ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರತ್ತ ಸರ್ಕಾರ ತಾತ್ಸಾರ: ಜೀವನ ನಿರ್ವಹಣೆಗಾಗಿ ರಬ್ಬರ್ ಟ್ಯಾಪಿಂಗ್ ನಡೆಸುತ್ತಿರುವ ಸತ್ಯನಾರಾಯಣ ಬೆಳೇರಿ

New Project
Published on

ವಿಜಯವಾಣಿ ಸುದ್ದಿಜಾಲ ಕಾಸರಗೋಡು

ಅಪೂರ್ವ ಭತ್ತದ ತಳಿಗಳನ್ನು ಸಂರಕ್ಷಿಸಿಕೊಂಡು ಬರುತ್ತಿರುವ, ತನ್ನ ಸಾಧನೆಗಾಗಿ ಭಾರತ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಕೃಷಿಕ ಇಂದು ಜೀವನ ನಿರ್ವಹಣೆಗಾಗಿ ರಬ್ಬರ್ ಟ್ಯಾಪಿಂಗ್ ನಡೆಸುತ್ತಿದ್ದಾರೆ.

ಗಡಿನಾಡು ಕಾಸರಗೋಡಿನ ಕರ್ನಾಟಕಕ್ಕೆ ಹೊಂದಿಕೊಂಡಿರುವ ಬೆಳ್ಳೂರು ಪಂಚಾಯಿತಿಯ ನೆಟ್ಟಣಿಗೆ ಬೆಳೇರಿ ನಿವಾಸಿ, ಪ್ರಗತಿಪರ ಕೃಷಿಕ ಸತ್ಯನಾರಾಯಣ ಬೆಳೇರಿ ಅವರ ಜೀವನಗಾಥೆಯಿದು. ವಿವಿಧ ಪ್ರದೇಶಗಳ 650ಕ್ಕೂ ಹೆಚ್ಚು ಭತ್ತದ ತಳಿಗಳನ್ನು ಪೋಷಿಸುವ ಮೂಲಕ ಕೃಷಿ ವಲಯಕ್ಕೆ ಮಹತ್ವದ ಕೊಡುಗೆ ಪರಿಗಣಿಸಿ 2024ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಪದ್ಮಶ್ರೀ ವಿಜೇತರಾದವರಿಗೆ ಇತರ ರಾಜ್ಯಗಳಲ್ಲಿ ಲಕ್ಷಾಂತರ ರೂ. ಬಹುಮಾನ ಪ್ರಕಟಿಸುವುದರ ಜತೆಗೆ ಮಾಸಿಕ ಪಿಂಚಣಿ ಘೋಷಿಸುತ್ತಿದ್ದಾರೆ. ಆದರೆ ಕೇರಳ ಸರ್ಕಾರ ಪದ್ಮಶ್ರೀ ವಿಜೇತರನ್ನು ಸನ್ಮಾನಿಸಲು ಮುಂದಾಗದಿರುವುದು ವಿಷಾದನೀಯ. ಸತ್ಯನಾರಾಯಣ ಬೆಳೇರಿ ಅವರನ್ನು ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಿಗೆ ಆಹ್ವಾನಿಸುತ್ತಿದ್ದರೂ ಯಾತ್ರಾ ಭತ್ಯೆ ನೀಡದೆ ಕಳುಹಿಸಿಕೊಡಲಾಗುತ್ತಿದೆ. ಬಹುತೇಕ ಕೃಷಿ ಇಲಾಖೆಯ ಕಾರ್ಯಕ್ರಮಗಳಿಗೆ ಪದ್ಮಶ್ರೀ ವಿಜೇತರನ್ನು ಆಹ್ವಾನಿಸಲಾಗುತ್ತದೆ. ಪತ್ನಿ, ಮೂವರು ಮಕ್ಕಳೊಂದಿಗೆ ತರವಾಡು ಮನೆಯಲ್ಲಿ ಜೀವನ ಸಾಗಿಸುತ್ತಿರುವ ಸತ್ಯನಾರಾಯಣ ಅವರಿಗೆ ಸ್ವಂತ ಮನೆಯ ಕನಸು ಇನ್ನೂ ನನಸಾಗಿಲ್ಲ. ಕೃಷಿಯೊಂದಿಗೆ ಕಲೆ, ಸಾಹಿತ್ಯ ಮೈಗೂಡಿಸಿಕೊಂಡು ಕೃಷಿಯೇತರ ಕೆಲಸಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ.

ರಬ್ಬರ್ ಟ್ಯಾಪಿಂಗ್ ನಡೆಸುತ್ತಿರುವ ಸತ್ಯನಾರಾಯಣ ಬೆಳೇರಿ.
ರಬ್ಬರ್ ಟ್ಯಾಪಿಂಗ್ ನಡೆಸುತ್ತಿರುವ ಸತ್ಯನಾರಾಯಣ ಬೆಳೇರಿ.

ಸವಾಲುಗಳ ಮಧ್ಯೆ ಕಾಯಕ

ಭತ್ತದ ತಳಿ ಸಂರಕ್ಷಣೆಯಲ್ಲಿ ಕೃಷಿ ವಿಶ್ವವಿದ್ಯಾಲಯ ನಡೆಸಬೇಕಾದ ಕೆಲಸವನ್ನು ಸತ್ಯನಾರಾಯಣ ಬೆಳೇರಿ ನಡೆಸುತ್ತಿದ್ದರೂ ಸರ್ಕಾರಕ್ಕೆ ಮನವರಿಕೆಯಾಗಿಲ್ಲ. ತಮ್ಮ ಸಾಧನೆಯನ್ನು ಇನ್ನೊಬ್ಬರ ಮುಂದೆ ಹೇಳಿಕೊಳ್ಳಲೂ ತಯಾರಾಗುತ್ತಿಲ್ಲ. ಸವಾಲುಗಳ ಮಧ್ಯೆ ತಮ್ಮ ಕಾಯಕ ಮುಂದುವರಿಸುತ್ತಿದ್ದಾರೆ. ತಳಿಗಳನ್ನು ಸಂರಕ್ಷಿಸಿಡಲು ಸ್ಥಳಾವಕಾಶದ ಕೊರತೆ ಕಾಡುತ್ತಿದೆ. ಇನ್ನು ತಳಿಗಳನ್ನು ಹಕ್ಕಿಗಳಿಂದ ಸಂರಕ್ಷಿಸುವುದು ಕಷ್ಟದಾಯಕ. ಇವೆಲ್ಲ ನಡೆಯಬೇಕಾದರೆ ಅವರಿಗೆ ಸರ್ಕಾರದ ನೆರವು ಅನಿವಾರ್ಯ. ಈ ಹಿಂದೆ ಕೂಲಿ ಕೆಲಸ ನಿರ್ವಹಿಸುತ್ತಿದ್ದು, ಜೀವನ ನಿರ್ವಹಣೆಗಾಗಿ ಇಂದು ತಮ್ಮದೇ ತೋಟದಲ್ಲಿ ರಬ್ಬರ್ ಟ್ಯಾಪಿಂಗ್ ನಡೆಸುತ್ತಿದ್ದಾರೆ.

ಕೃಷಿ ಸೇರಿದಂತೆ ನಾನಾ ಇಲಾಖೆ ವಿವಿಧೆಡೆ ಆಯೋಜಿಸುವ ಕಾರ್ಯಕ್ರಮಗಳಿಗೆ ತನಗೆ ಆಹ್ವಾನ ನೀಡುತ್ತಿದ್ದರೂ ಬಹುತೇಕ ಕಡೆ ಯಾತ್ರಾ ವೆಚ್ಚ ನೀಡುತ್ತಿಲ್ಲ. ಅಧ್ಯಯನ, ಸಂಶೋಧನೆ ಹೆಸರಲ್ಲಿ ವರ್ಷದಲ್ಲಿ ನೂರಕ್ಕೂ ಹೆಚ್ಚು ದಿನ ವಿದ್ಯಾರ್ಥಿಗಳು, ಅಧ್ಯಯನ ನಿರತರು ಆಗಮಿಸುತ್ತಿರುವುದರಿಂದ ಈ ದಿನಗಳಲ್ಲಿ ಕೆಲಸಕ್ಕೆ ತೆರಳದೆ ಇವರೊಂದಿಗೆ ಇರಬೇಕಾಗುತ್ತದೆ. ಇದರಿಂದ ಜೀವನ ನಿರ್ವಹಣೆಗೆ ಪ್ರಯಾಸ ಅನುಭವಿಸಬೇಕಾಗುತ್ತದೆ. ನಾನು ಆತ್ಮ ಸಂತೃಪ್ತಿಗಾಗಿ ತಳಿ ಸಂರಕ್ಷಣೆ ಕೆಲಸ ನಿರ್ವಹಿಸುತ್ತಿದ್ದೇನೆ. ಪ್ರಶಸ್ತಿಗಾಗಿ ಈ ಕೆಲಸ ಮಾಡಿಲ್ಲ. ಮುಂದಿನ ತಲೆಮಾರಿಗಾಗಿ ತಳಿ ಸಂರಕ್ಷಣೆ ಕೆಲಸ ಮುಂದುವರಿಸುತ್ತೇನೆ. ಸತ್ಯನಾರಾಯಣ ಬೆಳೇರಿ ಪದ್ಮಶ್ರೀ ಪುರಸ್ಕೃತ ಕೃಷಿಕ

---ಫೋಟೋ---

*ಕೆಎಸ್‌ಡಿ-7ಮೇ-2

*ಕೆಎಸ್‌ಡಿ-7ಮೇ-3

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುತ್ತಿರುವ ಸತ್ಯನಾರಾಯಣ ಬೆಳೇರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net