

ವಿಜಯವಾಣಿ ಸುದ್ದಿಜಾಲ ಉಡುಪಿ
ತ್ರೇತಾಯುಗ ಹಾಗೂ ದ್ವಾಪರಯುಗದಲ್ಲಿ ಹೋಮ, ಯಜ್ಞ-ಯಾಗಾದಿಗಳಿಂದ ದೇವರನ್ನು ಒಲಿಸಿಕೊಳ್ಳುತ್ತಿದ್ದರು. ಆದರೆ, ಈಗಿನ ಕಲಿಯುಗದಲ್ಲಿ ಭಜನೆಯಿಂದ ದೇವರ ಒಲುಮೆ ಗಳಿಸಿಕೊಳ್ಳಲು ಸಾಧ್ಯವಿದೆ. ಹೀಗಾಗಿ ಭಜನೆ ಎನ್ನುವುದು ಪ್ರಸ್ತುತವಾಗಿದ್ದು, ಕುಣಿತ ಭಜನೆ ಅತ್ಯಂತ ವಿಶೇಷ ಹಾಗೂ ಶ್ರೇಷ್ಠವಾದ ಆಚರಣೆಯಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.
ಕುಣಿತ ಭಜನಾ ತಂಡಗಳಿಗೆ ತಾಳಗಳನ್ನು ಹಸ್ತಾಂತರಿಸುವ ಮೂಲಕ ನಿತ್ಯ ಭಜನಾ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಶ್ರೀಗಳು, ಶ್ರೀಕೃಷ್ಣನ ಸಪ್ತೋತ್ಸವದಲ್ಲಿ ಸಾರ್ವಜನಿಕರು ಭಾಗವಹಿಸಬೇಕೆಂಬ ಆಶಯದಿಂದ ಕುಣಿತ ಭಜನೆ ಆಯೋಜಿಸಲಾಗಿದೆ. ನಿತ್ಯವೂ ಕನಿಷ್ಠ 3 ಕುಣಿತ ಭಜನಾ ತಂಡಗಳು ರಥಬೀದಿಯಲ್ಲಿ ಪ್ರದಕ್ಷಿಣೆ ಹಾಕುತ್ತ ಭಜನೆ ಮಾಡಲಿದ್ದಾರೆ. ಎಲ್ಲರೂ ಏಕಕಾಲದಲ್ಲಿ ದೇವರನ್ನು ಭಜಿಸುವುದರಿಂದ ಸುತ್ತಲಿನ ಪರಿಸರಕ್ಕೂ ಒಳಿತಾಗುತ್ತದೆ. ಇದೊಂದು ಪುಣ್ಯ ಗಳಿಸುವ ಕಾರ್ಯ ಎಂದರು.
ಭಜನಾ ತಂಡದ ಮುಖ್ಯಸ್ಥರಾದ ನಿವೃತ್ತ ಸೈನಿಕ ಕೇಶವ ಆಚಾರ್ಯ ದೊಡ್ಡನಗುಡ್ಡೆ, ರತ್ನಾಕರ ಶೆಟ್ಟಿಗಾರ್ ಇಂದ್ರಾಳಿ, ವಿಜಯ ಶೆಟ್ಟಿ ಕೊಂಡಾಡಿ, ಶಿವಕುಮಾರ ಅಂಬಲಪಾಡಿ, ಸತೀಶ್ ಕುಮಾರ್, ಪ್ರಶಾಂತ್ ಅಂಜಾರ್, ಹರಿಕೃಷ್ಣ ಶಿವತ್ತಾಯ, ಮಠದ ದಿವಾನ ನಾಗರಾಜ ಆಚಾರ್ಯ, ವಿದೇಶ ಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ್ ಭಟ್, ಶ್ರೀಪಾದ್ ಭಟ್, ವಿವಿಧ ಭಜನಾ ತಂಡಗಳ ಮಹಿಳಾ ಹಾಗೂ ಪುರುಷ ಸದಸ್ಯರು ಇದ್ದರು.
ಕಲಾ ಸಂಗಮ ಭಜನಾ ಮಂಡಳಿ ಕುತ್ಪಾಡಿ ಉದ್ಯಾವರ, ಶ್ರೀ ವೀರಭದ್ರ ಭಜನಾ ಮಂಡಳಿ ಮುದ್ರಾಡಿ, ಮತ್ತು ಶ್ರೀ ಮಹಿಷಮರ್ಧಿನಿ ಮಹಿಳಾ ಭಜನಾ ಮಂಡಳಿ ಇಂದ್ರಾಳಿ ತಂಡಗಳಿಂದ ರಥಬೀದಿಯಲ್ಲಿ ಕುಣಿತ ಭಜನೆ ನಡೆಯಿತು. ಜ.12ರಂದು ರಥಬೀದಿಯ ಸುತ್ತ 24 ತಂಡಗಳಿಂದ ವಿಶೇಷ ಕುಣಿತ ಭಜನೆ ನಡೆಯಲಿದೆ.
ಸಂಕ್ರಾಂತಿಯ ನಿಮಿತ್ತ ಜ.14 ಮತ್ತು 15ರಂದು ನಡೆಯಲಿರುವ ಮೂರು ತೇರು ಉತ್ಸವ ಹಾಗೂ ಚೂರ್ಣೋತ್ಸವ (ಹಗಲು ತೇರು)ದಲ್ಲಿ ಆಸ್ಟ್ರೆಲಿಯಾದ ವಿಕ್ಟೋರಿಯಾ ರಾಜ್ಯದ ಪ್ರಸಕ್ತ ಸಂಸದ ಜಾನ್ ಮುಲಾಯ್ ಹಾಗೂ ಕೃಷ್ಣನ ಪರಮ ಭಕ್ತ, ಗೌಡೀಯ ಮಾಧ್ವ ಮಠದ ಪುಂಡರೀಕ ಗೋಸ್ವಾಮಿ ಪಾಲ್ಗೊಳ್ಳಲಿದ್ದಾರೆ.