

ನವದೆಹಲಿ: ಬಿಕ್ಕಟ್ಟಿಗೆ ಸಿಲುಕಿರುವ ರಿಲಯನ್ಸ್ ಕಮ್ಯುನಿಕೇಷನ್ಸ್ ಸಮೂಹದ ಮಾಲಿಕ ಅನಿಲ್ ಅಂಬಾನಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಸಾಲದ ಎರಡು ಖಾತರಿಗಳಿಗೆ (ಗ್ಯಾರಂಟಿ) ಸಂಬಂಧಿಸಿದಂತೆ 1,200 ಕೋಟಿ ರೂ.ಗಳನ್ನು ವಸೂಲಿ ಮಾಡುವ ಪ್ರಕ್ರಿಯೆಗೆ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಚಾಲನೆ ನೀಡಿದೆ. ದಿವಾಳಿ ಕಾನೂನಿನ ವೈಯಕ್ತಿಕ ಗ್ಯಾರಂಟಿ ನಿಯಮದಡಿ 1,200 ಕೋಟಿ ರೂ. ವಸೂಲಿಗೆ ಎಸ್ಬಿಐ ಮುಂದಾಗಿದೆ.
ಈ ಬಗ್ಗೆ ಒಬ್ಬ ವೃತ್ತಿಪರ ಸಲಹಾಕಾರರನ್ನು ನೇಮಿಸುವಂತೆ ಕೋರಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣಕ್ಕೆ (ಎನ್ಸಿಎಲ್ಟಿ) ಎಸ್ಬಿಐ ಅರ್ಜಿ ಸಲ್ಲಿಸಿದೆ. ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ರಿಲಯನ್ಸ್ ಇನ್ಫ್ರಾಟೆಲ್ ಕಂಪನಿಗಳ ಬ್ಯಾಂಕ್ ಸಾಲಗಳಿಗೆ ಅನಿಲ್ ವೈಯಕ್ತಿಕ ಗ್ಯಾರಂಟಿ ನೀಡಿದ್ದರು.
ಈ ಪ್ರಕರಣದ ಸಂಬಂಧ ಗುರುವಾರದೊಳಗೆ ಉತ್ತರಿಸುವಂತೆ ಅನಿಲ್ಗೆ ಗಡುವು ನೀಡಲಾಗಿದೆ. ವಿವಾದವು ರಿಲಯನ್ಸ್ ಕಮ್ಯುನಿಕೇಷನ್ಸ್ ಮತ್ತು ರಿಲಯನ್ಸ್ ಇನ್ಫ್ರಾಟೆಲ್ಗೆ ಸಂಬಂಧಿಸಿದ್ದೇ ಹೊರತು ಇದು ವೈಯಕ್ತಿಕ ಸಾಲವಲ್ಲ ಎಂದು ಅನಿಲ್ ವಕ್ತಾರರು ತಿಳಿಸಿದ್ದಾರೆ. ಮುಕೇಶ್ ಈ ಹಿಂದೆ ತಮ್ಮಅನಿಲ್ರನ್ನು ಇದೇ ರೀತಿಯ ಬಿಕ್ಕಟ್ಟಿನಿಂದ ಪಾರು ಮಾಡಿ ಜೈಲು ಪಾಲಾಗುವುದನ್ನು ತಪ್ಪಿಸಿದ್ದರು.