ಭಾರತೀಯ ಧರ್ಮ ಪ್ರಪಂಚಕ್ಕೆ ಆಧಾರ : ಶೃಂಗೇರಿ ಶ್ರೀ ವಿಧುಶೇಖರ ಭಾರತೀ ಸ್ವಾಮೀಜಿ ಆಶೀರ್ವಚನ

New Project (15)
Published on

ವಿಜಯವಾಣಿ ಸುದ್ದಿಜಾಲ ಬಂಟ್ವಾಳ

ಧರ್ಮಾಚರಣೆಯಿಂದ ಮನುಷ್ಯನಿಗೆ ಶ್ರೇಯಸ್ಸು, ಧರ್ಮದಿಂದಲೇ ಸುಖ. ಇಂದಿನ ಜಗತ್ತಿನಲ್ಲಿ ಹಲವಾರು ಸೌಕರ್ಯಗಳಾಗಿದ್ದರೂ ಅಧರ್ಮ ದುಃಖಕ್ಕೆ ಕಾರಣವಾಗಿದೆ. ಭಾರತೀಯ ಧರ್ಮ ಪ್ರಪಂಚಕ್ಕೆ ಆಧಾರವಾಗಿದ್ದು, ಸನಾತನ ಧರ್ಮ ರಕ್ಷಣೆ ಎಲ್ಲರ ಕರ್ತವ್ಯ ಎಂದು ಶೃಂಗೇರಿ ಶಾರದಾ ಪೀಠಾಧೀಶ್ವರ ಶ್ರೀ ಶಂಕರ ಮಹಾ ಸಂಸ್ಥಾನದ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾ ಸ್ವಾಮೀಜಿ ಹೇಳಿದರು.

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಸರಸ್ವತಿ ಮಂಟಪ ಮತ್ತು ಶಂಕರಾಚಾರ್ಯ ಸಭಾ ಮಂಟಪ ಲೋಕಾರ್ಪಣೆಗೊಳಿಸಿದ ಬಳಿಕ ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಏರ್ಪಡಿಸಲಾದ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಡಾ.ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕುಟುಂಬ ಪ್ರಭೋದನ್ ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಮುಂಬೈ ಉದ್ಯಮಿ ರವಿಕಾಂತ ಮಿಶ್ರ, ವಿಜಯ ಕಲಾಂತ್ರಿ, ನವದೆಹಲಿ ಉದ್ಯಮಿ ಸಿದ್ಧಾರ್ಥ, ಬೆಂಗಳೂರಿನ ಉದ್ಯಮಿಗಳಾದ ಅಂಜನಾ ಕಿಣಿ, ಗಿರೀಶ್ ರಾವ್, ಬಾಲಕೃಷ್ಣ ಭಂಡಾರಿ, ವಿದ್ಯಾಕೇಂದ್ರದ ಅಧ್ಯಕ್ಷ ನಾರಾಯಣ ಸೋಮಯಾಜಿ ಮೊದಲಾದವರಿದ್ದರು. ಶ್ರೀರಾಮ ವಿದ್ಯಾಕೇಂದ್ರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೃಷ್ಣಪ್ರಸಾದ್ ಕಾಯರಕಟ್ಟೆ ಕಾರ್ಯಕ್ರಮ ನಿರೂಪಿಸಿದರು.

ಸರಸ್ವತಿ ದೇವಿಗೆ ಪೂಜೆ

ಶೃಂಗೇರಿ ಮಹಾಸಂಸ್ಥಾನದ ಶ್ರೀಗಳು ಶ್ರೀರಾಮ ಶಿಶುಮಂದಿರ ಹಾಗೂ ಶ್ರೀರಾಮ ಪ್ರಾಥಮಿಕ ಶಾಲಾ ಮುಂಭಾಗದಲ್ಲಿ ನೂತನವಾಗಿ ನಿರ್ಮಿಸಿದ ಶಿಲಾಮಯ ಸರಸ್ವತಿ ಮಂಟಪದ ಪರದೆ ಅನಾವರಣಗೊಳಿಸಿ ಅಮೃತ ಶಿಲೆಯಲ್ಲಿ ನಿರ್ಮಿತವಾದ ಸರಸ್ವತಿ ದೇವಿಗೆ ಪೂಜೆ ಸಲ್ಲಿಸಿ, ಆರತಿ ಬೆಳಗಿದರು. ಬಳಿಕ ಶಿಶುಮಂದಿರ ಮತ್ತು ಪೂರ್ವಗುರುಕುಲದ ಪುಟಾಣಿಗಳ ಚಟುವಟಿಕೆಗಳನ್ನು ವೀಕ್ಷಿಸಿ ಮಾಹಿತಿ ಪಡೆದರು. ಶ್ರೀರಾಮ ಆಂಗ್ಲ ಮಾಧ್ಯಮದ ನೂತನ ಸಭಾಭವನ ಶಂಕರಾಚಾರ್ಯವನ್ನು ಉದ್ಘಾಟಿಸಿದ ಸ್ವಾಮೀಜಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net