ್ಗಸೂಚಿ ಅನುಸರಿಸಿ 9 ರಿಂದ ದ್ವಿತೀಯ ಪಿಯುಸಿವರೆಗೆ ತರಗತಿಗಳನ್ನು ಆರಂಭಿಸಿರುವ ರಾಜ್ಯ ಸರ್ಕಾರ, ಇದೀಗ ಉಳಿದ ತರಗತಿಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.
ಫೆ.22ರಿಂದ 6ರಿಂದ 8 ನೇ ತರಗತಿಯವರೆಗೆ ಪೂರ್ಣ ಪ್ರಮಾಣ ತರಗತಿ ಆರಂಭ ಆಗಲಿದೆ. ಇಂದು(ಮಂಗಳವಾರ) ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ನೇತೃತ್ವದಲ್ಲಿ ರಾಜ್ಯ ವೈದ್ಯಕೀಯ ಶಿಕ್ಷಣ ಸಚಿವರು ಹಾಗೂ ರಾಜ್ಯ ಕರೊನಾ ತಾಂತ್ರಿಕ ಸಲಹಾ ಸಮಿತಿ ಜತೆ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರೇಶ್ಕುಮಾರ್, ಫೆ.22ರಿಂದ 6,7 ಮತ್ತು 8ನೇ ತರಗತಿ ಮಕ್ಕಳಿಗೆ ಶಾಲೆಯಲ್ಲಿ ಪೂರ್ಣ ಪ್ರಮಾಣದ ತರಗತಿ ಆರಂಭ ಆಗಲಿದೆ. ಆದರೆ, ಬೆಂಗಳೂರು ನಗರ ಹಾಗೂ ಕೇರಳ ಗಡಿ ಭಾಗದ ಪ್ರದೇಶಗಳಲ್ಲಿ 6 ಮತ್ತು 7ನೇ ತರಗತಿ ಆರಂಭವಿಲ್ಲ. 8ನೇ ತರಗತಿ ಮಾತ್ರ ಆರಂಭ ಆಗಲಿದೆ ಎಂದು ವಿವರಿಸಿದರು.
ಈ ಬಾರಿಯೂ ಹಾಜರಾತಿ ಕಡ್ಡಾಯ ಇಲ್ಲ. ಆನ್ಲೈನ್ ತರಗತಿಗಳು ಎಂದಿನಂತೆ ಇರುತ್ತದೆ. ಶಾಲೆ ಆರಂಭವಾದರೆ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲು ತಜ್ಞರ ಸಮಿತಿ ಕಟ್ಟು ನಿಟ್ಟಿನ ಸಲಹೆ ನೀಡಿದೆ. ಯಾವುದೇ ಕಾರಣಕ್ಕೂ ಸಾಮಾಜಿಕ ಅಂತರ ಮರೆಯುವಂತಿಲ್ಲ ಎಂದರು.
ಕೇರಳದಿಂದ ಬರುವ ವಿದ್ಯಾರ್ಥಿಗಳಿಗೆ ಕರೋನಾ ಟೆಸ್ಟ್ ರಿಪೋರ್ಟ್ ಕಡ್ಡಾಯ. ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಹಾಸ್ಟೆಲ್ ಗಳು ಆರಂಭವಾಗಲಿವೆ. ವಿದ್ಯಾರ್ಥಿಗಳ ಅಗತ್ಯತೆಗೆ ತಕ್ಕಂತೆ ಹೆಚ್ಚು ಬಸ್ಗಳನ್ನು ಓಡಿಸಬೇಕೆಂದು ಸಾರಿಗೆ ಇಲಾಖೆಗೆ ಮನವಿ ಮಾಡಿದ್ದೇನೆ. ಎಲ್ಲ ಜಿಲ್ಲೆಗಳಲ್ಲಿ ಮಕ್ಕಳು ಮತ್ತು ಶಿಕ್ಷಕರಿಗೆ ರ್ಯಾಂಡಮ್ ಟೆಸ್ಟ್ ಮಾಡಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ತಜ್ಞರ ಸಮಿತಿಯ ಡಾ.ಸುದರ್ಶನ ಬಲ್ಲಾಳ್ ಸೇರಿ ಸಮಿತಿ ಸದಸ್ಯರು, ಶಿಕ್ಷಣ, ಆರೋಗ್ಯ, ಹಿಂದುಳಿದ ವರ್ಗಗಳ ಇಲಾಖೆ, ಸಾರಿಗೆ ಇಲಾಖೆ ಅಧಿಕಾರಿಗಳೂ ಪಾಲ್ಗೊಂಡಿದ್ದರು.