

ಗಂಗೊಳ್ಳಿ: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಮೀನುಗಾರಿಕಾ ಬಂದರು ಪ್ರದೇಶವಾಗಿರುವ ಗಂಗೊಳ್ಳಿಯಲ್ಲಿ ಎಲ್ಲ ರೀತಿಯ ವರ್ಗಗಳ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ನೀಡುತ್ತಿರುವ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಗ್ರಾಮೀಣ ಮಕ್ಕಳ ಭರವಸೆಯ ಆಶಾಕಿರಣವಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸುತ್ತಿದೆ. ರಾಜ್ಯಮಟ್ಟದಲ್ಲಿ ಪ್ರಥಮ ರ‌್ಯಾಂಕ್‌ಗೆ ಭಾಜನವಾದ ಕುಂದಾಪುರ ಮತ್ತು ಬೈಂದೂರು ತಾಲೂಕಿನ ಏಕೈಕ ಪದವಿಪೂರ್ವ ಕಾಲೇಜು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
1971ರಲ್ಲಿ ಸ್ಥಾಪನೆಯಾದ ಸರಸ್ವತಿ ವಿದ್ಯಾಲಯ ವಿದ್ಯಾಸಂಸ್ಥೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಭರವಸೆಯ ಆಶಾಕಿರಣವಾಗಿದೆ. ಸುದೀರ್ಘ ಶೈಕ್ಷಣಿಕ ಅನುಭವ ಹೊಂದಿರುವ ಜಿ.ಎಸ್.ವಿ.ಎಸ್ ಅಸೋಸಿಯೇಷನ್ ಆಡಳಿತಕ್ಕೆ ಒಳಪಟ್ಟಿರುವ ಸರಸ್ವತಿ ವಿದ್ಯಾಲಯ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಪೂರಕ ಅವಕಾಶ ಒದಗಿಸುತ್ತಾ ಬಂದಿದೆ. ರಾಜ್ಯಮಟ್ಟದಲ್ಲಿ ಪ್ರಥಮ ರ‌್ಯಾಂಕ್ ಗಳಿಸಿದ ಕೀರ್ತಿ ಹೊಂದಿರುವ ಸರಸ್ವತಿ ವಿದ್ಯಾಲಯ ಹಲವಾರು ವರ್ಷಗಳಿಂದಲೂ ಪಿಯುಸಿ ಫಲಿತಾಂಶದಲ್ಲಿ ಉತ್ತಮ ಸಾಧನೆ ದಾಖಲಿಸುತ್ತಾ ಬಂದಿದೆ. ವರ್ಷ ವರ್ಷವೂ ಮೊದಲ ಹತ್ತು ರ‌್ಯಾಂಕ್‌ಗಳಲ್ಲಿ ಕಾಲೇಜಿನ ವಿದ್ಯಾರ್ಥಿಗಳಿರುವುದು ಇಲ್ಲಿನ ಶಿಕ್ಷಣದ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.90.48 ಫಲಿತಾಂಶ ದಾಖಲಿಸಿದೆ.
ಉತ್ತಮ ಗ್ರಂಥಾಲಯ ಸೌಲಭ್ಯವನ್ನು ಕಾಲೇಜು ಹೊಂದಿದೆ. ಇಲ್ಲಿನ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಅನುಭವಿ ಉಪನ್ಯಾಸಕರಿಂದ ಸಿಇಟಿ ಮತ್ತು ನೀಟ್ ತರಬೇತಿ ನೀಡಲಾಗುತ್ತದೆ. ಕ್ರೀಡೆಗಳು ಮತ್ತು ಪಠ್ಯೇತರ ಚಟುವಟಿಕೆಗಳಿಗೆ ವಿಶೇಷ ಪ್ರೋತ್ಸಾಹ ನೀಡಲಾಗುತ್ತಿದ್ದು, ಅದಕ್ಕೆ ಪೂರಕವಾಗಿ ಉತ್ತಮ ಹೊರಾಂಗಣ ಮತ್ತು ಒಳಾಂಗಣ ಕ್ರೀಡಾಂಗಣವಿದೆ. ಎನ್‌ಎಸ್‌ಎಸ್ ಮೂಲಕ ವಿದ್ಯಾರ್ಥಿಗಳಲ್ಲಿ ಸಹಕಾರ ಸೇವಾ ಮನೋಭಾವನೆ ಬೆಳೆಸಲಾಗುತ್ತಿದೆ. ಕಾಲೇಜಿನ ಸಾಹಿತ್ಯ ಪ್ರತಿಭೆಗಳಿಗಾಗಿ ವಾರ್ಷಿಕ ವಿಶೇಷಾಂಕ ‘ದೃಷ್ಟಿ’ಯನ್ನು ಹೊರತರಲಾಗುತ್ತಿದೆ. ಸಾಹಿತ್ಯ ಸಂಘವೂ ಸಾಹಿತ್ಯ ಚಟುವಟಿಕೆಗೆ ಪೂರಕವಾಗಿದೆ.
ಯಕ್ಷಗಾನ ತರಬೇತಿ ಹಾಗೂ ವಿವಿಧ ರೀತಿಯ ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಅರ್ಹ ವಿದ್ಯಾರ್ಥಿಗಳಿಗೆ 8 ಲಕ್ಷ ರೂ.ಗೂ ಮಿಕ್ಕಿ ವಿದ್ಯಾರ್ಥಿವೇತನ ಹಾಗೂ ಮಧ್ಯಾಹ್ನದ ಉಚಿತ ಭೋಜನ ವ್ಯವಸ್ಥೆ ಮತ್ತು ಶಾಲಾ ಬಸ್ ಸೌಲಭ್ಯ ಕೂಡ ಕಲ್ಪಿಸಲಾಗಿದೆ. ವಿಜ್ಞಾನ ವಿಭಾಗದಲ್ಲಿ ಪಿಸಿಎಂಸಿ ಮತ್ತು ಪಿಸಿಎಂಬಿ, ವಾಣಿಜ್ಯ ವಿಭಾಗದಲ್ಲಿ ಎಚ್‌ಇಬಿಎ, ಇಬಿಎಸಿ ಮತ್ತು ಇಬಿಎಎಸ್ ಕೋರ್ಸ್ ಲಭ್ಯವಿದೆ. ದ್ವಿತೀಯ ಭಾಷೆಯಾಗಿ ಕನ್ನಡ, ಹಿಂದಿ ಅಥವಾ ಸಂಸ್ಕೃತ ಕಲಿಕೆಗೆ ಅವಕಾಶವಿದೆ. ಮಾಹಿತಿಗೆ ಕಾಲೇಜಿನ ದೂರವಾಣಿ ಸಂಖ್ಯೆ 08254-265043 ಅಥವಾ 9480524651 ನ್ನು ಸಂಪರ್ಕಿಸಬಹುದು.
ಪ್ರತಿ ತರಗತಿಗಳಲ್ಲೂ ಸ್ಮಾರ್ಟ್ ಕ್ಲಾಸ್‌ಗಳನ್ನು ಅಳವಡಿಸಿಕೊಂಡಿರುವ ಕಾಲೇಜು ಆ ಮೂಲಕ ಮಕ್ಕಳಿಗೆ ಆಧುನಿಕ ಮಾದರಿಯಲ್ಲಿ ಶಿಕ್ಷಣ ನೀಡುತ್ತಿದೆ. ವಿಶೇಷವಾಗಿ ನವೀಕರಿಸಲಾಗಿರುವ ಅತ್ಯುತ್ತಮ ಗುಣಮಟ್ಟದ ಜೀವಶಾಸ್ತ್ರ, ರಸಾಯನಶಾಸ್ತ್ರ, ಭೌತಶಾಸ್ತ್ರ ಮತ್ತು ಗಣಕ ವಿಜ್ಞಾನ ಪ್ರಯೋಗಾಲಯ ಹೊಂದಿರುವ ಕಾಲೇಜು ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಿದೆ. ಅನುಭವಿ ಮತ್ತು ನುರಿತ ಸಮರ್ಪಣಾ ಮನೋಭಾವದ ಉಪನ್ಯಾಸಕ ವೃಂದ ಉತ್ತಮ ಫಲಿತಾಂಶದ ಜತೆ ಜತೆಗೆ ವಿದ್ಯಾರ್ಥಿಗಳ ಉತ್ತಮ ಭವಿಷ್ಯ ರೂಪಿಸುವಲ್ಲಿ ಕಾಳಜಿ ವಹಿಸುತ್ತಿರುವುದು ಕಾಲೇಜಿನ ಹೆಗ್ಗಳಿಕೆ.