

ಬೆಂಗಳೂರು: ನಟಿ ಸಂಜನಾ ಮತ್ತು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಾಂಬರಗಿ ಅವರ ನಡುವಿನ ವಾಕ್ಸಮರ ಸದ್ಯಕ್ಕೆ ನಿಲ್ಲುವ ಹಾಗೆ ಕಾಣುತ್ತಿಲ್ಲ. ಸೋಮವಾರ ಮಾತನಾಡಿರುವ ಅವರು, ಸೆಲೆಬ್ರಿಟಿ ಆಗಿರೋ ಕಾರಣಕ್ಕೆ ಪ್ರಶಾಂತ್ ತನ್ನನ್ನು ಟಾರ್ಗೆಟ್ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂಜನಾ ಗಾಲ್ರಾಣಿಗೂ, ಡ್ರಗ್ಸ್ ಮಾಫಿಯಾಗೂ ನಂಟಿದೆ ಎಂದು ಕೆಲವೇ ದಿನಗಳ ಹಿಂದೆ ಹೇಳಿದ್ದರು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಂಜನಾ, ಪ್ರಶಾಂತ್ ಅವರು ಯಾರು ಎಂದೇ ಗೊತ್ತಿಲ್ಲ ಎಂದಿದ್ದರು. ಅಷ್ಟೇ ಅಲ್ಲ, ಪ್ರಶಾಂತ್ ಅವರನ್ನು ನಾಯಿ, ಹಂದಿ ಎಂದು ಕರೆದಿದ್ದರು. ಈ ವಿಷಯವಾಗಿ ಪ್ರತಿಕ್ರಿಯೆ ನೀಡಿದ್ದ ಪ್ರಶಾಂತ್, ಒಂದು ವಿಡಿಯೋ ಬಿಡುಗಡೆ ಮಾಡುವುದರ ಜತೆಗೆ, ಶ್ರೀಲಂಕಾದ ಕೊಲೊಂಬೋದಲ್ಲಿ ನಡೆದ ಒಂದು ಇವೆಂಟ್ನಲ್ಲಿ ಸಂಜನಾ ಜತೆಗೆ ಶಾಸಕ ಜಮೀರ್ ಅಹ್ಮದ್ ಖಾನ್ ಜತೆ ಕಾಣಿಸಿಕೊಂಡಿದ್ದೇಕೆ ಎಂದು ಕೇಳಿದ್ದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿರುವ ಅವರು, 'ಇಷ್ಟು ದಿನ ಈ ಆರೋಪಗಳು ಎಲ್ಲಿದ್ದವು. ಇಷ್ಟು ದಿನ ಆ ಯಪ್ಪ ಎಲ್ಲಿದ್ದ? ಇಷ್ಟು ದಿನ ಸುಮ್ಮನಿದ್ದು, ಈಗ ಒಂದಾದ ಮೇಲೊಂದು ಆರೋಪಗಳು ಮಾಡ್ತಿದ್ದಾನೆ. ಶ್ರೀಲಂಕಾದ ಕ್ಯಾಸೀನೋಗೆ ಚೀಫ್ ಗೆಸ್ಟ್ ಆಗಿ ಹೋಗಿದ್ದೆ. ಯಶ್, ಉಪೇಂದ್ರ ಸೇರಿ ತುಂಬಾ ಜನ ಸೆಲೆಬ್ರಿಟಿಗಳು ಹೋಗಿದ್ದಾರೆ. ವಿವೇಕ್ ಓಬೆರಾಯ್ ಜತೆ ಮುಖ್ಯ ಅತಿಥಿ ಆಗಿ ಬಂದಿದ್ದರು. ನನ್ನ ಅಪ್ಪ, ಅಮ್ಮ ಕೂಡ ಜತೆಗೆ ಬಂದಿದ್ದರು. ಸುಮ್ಮನೆ ಊಹಾಪೋಹಗಳನ್ನು ಮಾಡಬೇಡಿ' ಎಂದಿದ್ದಾರೆ.
ಇನ್ನು ಈ ಎಲ್ಲಾ ಬೆಳವಣಿಗೆಗಳಿಂದ ತಮ್ಮ ತಾಯಿಗೆ ಎದೆನೋವು ಬಂದಿದೆ ಎಂದಿರುವ ಸಂಜನಾ, 'ನನ್ನ ಅಮ್ಮನಿಗೆ ಎದೆನೋವು ಬಂದಿದೆ. ಅವರಿಗೆ ಏನಾದರೂ ಆದರೆ ನಾನು ಮಾತ್ರ ಸುಮ್ಮನೆ ಇರಲ್ಲ. ಈ ಪ್ರಕರಣದ ಕುರಿತಾಗಿ, ಸಿಸಿಬಿ ಪೊಲೀಸರು ತನಿಖೆ ಮಾಡ್ತಿದ್ದಾರೆ. ಹೀಗಿರುವಾಗ, ನನಗೂ ಈ ಕೇಸ್ಗೂ ಸಂಬಂಧ ಇದೆ ಅಂತ ಏನೂ ಸಾಕ್ಷಿ ಇಲ್ಲದೆ ಹೇಗೆ ಹೇಳ್ತಾರೆ?' ಎಂದು ಸಂಜನಾ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ರಾಗಿಣಿ ಮನೆಯಲ್ಲಿತ್ತು ಗಾಂಜಾ ತುಂಬಿದ್ದ ಸಿಗರೇಟ್ !
ಇನ್ನು ತಮ್ಮನ್ನು ಚಿಯರ್ ಗರ್ಲ್ ಎಂದು ಹೇಳಿರುವ ಪ್ರಶಾಂತ್ ಅವರನ್ನು ಸುಮ್ಮನೆ ಬಿಡಬೇಡಿ ಎಂದು ಶಾಸಕ ಜಮೀರ್ ಅಹ್ಮನ್ ಖಾನ್ ಅವರಿಗೆ ಮನವಿ ಮಾಡಿರುವ ಸಂಜನಾ, 'ನಾನು ಸ್ವಂತ ಸ್ಟ್ರಗಲ್ ಮಾಡಿ ಈ ಮಟ್ಟಕ್ಕೆ ಬಂದಿದ್ದೀನಿ. ಜಮೀರ್ ಅಹ್ಮದ್ ಅವರಲ್ಲಿ ನನ್ನದೊಂದು ಮನವಿ, ಪ್ರಶಾಂತ್ ಸಂಬರಗಿಯನ್ನು ಸುಮ್ಮನೆ ಬಿಡಬೇಡಿ. ಅವನು ನನ್ನನ್ನು ಚಿಯರ್ ಗರ್ಲ್ ಅಂದಿದ್ದಾನೆ. ಅವನಿಗೆ ಚಪ್ಪಲಿಯಲ್ಲಿ ಹೊಡೀತೀನಿ. ಅವನಿಗೆ ಮಾಡೋಕೆ ಬೇರೆ ಕೆಲಸ ಇಲ್ಲ. ಪಬ್ಲಿಸಿಟಿಗೋಸ್ಕರ ಹೀಗೆಲ್ಲಾ ಮಾಡ್ತಿದಾನೆ. ಸೆಲೆಬ್ರಿಟಿ ಅನ್ನೋ ಕಾರಣಕ್ಕೆ ನನ್ನನ್ನ ಸುಮ್ಮನೆ ಟಾರ್ಗೆಟ್ ಮಾಡ್ತಿದ್ದಾನೆ. ಸುದ್ದಿಯಲ್ಲಿರೋರನ್ನ ಬಳಸಿಕೊಂಡು ಗಿಮಿಕ್ ಮಾಡ್ತಿದ್ದಾನೆ. ನಾನೇನೂ ತಪ್ಪು ಮಾಡಿಲ್ಲ. ಈ ಪ್ರಕರಣಕ್ಕೂ ನನಗೆ ಸಂಬಂಧನೇ ಇಲ್ಲ. ನನ್ನ ಹೆಸರೂ ಎಫ್ಐಆರ್ನಲ್ಲಿ ಇಲ್ಲ. ಇದನ್ನು ಇಲ್ಲಿಗೇ ನಿಲ್ಲಿಸಿ' ಎಂದು ಹೇಳಿದ್ದಾರೆ.