

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ದುನಿಯಾ ಸೂರಿ ನಿರ್ದೇಶನದ "ಪಾಪ್ಕಾರ್ನ್ ಮಂಕಿ ಟೈಗರ್' ಮೂಲಕ ನಾಯಕಿಯಾಗಿ ಡೆಬ್ಯೂ ಮಾಡಿದ ನಟಿ ಸಪ್ತಮಿ ಗೌಡ, ನಂತರ "ಕಾಂತಾರ' ಚಿತ್ರದಲ್ಲಿ ಪ್ಯಾನ್ ಇಂಡಿಯಾ ಹೊರಟರು. ಅದರ ಬೆನ್ನಲ್ಲೇ "ದ ವ್ಯಾಕ್ಸಿನ್ ವಾರ್' ಚಿತ್ರದ ಮೂಲಕ ಬಾಲಿವುಡ್ಗೆ ಎಂಟ್ರಿ ಕೊಟ್ಟ ಅವರು, ಕಳೆದ ವರ್ಷ ಕನ್ನಡದ "ಯುವ' ಚಿತ್ರದಲ್ಲಿ ಮಿಂಚಿದ್ದರು.
ಅದರ ಜತೆಗೆ 2024ರಲ್ಲಿ "ತಮ್ಮುಡು' ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದ ಅವರು, ಸದ್ಯ ಆ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. "ಮಿಡಲ್ ಕ್ಲಾಸ್ ಅಬ್ಬಾಯಿ' ಮತ್ತು "ವಕೀಲ್ ಸಾಬ್' ಖ್ಯಾತಿಯ ವೇಣು ಶ್ರೀರಾಮ್ ಆ್ಯಕ್ಷನ್-ಕಟ್ ಹೇಳಿರುವ ಈ ಚಿತ್ರದಲ್ಲಿ ಸಪ್ತಮಿ ನಿತಿನ್ಗೆ ನಾಯಕಿಯಾಗಿದ್ದಾರೆ.
ಚಿತ್ರದ ಬಗ್ಗೆ, "ನನ್ನ ಹಿಂದಿನ ಸಿನಿಮಾಗಳನ್ನು ನೋಡಿ ನಿರ್ದೇಶಕ ವೇಣು ಶ್ರೀರಾಮ್ ಕರೆ ಮಾಡಿದ್ದರು. ಲುಕ್ ಟೆಸ್ಟ್ ಕೊಟ್ಟೆ. ನನ್ನ ಭಾಗದ ಚಿತ್ರೀಕರಣ ಕಳೆದ ಮೇನಲ್ಲಿ ಆರಂಭವಾಗಬೇಕಿತ್ತು. ಆದರೆ, ಸ್ವಲ್ಪ ತಡವಾಗಿ ಆಗಸ್ಟ್ನಲ್ಲಿ ಹೈದರಾಬಾದ್ನಲ್ಲಿ ಚಿತ್ರೀಕರಣದಲ್ಲಿ ನಡೆಯಿತು. ನಾನಿಲ್ಲಿ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸಿದ್ದೇನೆ. ಸದ್ಯ ಈ ಸಿನಿಮಾ ರಿಲೀಸ್ಗೆ ರೆಡಿಯಾಗಿದ್ದು, ನಾಯಕ ನಿತಿನ್ ಬೇರೆ ಚಿತ್ರದಲ್ಲಿ ಬಿಜಿಯಿರುವ ಕಾರಣ ಕೆಲವೇ ದಿನಗಳಲ್ಲಿ ಬಿಡುಗಡೆ ದಿನಾಂಕ ಘೋಷಿಸುವ ನಿರೀೆ ಇದೆ' ಎಂದು ಮಾಹಿತಿ ನೀಡುತ್ತಾರೆ ಸಪ್ತಮಿ.
ಸದ್ಯ ಸಪ್ತಮಿ ಗೌಡ ನೀನಾಸಂ ಸತೀಶ್ ನಾಯಕನಾಗಿರುವ "ದ ರೈಸ್ ಆಫ್ ಅಶೋಕ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೆಲ ದಿನಗಳ ಹಿಂದಷ್ಟೆ ಅವರ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದ್ದು, ಹೂ ಮಾರುವ ಹಳ್ಳಿ ಹುಡುಗಿ ಅಂಬಿಕಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. "ಹಾಗೇ ಮತ್ತೊಂದು ಕನ್ನಡ ಸಿನಿಮಾದಲ್ಲಿ ನಟಿಸುತ್ತಿದ್ದೇನೆ. ಅದರ ಬಗ್ಗೆ ಇನ್ನಷ್ಟೇ ಅಧಿಕೃತ ಅನೌನ್ಸ್ಮೆಂಟ್ ಆಗಬೇಕಿದೆ. ಕೆಲ ಕಥೆಗಳನ್ನು ಕೇಳುತ್ತಿದ್ದೇನೆ. ಆದರೆ, ಸದ್ಯ ಕೈಯಲ್ಲಿರುವ ಚಿತ್ರಗಳ ಶೂಟಿಂಗ್ ಪೂರ್ಣಗೊಂಡ ಬಳಿಕ ಹೊಸ ಸಿನಿಮಾ ಕೈಗೆತ್ತಿಕೊಳ್ಳಲಿದ್ದೇನೆ' ಎಂದು ಹೇಳಿಕೊಳ್ಳುತ್ತಾರೆ.