ಸಾರಿ, ಐಎಲ್‌ಐ ಪ್ರಕರಣ ಶೇ. 10 ಹೆಚ್ಚಳ

New Project (23)
Published on

ಬೆಂಗಳೂರು: ಚಳಿಗಾಲದ ಜತೆಗೆ ಚಂಡಮಾರುತ ಹಾಗೂ ವಾಯುಭಾರ ಕುಸಿತದಿಂದಾಗಿ ರಾಜ್ಯದಲ್ಲಿ ಕಳೆದ ಎರಡು ವಾರಗಳಿಂದ ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಹಾಗೂ ಶೀತಜ್ವರ (ಐಎಲ್‌ಐ) ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಈ ಸಮಸ್ಯೆಗಳಿಂದ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣ ಶೇ. 10 ಏರಿಕೆಯಾಗಿದೆ.

ನಗರದ ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆ ಒಂದರಲ್ಲೇ ನಿತ್ಯ ದಾಖಲಾಗುವ ರೋಗಿಗಳಲ್ಲಿ ಸಾರಿ ಮತ್ತು ಐಎಲ್‌ಐ ಹೊಂದಿರುವ ರೋಗಿಗಳ ಸಂಖ್ಯೆ 10-15 ಏರಿಕೆಯಾಗಿದೆ. ಇದೇ ಅಲ್ಲದೆ ವಿಕ್ಟೋರಿಯಾ, ಬೌರಿಂಗ್, ಕೆ.ಸಿ. ಜನರಲ್ ಸೇರಿ ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಾಳಿಗಾಲದಲ್ಲಿ ವೈರಾಣು ಜ್ವರ ಸಾಮಾನ್ಯವಾಗಿದ್ದು, ರೋಗನಿರೋಧಕ ಶಕ್ತಿ ಕುಂದಿದವರು, ದೀರ್ಘಕಾಲೀನ ಅನಾರೋಗ್ಯ ಹೊಂದಿದವರು, ವೃದ್ಧರಲ್ಲಿ ಶೀತ ಸಂಬಂಧಿ ಸಮಸ್ಯೆಗಳು ಕಾಡಲಿವೆ. ಅಸ್ತಮಾ ರೋಗಿಗಳಿತೂ ತೊಂದರೆ ಹೆಚ್ಚು. ಮಕ್ಕಳಲ್ಲೂ ನೆಗಡಿ, ಕೆಮ್ಮು, ವೈರಾಣು ಜ್ವರ, ನ್ಯುಮೋನಿಯಾದಂತಹ ಸಮಸ್ಯೆಗಳು ವರದಿಯಾಗುತ್ತಿದ್ದು, ಹೆಚ್ಚಿನ ಎಚ್ಚರಿಕೆ ವಹಿಸುವ ಅಗತ್ಯವಿದೆ. ಈ ಕಾಲದಲ್ಲಿ ವೃದ್ಧರು ಬೆಚ್ಚಗೆ ಇರುವಂತೆ ನೋಡಿಕೊಳ್ಳಬೇಕು ಎನ್ನುತ್ತಾರೆ ವೈದ್ಯರು.

ರೋಗ ಲಕ್ಷಣಗಳು: ಜ್ವರ, ನೆಗಡಿ, ಕೆಮ್ಮು, ತಲೆನೋವು, ಉಸಿರಾಟದಲ್ಲಿ ತೊಂದರೆ ಇಂತಹ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷ್ಯ ಮಾಡದೆ, ಸ್ವಯಂಚಿಕಿತ್ಸೆ ಪಡೆಯದೆ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು. ಅಸ್ತಮಾ, ಅಲರ್ಜಿ ಸೇರಿ ಶೀತ ಸಂಬಂಧಿ ಸಮಸ್ಯೆ ಇರುವವರು ಆರೋಗ್ಯದ ಬಗ್ಗೆ ಹೆಚ್ಚಿನ ಗಮನವಹಿಸಬೇಕು.

ಎಚ್ಚರಿಕೆ ಕ್ರಮಗಳು

* ವೈಯಕ್ತಿಕ ಸ್ವಚ್ಛತೆಯ ಜೊತೆಗೆ ಮನೆಯಿಂದ ಹೊರಗೆ ಹೋಗುವಾಗ ತಪ್ಪದೇ ಮಾಸ್ಕ್ ಧರಿಸಿ.

* ಕೆಮ್ಮುವಾಗ, ಸೀನುವಾಗ ಟಿಶ್ಯೂ ಬಳಕೆ ಮಾಡಿ. ಆಗಾಗ್ಗೆ ಕೈಗಳನ್ನು ಸಾಬೂನು ಬಳಸಿ ತೊಳೆದುಕೊಳ್ಳಿ.

* ಅಸ್ತಮಾ ಹಾಗೂ ಅಲರ್ಜಿ ಇರುವವರು ನಿಯಮತ ಔಷಧ ತೆಗೆದುಕೊಳ್ಳಬೇಕು.

* ಮನೆಯಲ್ಲಿ ತಯಾರಿಸಿದ ಆಹಾರ ಸೇವನೆಗೆ ಆದ್ಯತೆ ಇರಲಿ.

* ಕುದಿಸಿ ಆರಿಸಿದ ನೀರನ್ನು ಕುಡಿಯಿರಿ.

* ಹೊರಗಿನ ಆಹಾರ ಹಾಗೂ ಎಣ್ಣೆಯಲ್ಲಿ ಕರಿದ ಮತ್ತು ಮಸಾಲೆ ಪದಾರ್ಥ ಸೇವನೆ ಬೇಡ.

* ಜನಸಂದಣಿಯಲ್ಲಿದ್ದಾಗ ಸಾಧ್ಯವಾದಷ್ಟು ವ್ಯಕ್ತಿಗತ ಅಂತರ ಕಾಯ್ದುಕೊಳ್ಳಿ.

* ಚಳಿಯಿಂದ ರಕ್ಷಿಸಿಕೊಳ್ಳಲು ವುಲ್ಲನ್ ಬಟ್ಟೆಗಳನ್ನು ಬಳಸಿ.

* ಋತುಮಾನಕ್ಕೆ ಅನುಗುಣವಾಗಿ ದೊರೆಯುವ ಹಣ್ಣು ಮತ್ತು ತರಕಾರಿ ಸೇವಿಸಿ.

ಕೋಟ್ :

ಚಳಿಗಾದಲ್ಲಿ ಸಾರಿ ಮತ್ತು ಐಎಲ್‌ಐ ಸೇರಿ ವೈರಾಣು ಜ್ವರ ಪ್ರಕರಣಗಳು ಸಾಮಾನ್ಯ. ಅಸ್ತಮಾ ರೋಗಿಗಳು ಹಾಗೂ ಅನಾರೋಗ್ಯ ಪರೀಡಿತರು ಎಚ್ಚರ ವಹಿಸುವ ಅಗತ್ಯವಿದೆ.

-ಡಾ. ನಾಗರಾಜ್, ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆ ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net