ಕದನ ವಿರಾಮದ ಮಧ್ಯಸ್ಥಿಕೆ; ಟ್ರಂಪ್​ ಹೇಳಿಕೆ ನಿರಾಕರಿಸುವಂತೆ ಮೋದಿಗೆ ರಾಹುಲ್​ ಸವಾಲ್​ | Rahul Gandhi

Modi,Rahul,Trump
Published on

Rahul Gandhi: ಪಹಲ್ಗಾಮ್​ ದಾಳಿಯ ನಂತರ ಭಾರತ ಮತ್ತು ಪಾಕ್​​ ನಡುವಿನ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿರುವುದಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇಪದೆ ನೀಡುತ್ತಿರುವ ಹೇಳಿಕೆಗಳು ಗೊಂದಲ ಸೃಷ್ಡಿಸುತ್ತಿದ್ದು, ಟ್ರಂಪ್​​ ಹೇಳಿಕೆಯನ್ನು ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕವಾಗಿ ನಿರಾಕರಿಸಲಿ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸವಾಲು ಹಾಕಿದ್ದಾರೆ.

ಲೋಕಸಭೆಯಲ್ಲಿ ಆಪರೇಷನ್ ಸಿಂಧೂರ ಕುರಿತು ಮಾತನಾಡಿರುವ ರಾಹುಲ್​, ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆ ಮತ್ತು ಕಾರ್ಯಾಚರಣೆಯನ್ನು ಸರ್ಕಾರ ನಿರ್ವಹಿಸಿದ ರೀತಿಯ ಬಗ್ಗೆ ಪ್ರಶ್ನೆಗಳ ಸುರಿಮಳೆಗೈದರು.

ಡೊನಾಲ್ಡ್ ಟ್ರಂಪ್ ತಾವೇ ಯುದ್ಧ ನಿಲ್ಲಿಸಿರುವುದಾಗಿ 29 ಬಾರಿ ಹೇಳಿದ್ದಾರೆ. ಇದು ನಿಜವಲ್ಲದಿದ್ದರೆ, ಪ್ರಧಾನಿ ನಿರಾಕರಿಸಬೇಕು. ಇಂದಿರಾ ಗಾಂಧಿಯವರ ಧೈರ್ಯದಲ್ಲಿ ಪ್ರತಿಶತ 50 ರಷ್ಟಾದರೂ ಧೈರ್ಯವಿದ್ದರೆ, ಟ್ರಂಪ್ ಅವರನ್ನು ಸುಳ್ಳುಗಾರ ಎಂದು ಸಾರ್ವಜನಿಕವಾಗಿ ಹೇಳುವಂತೆ ಒತ್ತಾಯಿಸಿದ ರಾಹುಲ್​, ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು.

ಆಘಾತಕಾರಿ ವಿಷಯ ತಿಳಿಸಿದ ರಾಹುಲ್​​!

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾಷಣ ಉಲ್ಲೇಖಿಸಿದ ರಾಹುಲ್​​, ಆಪರೇಷನ್ ಸಿಂಧೂರ ಬೆಳಿಗ್ಗೆ 1:05 ಕ್ಕೆ ಪ್ರಾರಂಭವಾಗಿದ್ದು, 22 ನಿಮಿಷಗಳ ಕಾಲ ನಡೆಯಿತು ಎಂದು ಸಚಿವರು ಹೇಳಿದ್ದಾರೆ. ಈ ಬಳಿಕ ಅತ್ಯಂತ ಆಘಾತಕಾರಿ ವಿಷಯವೊಂದನ್ನು ಬಹಿರಂಗಪಡಿಸಿರುವ ಸಚಿವರು, 1:35 ಕ್ಕೆ ನಾವು ಪಾಕಿಸ್ತಾನಕ್ಕೆ ಕರೆ ಮಾಡಿ ಭಯೋತ್ಪಾದಕ ನೆಲೆಗಳನ್ನು ಹೊಡೆದಿದ್ದೇವೆ ಮುಂದೆ ನಾವು ಪರಿಸ್ಥಿತಿ ಉಲ್ಬಣಗೊಳ್ಳಲು ಬಯಸುವುದಿಲ್ಲ ಎಂದು ತಿಳಿಸಿದ್ದರು.

ಅದೇ ದಿನ ರಾತ್ರಿ 1:35ಕ್ಕೆ ಕದನ ವಿರಾಮ ಕೋರಲು ಭಾರತ ಸರ್ಕಾರ ಭಾರತದ ಡಿಜಿಎಂಒ ಅವರಿಗೆ ಹೇಳಿತ್ತು, ಈ ಮೂಲಕ ಕೇಂದ್ರ ಸರ್ಕಾರ, ಪಾಕಿಸ್ತಾನಕ್ಕೆ ತಮ್ಮ ರಾಜಕೀಯ ಇಚ್ಛಾಶಕ್ತಿಯನ್ನು ನೇರವಾಗಿ ಹೇಳಿತ್ತು ಎಂದು ಆರೋಪಿಸಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net