'ಸಪ್ತ ಸಾಗರದಾಚೆ ಎಲ್ಲೋ' ಚಿತ್ರೀಕರಣ ಮುಗಿಸಿದರು ರಕ್ಷಿತ್​ ಶೆಟ್ಟಿ

Sapta Sagaradache Ello
Published on

ಬೆಂಗಳೂರು: ರಕ್ಷಿತ್​ ಶೆಟ್ಟಿ ಅಭಿನಯದ 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಚಿತ್ರೀಕರಣ ಕೊನೆಗೂ ಮುಕ್ತಾಯವಾಗಿದೆ. ಸುಮಾರು 137 ದಿನಗಳ ಚಿತ್ರೀಕರಣ ನಂತರ ಇತ್ತೀಚೆಗೆ ಚಿತ್ರತಂಡ ಕುಂಬಳಕಾಯಿ ಒಡೆದಿದೆ.

'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದ ಚಿತ್ರೀಕರಣ 2021ರಲ್ಲೇ ಪ್ರಾರಂಭವಾಗಿತ್ತು. ಆದರೆ, ಈ ಮಧ್ಯೆ '777 ಚಾರ್ಲಿ' ಚಿತ್ರದ ಚಿತ್ರೀಕರಣ ಇನ್ನೂ ಮುಗಿದಿರಲಿಲ್ಲವಾದ್ದರಿಂದ, 'ಸಪ್ತ ಸಾಗರದಾಚೆ ಎಲ್ಲೋ' ಚಿತ್ರ ಸಹ ವಿಳಂಬವಾಯಿತು. ಕಳೆದ ವರ್ಷದ ಡಿಸೆಂಬರ್​ ಕೊನೆಯ ವಾರದಲ್ಲಿ ಚಿತ್ರ ಬಿಡುಗಡೆ ಆಗಬಹುದು ಎಂದು ಹೇಳಲಾಗಿತ್ತು. ಆದರೆ, ಚಿತ್ರೀಕರಣ ಇದೀಗ ಮುಕ್ತಾಯವಾಗಿದೆ.

ಸದ್ಯ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳಲ್ಲಿ ಚಿತ್ರತಂಡ ತೊಡಗಿಸಿಕೊಂಡಿದ್ದು, ಜೂನ್​ನಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದೆ. ಆದರೆ, ಜೂನ್​ ತಿಂಗಳಲ್ಲಿ ಯಾವಾಗ ಬಿಡುಗಡೆ ಎಂದು ಅಧಿಕೃತ ಘೋಷಣೆಯಾಗಿಲ್ಲ. ಬಿಡುಗಡೆ ದಿನಾಂಕ ಇನ್ನಷ್ಟೇ ಹೊರಬೀಳಬೇಕಿದೆ.

'ಸಪ್ತ ಸಾಗರದಾಚೆ ಎಲ್ಲೋ' ಚಿತ್ರದಲ್ಲಿ ರಕ್ಷಿತ್​ ಶೆಟ್ಟಿ ಎರಡ್​ ಶೇಡ್​ಗಳ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎರಡು ಕಾಲಘಟ್ಟದಲ್ಲಿ ಕಥೆ ನಡೆಯಲಿದ್ದು, ಒಂದು ಶೇಡ್​ಗಾಗಿ ಅವರು ತೂಕ ಹೆಚ್ಚಿಸಿಕೊಂಡಿದ್ದಾರೆ. ರಕ್ಷಿತ್​ ಜತೆಗೆ ರುಕ್ಮಿಣಿ ವಸಂತ್​, ಚೈತ್ರಾ ಆಚಾರ್​, ಅವಿನಾಶ್​, ಶರತ್​ ಲೋಹಿತಾಶ್ವ, ಅಚ್ಯುತ್​ ಕುಮಾರ್​, ಪವಿತ್ರಾ ಲೋಕೇಶ್​, ಗೋಪಾಲಕೃಷ್ಣ ದೇಶಪಾಂಡೆ, ರಮೇಶ್ ಇಂದಿರಾ ಮುಂತಾದವರು ನಟಿಸಿದ್ದಾರೆ.

'ಸಪ್ತ ಸಾಗರದಾಚೆ ಎಲ್ಲೋ' ಚಿತ್ರವನ್ನು ರಕ್ಷಿತ್​ ಶೆಟ್ಟಿ ನಿರ್ಮಿಸಿದ್ದು, ಹೇಮಂತ್​ ರಾವ್​ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚರಣ್​ ರಾಜ್​ ಸಂಗೀತ ಮತ್ತು ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಈ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net