ಕಡಿಮೆ ದರದಲ್ಲಿ ‘ಸೈಡ್ ಬಿ’ ; ಶೇಕಡಾ 20ರಷ್ಟು ಟಿಕೆಟ್ ದರ ಕಡಿತಗೊಳಿಸಿರುವ ಚಿತ್ರತಂಡ

SSE (4)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಹೇಮಂತ್ ರಾವ್ ನಿರ್ದೇಶಿಸಿ, ರಕ್ಷಿತ್ ಶೆಟ್ಟಿ, ರುಕ್ಮಿಣಿ ವಸಂತ್ ಮತ್ತು ಚೈತ್ರಾ ಜೆ. ಆಚಾರ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಚಿತ್ರ ‘ಸಪ್ತಸಾಗರದಾಚೆ ಎಲ್ಲೋ : ಸೈಡ್ ಬಿ’. ಚಿತ್ರದ ಮೊದಲ ಭಾಗ ‘ಸೈಡ್ ಎ’ ಕಳೆದ ಸೆ. 1ರಂದು ಬಿಡುಗಡೆಯಾಗಿತ್ತು. ಅದರ ಮುಂದುವರಿದ ಭಾಗವಾಗಿ ‘ಸೈಡ್ ಬಿ’ ಕಳೆದ ಶುಕ್ರವಾರ (ನ. 17)ರಂದು ರಿಲೀಸ್ ಆಗಿದೆ. ಮೊದಲ ಎರಡು ದಿನಗಳ ಕಾಲ ಚಿತ್ರಕ್ಕೆ ಉತ್ತಮ ಗಳಿಕೆಯಾಗಿದ್ದು, ಭಾನುವಾರ (ನ. 19) ವಿಶ್ವಕಪ್ ಫೈನಲ್ ಬಿಸಿಯಲ್ಲಿ ಜನ ಮಲ್ಟಿಪ್ಲೆಕ್ಸ್‌ಗಳತ್ತ ಮುಖ ಮಾಡಿಲ್ಲ.

ಇದೀಗ ವಿಶ್ವಕಪ್ ಸೋಲಿನ ಬೇಸರದಲ್ಲಿರುವ ಪ್ರೇಕ್ಷಕರನ್ನು ಮತ್ತೆ ಮಲ್ಟಿಪ್ಲೆಕ್ಸ್‌ಗಳಿಗೆ ಕರೆತರಲು ‘ಸಪ್ತಸಾಗರದಾಚೆ ಎಲ್ಲೋ: ಸೈಡ್ ಬಿ’ ಚಿತ್ರತಂಡ ಹೊಸ ಐಡಿಯಾ ಮಾಡಿದೆ. ಸೋಮವಾರದಿಂದ (ನ. 20) ಚಿತ್ರದ ಟಿಕೆಟ್ ದರವನ್ನು ಶೇಕಡಾ 20ರಷ್ಟು ಕಡಿತಗೊಳಿಸಲಾಗಿದೆ. ಹೀಗಾಗಿ ಬಹುತೇಕ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ 110 ರೂ. ಅಥವಾ 112 ರೂ.ಗಳಿಗೆ ಸೀಮಿತವಾಗಿದೆ. ‘ಸೈಡ್ ಎ’ ಚಿತ್ರದ ಪ್ರಚಾರದ ವೇಳೆ ಚಿತ್ರತಂಡ ರಾಜ್ಯದ ಹಲವೆಡೆ ಪ್ರವಾಸ ಮಾಡುವ ಮೂಲಕ ಜನರನ್ನು ಥಿಯೇಟರ್‌ಗಳತ್ತ ಸೆಳೆಯಲು ಯತ್ನಿಸಿತ್ತು. ಇದೀಗ ‘ಸೈಡ್ ಬಿ’ ರಿಲೇಸ್ ವೇಳೆ ಚಿತ್ರದ ಟಿಕೆಟ್ ದರ ಕಡಿತಗೊಳಿಸಿದೆ.

‘ಸೈಡ್ ಬಿ’ಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಆದರೆ, ಬೇರೆ ರಾಜ್ಯಗಳಿಗೆ ಹೋಲಿಸಿದರೆ, ನಮ್ಮಲ್ಲಿ ಟಿಕೆಟ್ ದರ ಹೆಚ್ಚು. ಜನಸಾಮಾನ್ಯರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಕೈಗೆಟುಕುವ ದರದಲ್ಲಿ ಟಿಕೆಟ್ ಇದ್ದರೆ, ಎಲ್ಲರೂ ಸಿನಿಮಾ ನೋಡಬಹುದು. ಹೀಗಾಗಿಯೇ ಮಲ್ಟಿಪ್ಲೆಕ್ಸ್‌ಗಳಲ್ಲಿ ಟಿಕೆಟ್ ದರ ಕಡಿತಗೊಳಿಸಿದ್ದೇವೆ. ವಾರದ ದಿನಗಳಲ್ಲಿ ಮಾತ್ರವಲ್ಲದೇ ವಾರಾಂತ್ಯದಲ್ಲೂ ಈ ಆರ್ ಇರಲಿದೆ. - ಹೇಮಂತ್ ರಾವ್, ನಿರ್ದೇಶಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net