ಸರ್ಕಾರ ಕೊಟ್ಟರೂ ಹಣ ಕೊಡದ ರೇಷ್ಮೆ ಇಲಾಖೆ: ಬೆಳೆಗಾರರಿಗೆ ಪ್ರೋತ್ಸಾಹಧನ ಸಿಗದೆ ಸಂಕಷ್ಟ

09-09-rama-silk
Published on

ರಾಮನಗರ: ದೇವರು ಕೊಟ್ಟರು ಪೂಜಾರಿ ಕೊಡುವುದಿಲ್ಲ ಎನ್ನುವ ಮಾತಿದೆ. ಇದೀಗ ರೇಷ್ಮೆ ಬೆಳೆಗಾರರ ಸ್ಥಿತಿಯೂ ಇದಕ್ಕಿಂತ ಹೊರತಾಗಿಲ್ಲ. ಸಂಕಷ್ಟದಲ್ಲಿರುವ ಬೆಳೆಗಾರರಿಗೆ ಸರ್ಕಾರ ಹಣ ಬಿಡುಗಡೆ ಮಾಡಿ ತಿಂಗಳು ಕಳೆಯುತ್ತಿದ್ದರೂ ಮಾರ್ಗಸೂಚಿ ನೆಪದಲ್ಲಿ ಹಣ ನೀಡಲು ಇಲಾಖೆ ಹಿಂದು ಮುಂದು ನೋಡುತ್ತಿದೆ.

ರೇಷ್ಮೆ ಬೆಲೆ ಕುಸಿತವಾಗಿರುವ ಕಾರಣ ಸರ್ಕಾರ ಪ್ರೋತ್ಸಾಹಧನದ ರೂಪದಲ್ಲಿ 30 ಕೋಟಿ ರೂ.ಗಳನ್ನು ಆ.13ರಂದೇ ಬಿಡುಗಡೆ ಮಾಡಿದೆ. ಆದರೆ, ತಿಂಗಳು ಕಳೆಯುತ್ತಿದ್ದರೂ ಇಲಾಖೆ ಅಧಿಕಾರಿಗಳು ನಿಯಮಗಳ ಹೆಸರಲ್ಲಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.

ನಿಯಮಗಳ ಸರಮಾಲೆ: ಮಾರುಕಟ್ಟೆಯಲ್ಲಿ ರೈತರು ಗೂಡು ಮಾರಾಟ ಮಾಡಿದ ಮೇಲೆ ಹಣ ಸಂದಾಯ ಮಾಡಬೇಕಾದ್ದು ಇಲಾಖೆ ಕೆಲಸ. ಆದರೆ ರೈತರಿಗೆ ಪ್ರೋತ್ಸಾಹಧನ ನೀಡಲು ಚಾಕಿ ಖರೀದಿ ರಸೀದಿಯಿಂದ ಹಿಡಿದು, ಬ್ಯಾಂಕ್ ಖಾತೆ ದಾಖಲೆವರೆಗೂ ಮಾಹಿತಿ ನೀಡಬೇಕು. ಇಂತಿಷ್ಟು ಪ್ರಮಾಣದ ಗೂಡಿಗೆ ಮಾತ್ರವೇ ಪ್ರೋತ್ಸಾಹಧನ ನೀಡುತ್ತೇವೆ. ಹಾಗೂ ಮಿಶ್ರ ತಳಿಗೆ ಗರಿಷ್ಠ 300 ರೂ. ಹಾಗೂ ದ್ವಿತಳಿಗೆ 350 ರೂ. ಮೀರಿದರೆ ಪ್ರೋತ್ಸಾಹಧನ ನೀಡುವುದಿಲ್ಲ ಎನ್ನುವ ನಿಯಮಗಳನ್ನು ಜಾರಿಗೆ ತಂದಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.

ಆಯುಕ್ತರಿಗೆ ಅಹವಾಲು: ಪ್ರೋತ್ಸಾಹಧನ ನೀಡುವಲ್ಲಿ ವಿಳಂಬ ಮಾಡುತ್ತಿರುವ ಇಲಾಖೆ ಧೋರಣೆಗೆ ಬೇಸತ್ತ ರೇಷ್ಮೆ ಬೆಳೆಗಾರರು ಮಂಗಳವಾರ ರೇಷ್ಮೆ ಇಲಾಖೆ ಆಯುಕ್ತೆ ಸಿ.ಪಿ. ಶೈಲಜಾ ಅವರ ಬಳಿ ನೋವು ಹೇಳಿಕೊಂಡಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಸುಮ್ಮನಿರುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ಬೇಡಿಕೆ ಏನು?: ಚಾಕಿ ಖರೀದಿ ರಸೀದಿ ಕೇಳುವುದು, ಎಲ್ಲ ಮಾಹಿತಿಯನ್ನು ಸ್ಥಳೀಯ ರೇಷ್ಮೆ ಅಧಿಕಾರಿಗಳಿಗೆ ರೈತರೇ ಖುದ್ದು ತಲುಪಿಸುವುದು, ಇಂತಿಷ್ಟೇ ಪ್ರಮಾಣದ ಗೂಡಿಗೆ ಮಾತ್ರ ಪ್ರೋತ್ಸಾಹಧನ ನೀಡುವುದು ಹಾಗೂ ಒಂದು 1-2 ರೂ. ವ್ಯತ್ಯಾಸದಲ್ಲಿ ಪ್ರೋತ್ಸಾಹಧನ ವಂಚಿತರಾಗುವಂತೆ ಮಾಡುವುದನ್ನು ತಡೆಯಬೇಕು ಎನ್ನುವುದು ರೈತರ ಆಗ್ರಹವಾಗಿದೆ ಹಾಗೂ ಎಲ್ಲ ನಿಯಮಗಳನ್ನು ಸಡಿಲಗೊಳಿಸುವಂತೆಯೂ ಒತ್ತಾಯಿಸಿದ್ದಾರೆ.

ರೈತರು ಎಷ್ಟು ಗೂಡು ಮಾರಾಟ ಮಾಡಿದ್ದಾರೆ ಎನ್ನುವ ಮಾಹಿತಿ ಮಾರುಕಟ್ಟೆಯಲ್ಲಿಯೇ ಲಭ್ಯವಿದೆ. ಬ್ಯಾಂಕ್ ಖಾತೆ ಇಲ್ಲವಾದರೆ ಪಡೆದು ಕೊಳ್ಳಬೇಕು ಹಾಗೂ ಮಾರುಕಟ್ಟೆ ಪಾಸ್‌ಬುಕ್ ಪ್ರತಿಯನ್ನು ಪಡೆದು ಪ್ರೋತ್ಸಾಹಧನ ನೀಡಬೇಕು. ಮಾರಾಟ ಮಾಡಿರುವ ಅಷ್ಟೂ ಪ್ರಮಾಣದ ಗೂಡಿಗೆ ಪ್ರೋತ್ಸಾಹಧನ ನೀಡಬೇಕು. ಹಾಗೂ 300 ರೂ. ಮತ್ತು 350 ರೂ. ನಿಗದಿಮಾಡಲಾಗಿದೆ. ಮಿಶ್ರ ತಳಿ ಗೂಡು 299 ರೂ.ಗಳಿಗೆ ಮಾರಾಟ ಮಾಡಿದರೆ ಮಾತ್ರ ಪ್ರೋತ್ಸಾಹ ಧನ ದೊರೆಯಲಿದೆ. ಆದರೆ 300 ರೂ.ಗೆ ಮಾರಾಟ ಮಾಡಿದ ರೈತರಿಗೆ ಪರಿಹಾರ ದೊರೆಯುವುದಿಲ್ಲ, ಇಂಥ ಸಮಸ್ಯೆಗೆ ಉತ್ತರ ಕಂಡುಕೊಳ್ಳಬೇಕೆಂಬುದು ರೈತರ ಬೇಡಿಕೆಯಾಗಿದೆ.

ಮಾರ್ಗಸೂಚಿ ಹೆಸರಲ್ಲಿ ರೈತರಿಗೆ ಇನ್ನೂ ರೇಷ್ಮೆಗೂಡು ಮಾರಾಟದ ಪ್ರೋತ್ಸಾಹಧನ ದೊರೆತಿಲ್ಲ. ಇರುವ ಮಾರ್ಗಸೂಚಿಗಳೂ ರೈತರ ಪರವಾಗಿಲ್ಲ. ಇವುಗಳನ್ನು ಬದಲಾವಣೆ ಮಾಡುವಂತೆ ಕೋರಿದ್ದೇವೆ. ಕೆ.ರವಿ ರೇಷ್ಮೆ ಮಾರುಕಟ್ಟೆ ಸಲಹಾ ಸಮಿತಿ ಸದಸ್ಯ, ರಾಮನಗರ ರೈತರ ಬೇಡಿಕೆಗಳನ್ನು ಗಮನಿಸಿ ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಸಿ.ಪಿ.ಶೈಲಜಾ, ಆಯುಕ್ತರು, ರೇಷ್ಮೆ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net