

ಉಡುಪಿ: ಸಂಜೀವಿನಿ ಸ್ವ ಸಹಾಯ ಗುಂಪು ಹಾಗೂ ಒಕ್ಕೂಟಗಳ ಬಲವರ್ಧನೆ, ಸಂಜೀವಿನಿ ಮಹಿಳೆಯರು ತಯಾರಿಸುವ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ, ವಿವಿಧ ಸ್ವ ಉದ್ಯೋಗ ಹಾಗೂ ಪ್ರವಾಸೋದ್ಯಮ ಚಟುವಟಿಕೆ, ಹಣಕಾಸು ಸೇರ್ಪಡೆ ಬಗ್ಗೆ ಅಗತ್ಯಕ್ರಮ ವಹಿಸುವಂತೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಅಧಿಕಾರಿಗಳಿಗೆ ಸೂಚಿಸಿದರು.
ಜಿಪಂ ಸಭಾಂಗಣದಲ್ಲಿ ನಡೆದ ಸಂಜೀವಿನಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಯೋಜನಾ ನಿರ್ದೇಶಕ ವಿಜಯ್ ಕುಮಾರ್, ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಹರೀಶ್, ವಿಷಯ ನಿರ್ವಹಕ ಅನಂತಕೃಷ್ಣ, ಸಂಜೀವಿನಿ ಯೋಜನೆಯ ಜಿಲ್ಲಾ ವ್ಯವಸ್ಥಾಪಕ ಅವಿನಾಶ್, ಡಾ. ಸೌಮ್ಯ ಕುಮಾರಿ, ಯತೀಶ್, ರವಿ, ಶಿವಾನಂದ್ ಉಪಸ್ಥಿತರಿದ್ದರು.
ದೀಪಾವಳಿ ಗಿಫ್ಟ್ ಬಾಕ್ಸ್ ಬಿಡುಗಡೆ
ಅಕ್ಕ ಸಂಜೀವಿನಿ ಅಂಗಡಿ ಮೂಲಕ ತಯಾರಿಸಿದ ದೀಪಾವಳಿ ಗಿಫ್ಟ್ ಬಾಕ್ಸ್ಗಳನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಯಶ್ ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಕಿರಣ್ ಕುಮಾರ್ ಕೊಡ್ಗಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಸಹಾಯಕ ಆಯುಕ್ತೆ ರಶ್ಮಿ, ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್, ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ್, ಯೋಜನಾ ನಿರ್ದೇಶಕ ವಿಜಯ್ ಕುಮಾರ್ , ಕಾಪು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಜೇಮ್ಸ್ ಡಿಸಿಲ್ವಾ ಉಪಸ್ಥಿತರಿದ್ದರು.
ಕಟಪಾಡಿ ಅಕ್ಕ ಸಂಜೀವಿನಿ ಅಂಗಡಿಯ ಡ್ರೈ ಫ್ರೂಟ್ಸ್ ಗಿಫ್ಟ್ ಬಾಕ್ಸ್, ಪಡುಬಿದ್ರೆ ಹಾಗೂ ಶಿರ್ವ ಅಕ್ಕ ಅಂಗಡಿಯ ಮನೆಯಲ್ಲಿ ತಯಾರಿಸಿದ ವಿವಿಧ ಬಗೆಯ ಲಡ್ಡು, ಸ್ವೀಟ್ಸ್, ಸಿಹಿ ತಿನಿಸುಗಳು ಹಾಗೂ ಬೆಳಪು ಅಕ್ಕ ಅಂಗಡಿಯ ಗೋ ಉತ್ಪನ್ನಗಳಿಂದ ತಯಾರಿಸಿದ ಪೂಜಾ ಸಾಮಗ್ರಿಗಳ ಬಾಕ್ಸ್ ದೀಪಾವಳಿಯ ಉಡುಗೊರೆ ನೀಡಲು ವಿನ್ಯಾಸಗೊಳಿಸಲಾಗಿದೆ.