ಬೆಂಗಳೂರು: ಮನುಷ್ಯ ಮತ್ತು ಪ್ರಾಣಿ ಬಾಂಧವ್ಯ ಸಾರುವ ಸಿನಿಮಾಗಳು ಕನ್ನಡದಲ್ಲಿ ಈಗಾಗಲೇ ಬಂದಿವೆ ಹಾಗೂ ಬರುತ್ತಿವೆ. ರಕ್ಷಿತ್ ಶೆಟ್ಟಿ ಅಭಿನಯದ ‘ಚಾರ್ಲಿ 777’, ಶಿವರಾಜ್ ಕೆ.ಆರ್.ಪೇಟೆ ನಟಿಸಿರುವ ‘ನಾನು ಮತ್ತು ಗುಂಡ’ ಭಾಗ 1, 2, ‘ನಾಯಿ ಇದೆ ಎಚ್ಚರಿಕೆ’ ತೆರೆಕಂಡು ಗಮನಸೆಳೆದಿವೆ. ಇದೀಗ ಕನ್ನಡದಲ್ಲಿ ಮತ್ತೊಂದು ಶ್ವಾನ ಪ್ರಧಾನ ಸಿನಿಮಾ ಮೂಡಿಬರುತ್ತಿದೆ. ಅದುವೇ ‘ಯಾವ ಮೋಹನ ಮುರಳಿ ಕರೆಯಿತು’. ‘ದ್ಯಾವ್ರೆ’ ಚಿತ್ರಕ್ಕೆ ಸಹಾಯಕ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿರುವ ವಿಶ್ವಾಸ್ ಕೃಷ್ಣ ಈ ಸಿನಿಮಾಕ್ಕೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಬೇಬಿ ಪ್ರಕೃತಿ ಶರಣ್, ಮಾಧವನ್, ಪಟೇಲ್ ವರುಣ್ ರಾಜ್, ಸ್ವಪ್ನಾ ಶೆಟ್ಟಿಗಾರ್ ಕಲಾಬಳಗದಲ್ಲಿದ್ದು, ಇದೇ ಶುಕ್ರವಾರ (ಮಾ.27) ಸಿನಿಮಾ ರಿಲೀಸ್ ಆಗುತ್ತಿದೆ. ವಿಶ್ವಾಸ್ ಕೃಷ್ಣ, ‘ಕಾಲು ಸ್ವಾಧೀನ ಕಳೆದುಕೊಂಡಿರುವ ಬಾಲಕಿಗೆ ಆಶ್ರಮದಲ್ಲಿ ನಾಯಿ ಸಿಗುತ್ತದೆ. ಆ ಬಳಿಕ ಇಬ್ಬರ ನಡುವಿನ ಭಾವನಾತ್ಮಕ ಕಥೆ ಇದು. ಚಿತ್ರದಲ್ಲಿ ಮನಸ್ಸಿಗೆ ಘಾಸಿಗೊಳಿಸುವ ಕೆಲ ಘಟನೆಗಳು ನಡೆಯುತ್ತವೆ. ಅದಕ್ಕಾಗಿ ‘ಯಾವ ಮೋಹನ ಮುರಳಿ ಕರೆಯಿತು’ ಎಂಬ ಶೀರ್ಷಿಕೆ ಸೂಕ್ತ ಎಂದು ಇಟ್ಟಿದ್ದೇವೆ. ಅಂತಾರಾಷ್ಟ್ರೀಯ ಕಿಕ್ ಬಾಕ್ಸಿಂಗ್ ಪಟು ಬೇಬಿ ಪ್ರಕೃತಿ ಶರಣ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಮಲೆನಾಡಿನ ಹಸಿರು ವಾತಾವರಣದಲ್ಲಿ ನಡೆಯುವ ಕಥೆ. ಹಾಗಾಗಿ, ಸಾಗರದ ಕಾರ್ಗಲ್ ಬಳಿ 30 ದಿನಗಳ ಕಾಲ ಶೂಟಿಂಗ್ ಮಾಡಿದ್ದೇವೆ’ ಎಂದು ಮಾಹಿತಿ ನೀಡಿದರು.