ಹರಿಪ್ರಸಾದ್ ನಂದಳಿಕೆ ಕಾರ್ಕಳ

ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಗ್ರಾಮೀಣ ಭಾಗದ ರಸ್ತೆಯೊಂದು 15 ವರ್ಷಗಳ ಬಳಿಕ ಅಭಿವೃದ್ಧಿಯಾಗುತ್ತಿದ್ದು ಕಾಮಗಾರಿಗೆ ಚಾಲನೆ ದೊರೆತಿದೆ. ಗ್ರಾಮೀಣ ಭಾಗದ ಜನರಿಗೆ ನಗರ ಸಂಪರ್ಕಿಸಲು ಅನುಕೂಲವಾಗಲಿದೆ.
ಸಂಕಲಕರಿಯದಿಂದ ಉಗ್ಗೆದಬೆಟ್ಟು ಮಾರ್ಗವಾಗಿ ಸಾಗಿ ಪೊಸ್ರಾಲು ದೇವಾಲಯದ ರಸ್ತೆಯನ್ನು ಸಂಪರ್ಕಿಸಲು ಈ ಮಾರ್ಗದಲ್ಲಿ ರಸ್ತೆ ನಿರ್ಮಾಣ ಮಾಡಲು ಯೋಜಿಸಲಾಗಿತ್ತು. ರಸ್ತೆಗಾಗಿ ಪರಿಸರದ ಗ್ರಾಮಸ್ಥರು ಹಾಗೂ ಕೃಷಿಕರು ತಮ್ಮ ಜಮೀನು ಬಿಟ್ಟು ಕೊಟ್ಟಿದ್ದರು. ಕಾಮಗಾರಿ ಆರಂಭವಾದರೂ ನಿಧಾನಗತಿಯಲ್ಲಿ ಸಾಗಿತ್ತು. ಆ ಬಳಿಕ 15 ವರ್ಷಗಳಿಂದ ರಸ್ತೆ ಯೋಜನೆ ನನೆಗುದಿಗೆ ಬಿದ್ದಿತ್ತು. ಈ ಬಗ್ಗೆ ಹಲವು ಬಾರಿ ಜನಪ್ರತಿನಿಧಿಗಳಿಗೆ ಮನವಿ ಮಾಡಿದರೂ ರಸ್ತೆ ಕಾಮಗಾರಿ ಮಾತ್ರ ನಡೆದಿರಲಿಲ್ಲ. ಇದೀಗ 15 ವರ್ಷಗಳ ಬಳಿಕ ಸಂಕಲಕರಿಯ ಪೊಸ್ರಾಲು ಶ್ರೀ ಮಹಾಲಿಂಗೇಶ್ವರ ದೇವಳ ಸಂಪರ್ಕ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ.
ಜಾಗ ಬಿಟ್ಟು ಕೊಟ್ಟ ಕೃಷಿಕರು
ಇಲ್ಲಿ ರಸ್ತೆ ಹಾದು ಹೋಗುವ ಕಡೆಗಳಲ್ಲಿ ಹೆಚ್ಚಾಗಿ ಖಾಸಗಿ ಜಮೀನು ಹಾಗೂ ಕೃಷಿ ಭೂಮಿಗಳಿದ್ದು, ರಸ್ತೆ ನಿರ್ಮಾಣಕ್ಕಾಗಿ ಗ್ರಾಮಸ್ಥರು ಒಂದಿಷ್ಟು ಜಾಗವನ್ನು ಬಿಟ್ಟುಕೊಟ್ಟಿದ್ದಾರೆ. ಜೊತೆಗೆ ಕೃಷಿಕರು ತಮ್ಮ ಜಮೀನನ್ನೇ ರಸ್ತೆಗಾಗಿ ಬಿಟ್ಟುಕೊಟ್ಟಿದ್ದಾರೆ. ಉಗ್ಗೆದಬೆಟ್ಟು ಭಂಡಸಾಲೆ ಮನೆಯವರ ಪರವಾಗಿ ವೀರೇಂದ್ರ ಶೆಟ್ಟಿ, ಬಾಳೆ ಬಾಕಿಮಾರು ಮನೆಯವರ ಪರವಾಗಿ ರವೀಂದ್ರ ಶೆಟ್ಟಿ, ಬೇಬಿ ಪೂಜಾರಿ, ಸುಂದರ ಪೂಜಾರಿ, ಸುಂದರ ಪೂಜಾರಿ, ಪೆರ್ಗೊಟ್ಟು ಸುಮತಿ ಶಿವರಾಮ ಶೆಟ್ಟಿ, ವಾಸು ಪೂಜಾರಿ ಕೋಟ್ಯೊಟ್ಟು, ಪೆರ್ಗೊಟ್ಟು ದಿವಾಕರ ಶಟ್ಟಿ, ಪೊಸ್ರಾಲು ಬಾಲಕೃಷ್ಣ ಭಟ್, ಕಡಪುಕರಿಯ ಜಯರಾಮ ಶೆಟ್ಟಿ ಮತ್ತಿತರರು ಬಹುತೇಕ ಜಮೀನು ದಾನ ಮಾಡಿ ಮಾದರಿಯಾಗಿದ್ದಾರೆ.
ನೂರಾರು ಮನೆಗಳಿಗೆ ಪ್ರಯೋಜನ
ಈ ಭಾಗದಲ್ಲಿ ರಸ್ತೆ ನಿರ್ಮಾಣದಿಂದ ಗ್ರಾಮೀಣ ಭಾಗದ ನೂರಾರು ಮನೆಗಳಿಗೆ ಪ್ರಯೋಜನವಾಗಲಿದೆ. ಈ ಭಾಗದಲ್ಲಿ ಹೆಚ್ಚಿನ ಕೃಷಿ ಕುಟುಂಬಗಳಿದ್ದು, ತಮ್ಮ ಕೃಷಿ ಕಾರ್ಯಕ್ಕೆ ಹಾಗೂ ಬೆಳೆದ ಬೆಳೆಯನ್ನು ಮಾರುಕಟ್ಟೆಗಳಿಗೆ ಸಾಗಿಸಲು ಸಹಕಾರಿಯಾಗಲಿದೆ. ಅಲ್ಲದೆ ಸ್ಥಳೀಯ ಪಟ್ಟಣ ಪ್ರದೇಶವನ್ನು ಸಂಪರ್ಕಿಸಲು ಸಾಧ್ಯವಿದೆ. ಸಂಕಲಕರಿಯ ಉಗ್ಗೆದಬೆಟ್ಟು ಪೊಸ್ರಾಲು ಮಾರ್ಗವಾಗಿ ಮುಂದೆ ಕೊಟ್ರಪಾಡಿ, ಕಡಂದಲೆ, ಪೂಪಾಡಿಕಲ್ಲು, ಸಚ್ಚೇರಿಪೇಟೆ, ಕೊಡ್ಯಡ್ಕ, ಮೂಡುಬಿದಿರೆಯನ್ನು ಸಂಪರ್ಕಿಸಲು ಬಹು ಹತ್ತಿರದ ರಸ್ತೆಯಾಗಲಿದೆ. ರಸ್ತೆ ಕಾಮಗಾರಿ ಬೇಗ ಮುಗಿದು ಸಂಚಾರಕ್ಕೆ ಮುಕ್ತವಾದರೆ ವಾಹನ ಸವಾರರು ಸುತ್ತಿ ಬಳಸಿಕೊಂಡು ಹೋಗುವುದು ತಪ್ಪುತ್ತದೆ.
ಅನುದಾನ ಮಂಜೂರು
ಸಂಕಲಕರಿಯ, ಉಗ್ಗೆದಬೆಟ್ಟು, ಪೊಸ್ರಾಲು ಭಾಗದ ಗ್ರಾಮಸ್ಥರ ಬಹು ವರ್ಷದ ಬೇಡಿಕೆಗೆ ಸ್ಪಂದಿಸಿದ ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್‌ರವರು ಅನುದಾನವನ್ನು ಮಂಜೂರು ಮಾಡಿದ್ದಾರೆ. ಈ ಹಿಂದೆ ಸಂಕಲಕರಿಯದಿಂದ ಉಗ್ಗೆದಬೆಟ್ಟು ವರೆಗೆ ಒಂದಿಷ್ಟು ಕಾಂಕ್ರೀಟ್ ಹಾಗೂ ಡಾಂಬರೀಕರಣ ನಡೆದಿತ್ತು. ಇದೀಗ ಉಗ್ಗೆದಬೆಟ್ಟುವಿನಿಂದ ಪೊಸ್ರಾಲು ದೇವಳದವರೆಗೆ ಸಂಪೂರ್ಣ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿದೆ. ಈ ಕಾಮಗಾರಿಗೆ ಶಾಸಕರು 1 ಕೋಟಿ ರೂ. ಅನುದಾನ ಬಿಡುಗಡೆಯಾಗುವಲ್ಲಿ ಶ್ರಮವಹಿಸಿದ್ದು ಬಹು ವರ್ಷಗಳ ಕನಸೊಂದು ನನಸಾಗುವ ಕಾಲ ಕೂಡಿ ಬಂದಿದೆ.
ಇಲ್ಲಿನ ರಸ್ತೆಯ ನಿರ್ಮಾಣವಾದರೆ ಈ ಭಾಗದ ನೂರಾರು ಮನೆಗಳಿಗೆ ಹಾಗೂ ವಾಹನ ಸವಾರರಿಗೆ ಅನುಕೂಲಕರವಾಗಲಿದೆ. ಬಹು ವರ್ಷಗಳ ಬೇಡಿಕೆಯ ರಸ್ತೆ ಕಾಮಗಾರಿಗೆ ಮತ್ತೆ ಚಾಲನೆ ಸಿಕ್ಕಿರುವುದು ತುಂಬಾ ಖುಷಿ ನೀಡಿದೆ.
ಸಂದೀಪ್ ದೇವಾಡಿಗ, ಗ್ರಾಮಸ್ಥರು.
ರಸ್ತೆಯ ನಿರ್ಮಾಣಕ್ಕಾಗಿ ಶಾಸಕರು 1 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದು ಹಲವು ದಶಕದ ಕನಸೊಂದು ನನಸಾಗುತ್ತಿದೆ. ಅಲ್ಲದೆ ರಸ್ತೆಯ ನಿರ್ಮಾಣಕ್ಕಾಗಿ ಸಾಕಷ್ಟು ಗ್ರಾಮಸ್ಥರು, ಕೃಷಿಕರು ತಮ್ಮ ಜಾಗವನ್ನು ತ್ಯಾಗ ಮಾಡಿದ್ದಾರೆ. ಇವರೆಲ್ಲರ ಪ್ರಯತ್ನದ ಫಲವಾಗಿ ರಸ್ತೆ ನಿರ್ಮಾಣವಾಗುತ್ತಿದೆ.
ಸೋಮನಾಥ ಪೂಜಾರಿ, ಮಾಜಿ ಸದಸ್ಯರು ಮುಂಡ್ಕೂರು ಗ್ರಾಪಂ
ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿ ಹಾಗೂ ಮೂಲ ಸೌಕರ್ಯಗಳನ್ನು ಒದಗಿಸಿವುದು ಜನಪ್ರತಿನಿಧಿಗಳ ಕರ್ತವ್ಯ, ಇಲ್ಲಿ ಗ್ರಾಮಸ್ಥರು ಜಾಗವನ್ನು ಬಿಟ್ಟುಕೊಟ್ಟು ರಸ್ತೆಯ ನಿರ್ಮಾಣಕ್ಕಾಗಿ ಸಹಕಾರ ನೀಡಿರುವುದು ಶ್ಲಾಘನೀಯ.
– ವಿ.ಸುನೀಲ್ ಕುಮಾರ್, ಶಾಸಕರು ಕಾರ್ಕಳ