

ಮಂಡ್ಯ: ತಾಲೂಕಿನ ಮಾರದೇವನಹಳ್ಳಿಯಲ್ಲಿ ಸತ್ಯಸಾಯಿ ಶಾರದನಿಕೇತನಂ ಗುರುಕುಲಂನಲ್ಲಿ ಆಯೋಜಿಸಿದ್ದ ಭಾರತ, ವಿದೇಶಿ ನೋಟು ಮತ್ತು ಪ್ರಪಂಚದಾದ್ಯಂತ ಸಂಗ್ರಹಿಸಿದ ನಾಣ್ಯ ಹಾಗೂ ಅಂಚೆಚೀಟಿಗಳ ಪ್ರದರ್ಶನ ಗಮನಸೆಳೆಯಿತು.
ಪ್ರಶಾಂತಿ ಬಾಲ ಮಂದಿರ ಟ್ರಸ್ಟ್, ಸತ್ಯಸಾಯಿ ಸರಸ್ವತಿ ಶಿಕ್ಷಣ ಟ್ರಸ್ಟ್ ಹಾಗೂ ಗುರುಕುಲಂನ 250 ವಿದ್ಯಾರ್ಥಿಗಳೊಳಗೂಡಿ ಆಯೋಜಿಸಿದ್ದ ಪ್ರದರ್ಶನವನ್ನು ಮಂಡ್ಯ, ಮದ್ದೂರು, ಮಳವಳ್ಳಿ ಮತ್ತು ಮೈಸೂರು ತಾಲೂಕಿನ 20ಕ್ಕೂ ಹೆಚ್ಚು ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ವೀಕ್ಷಿಸಿದರು. ಈ ವೇಳೆ ಪ್ರಶ್ನೋತ್ತರ ಅವಧಿ ನಡೆಯಿತು. ಸರಿಯಾದ ಉತ್ತರ ಕೊಟ್ಟವರಿಗೆ ಬಹುಮಾನ ನೀಡಲಾಯಿತು. ಪ್ರದರ್ಶನದ ನಂತರ ವಿವಿಧ ಶಾಲೆಗಳಿಂದ ಆಗಮಿಸಿದ್ದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಫೋಟೋ ಸೆಷನ್‌ಗಳ ಜತೆಗೆ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಭಾರತೀಯ ರಿಸರ್ವ್ ಬ್ಯಾಂಕ್‌ನ ನಿವೃತ್ತ ಮ್ಯಾನೇಜರ್, ನಾಣ್ಯಶಾಸ್ತ್ರಜ್ಞ ಟಿ.ಎನ್.ಅಶೋಕ್, ಕೊಟಕ್ ಮಹೀಂದ್ರಾ ಬ್ಯಾಂಕ್‌ನ ನಿವೃತ್ತ ಮ್ಯಾನೇಜರ್, ನಾಣ್ಯಶಾಸ್ತ್ರಜ್ಞ ಎಂ.ಎನ್.ಮುರಳಿಕೃಷ್ಣ, ಹಿರಿಯ ಅಂಚೆಚೀಟಿ ತಜ್ಞ ಪಿ.ಸುಬ್ರಮಣ್ಯಂ ಪ್ರದರ್ಶನಕ್ಕೆ ಚಾಲನೆ ನೀಡಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜತೆಗೆ ನಾಣ್ಯಗಳು, ನೋಟುಗಳು ಮತ್ತು ಅಂಚೆಚೀಟಿಗಳ ಬಗ್ಗೆ ಸಂಕ್ಷಿಪ್ತ ಇತಿಹಾಸವನ್ನು ವಿವರಿಸಿದರು.