ಶ್ರೀಮಂತಿಕೆ ಪೂಜಿಸುವ ಪ್ರವೃತ್ತಿ ಕಳವಳಕಾರಿ

udp-8-santhosh hegde
Published on

ಉಡುಪಿ: ಸಮಾಜದಲ್ಲಿ ಶ್ರೀಮಂತಿಕೆ ಮತ್ತು ಅಧಿಕಾರ ಪೂಜಿಸುವ ಪ್ರವೃತ್ತಿ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ಭ್ರಷ್ಟಾಚಾರಕ್ಕೆ ದುರಾಸೆಯೇ ಮೂಲ ಕಾರಣ. ಇಂಥವರು ಕೋರ್ಟಿ ತೀರ್ಪುಗಳಿಗೂ ಹೆದರುವುದಿಲ್ಲ ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಎನ್​. ಸಂತೋಷ್​ ಹೆಗ್ಡೆ ಹೇಳಿದರು.

ಭಾನುವಾರ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿ ವತಿಯಿಂದ ನೀಡಲ್ಪಟ್ಟ ಪದ್ಮಭೂಷಣ ಜಾರ್ಜ್​ ಫೆರ್ನಾಂಡಿಸ್​ ಸಂಸ್ಮರಣಾ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.

ದುರಾಸೆಗೆ ತೃಪ್ತಿಯೇ ಔಷಧ. ಮನುಷ್ಯನಿಗೆ ಜೀವನದಲ್ಲಿ ಪಡೆದ್ದರಲ್ಲಿ ತೃಪ್ತಿ ಬೇಕು. ಆಕಾಂಕ್ಷೆ ಗಳಿರಬೇಕು. ಇನ್ನೊಬ್ಬರ ಜೇಬಿಗೆ ಮತ್ತು ಹೊಟ್ಟೆಗೆ ಕೈಹಾಕದೆ ಹಣಗಳಿಸಿಕೊಳ್ಳಬೇಕು. ಅಕ್ರಮ ಸಂಪತ್ತಿನಿಂದ ಸಂತಸ ಬರೋದಿಲ್ಲ. ಕಾನೂನು ಚೌಕಟ್ಟಿನಲ್ಲಿ ಕೋಟಿ ರೂ. ಗಳಿಸಿದರೂ ನೆಮ್ಮದಿ ಇರುತ್ತದೆ ಎಂದು ಹೇಳಿದರು.

ಭ್ರಷ್ಟಾಚಾರ ಮಿತಿ ಮೀರಲು ಸಮಾಜವೂ ಕಾರಣವಾಗಿದೆ. ಹಿಂದಿನ ಕಾಲದಲ್ಲಿ ಜೈಲಿಗೆ ಹೋದವರ ಮನೆ ಹತ್ತಿರವೂ ಯಾರೂ ಸುಳಿಯುತ್ತಿರಲಿಲ್ಲ. ಒಂದು ರೀತಿಯಲ್ಲಿ ಕುಟುಂಬಕ್ಕೂ ಸಾಮಾಜಿಕ ಬಹಿಷ್ಕಾರ ಹಾಕುತ್ತಿದ್ದರು. ಆದರೆ ಇಂದು ಭ್ರಷ್ಟಾಚಾರ ಎಸಗಿ ಜೈಲು ಸೇರಿದವರನ್ನು ಹೂ ಮಾಲೆ ಹಾಕಿಸಿ ಬಿಡಿಸಿಕೊಂಡು ಬರುವವರಿದ್ದಾರೆ. ಇದರಿಂದ ಕೆಟ್ಟ ಕೆಲಸ ಮಾಡಲು ಹೆದರಿಕೆ ಎಂಬುದು ಹೊರಟು ಹೋಗಿದೆ ಎಂದರು. ಸಮಿತಿ ಅಧ್ಯಕ್ಷ ನಿತ್ಯಾನಂದ ಕೋಟ್ಯಾನ್​ ಅಧ್ಯಕ್ಷತೆ ವಹಿಸಿದ್ದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಪ ಸದಸ್ಯ ಐವನ್​ ಡಿಸೋಜಾ, ಬಹುಭಾಷಾ ಚಲನಚಿತ್ರ ನಟ ಸುಮನ್​ ತಲ್ವಾರ್​ ಪೂಜಾರಿ, ಅದಾನಿ ಗ್ರೂಪ್​ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್​ ಆಳ್ವ, ಸಮಿತಿ ಪ್ರ.ಕಾ. ಮುಂಡ್ಕೂರು ಸುರೇಂದ್ರ ಸಾಲ್ಯಾನ್​, ರಾಜ್ಯ ಸಂಯೋಜಕ ಜಗದೀಶ್​ ಅಧಿಕಾರಿ ಉಪಸ್ಥಿತರಿದ್ದರು. ಸಮಸ್ಥಾಪಕ ತೋನ್ಸೆ ಜಯಕೃಷ್ಣ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಕಾರ್ಯಾಧ್ಯಕ್ಷ ಹರೀಶ್​ ಕುಮಾರ್​ ಶೆಟ್ಟಿ ಸ್ವಾಗತಿಸಿದರು. ದಯಾಸಾಗರ್​ ಚೌಟ ಕಾರ್ಯಕ್ರಮ ನಿರೂಪಿಸಿದರು.

ಜಾರ್ಜ್​ ಫೆರ್ನಾಂಡಿಸ್​ ಬದುಕೇ ಆದರ್ಶವಾಗಿದ್ದು, ಅವರು ರೈಲ್ವೇ ಮಂತ್ರಿಯಾಗದೇ ಇರುತ್ತಿದ್ದರೆ ಕೊಂಕಣ ರೈಲ್ವೇ ನಿರ್ಮಾಣ ಅಸಾಧ್ಯವಾಗಿತ್ತು. ರಕ್ಷಣಾ ಸಚಿವರಾಗಿದ್ದ ಅವಧಿಯಲ್ಲಿ ಮೊದಲ ಬಾರಿಗೆ ಹುತಾತ್ಮ ಸೈನಿಕರ ಶವವನ್ನು ಕುಟುಂಬಕ್ಕೆ ಹಸ್ತಾಂತರಿಸುವ ಪದ್ಧತಿಯನ್ನು ಪ್ರಾರಂಭಿಸಿದರು. ಈ ಹಿಂದೆ ಸೈನಿಕರ ಶವಕ್ಕೆ ಸತ್ತಸ್ಥಳದಲ್ಲೇ ಅಂತ್ಯಸಂಸ್ಕಾರ ಮಾಡಿ ಅಸ್ತಿಯನ್ನು ಮನೆಯವರಿಗೆ ತಲುಪಿಸಲಾಗುತ್ತಿತ್ತು. &ಗಣೇಶ್​ ಕಾರ್ಣಿಕ್​, ಮಾಜಿ ವಿಪ ಸದಸ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net