ಈ ಬಾರಿಯೂ ಹುಟ್ಟುಹಬ್ಬಕ್ಕೆ ಸಿಗಲ್ಲ 'ಟಾಕ್ಸಿಕ್' ನಟ ಯಶ್ ದರ್ಶನ! ಭೇಟಿ ಮಾಡದಿರಲು ಕಾರಣವೇನು?

Yash
Yash
Published on
ಬೆಂಗಳೂರು: ಸ್ಯಾಂಡಲ್‌ವುಡ್‌ನ ಅಣ್ತಮ್ಮ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅವರು ನಾಳೆ (ಜನವರಿ 8) ತಮ್ಮ 40ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆದರೆ, ಪ್ರತಿ ವರ್ಷದಂತೆ ಈ ಬಾರಿಯೂ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಭೇಟಿಯಾಗಲು ಸಾಧ್ಯವಾಗುತ್ತಿಲ್ಲ. ಈ ಕುರಿತು ಖುದ್ದು ಯಶ್ ಅವರೇ ಸೋಶಿಯಲ್ ಮೀಡಿಯಾದಲ್ಲಿ ಪತ್ರ ಬರೆಯುವ ಮೂಲಕ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ.

ಭೇಟಿ ಮಾಡದಿರಲು ಕಾರಣವೇನು?

ಯಶ್ ಅವರು ಪ್ರಸ್ತುತ ತಮ್ಮ ಬಹುನಿರೀಕ್ಷಿತ ಚಿತ್ರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' (Toxic) ಚಿತ್ರೀಕರಣದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಸಿನಿಮಾವು ಘೋಷಿತ ದಿನಾಂಕದಂತೆ ಅಂದರೆ ಮಾರ್ಚ್ 19ರಂದು ತೆರೆಕಾಣಬೇಕಿದೆ. ಈ ಹಿನ್ನೆಲೆಯಲ್ಲಿ ಚಿತ್ರದ ಕೆಲಸಗಳನ್ನು ನಿಗದಿತ ಸಮಯದಲ್ಲಿ ಮುಗಿಸಲು ಅವರು ಹಗಲಿರುಳು ಶ್ರಮಿಸುತ್ತಿದ್ದಾರೆ.

ತಮ್ಮ ಪತ್ರದಲ್ಲಿ ಯಶ್ ಹೀಗೆ ಬರೆದಿದ್ದಾರೆ

ನನ್ನ ಪ್ರೀತಿಯ ಅಭಿಮಾನಿಗಳೇ, ನೀವು ನನ್ನನ್ನು ಭೇಟಿ ಮಾಡಲು ಎಷ್ಟು ಕಾತರರಾಗಿದ್ದೀರಿ ಎಂಬುದು ನನಗೆ ತಿಳಿದಿದೆ. ನಾನು ಕೂಡ ನಿಮ್ಮನ್ನು ನೋಡಲು ಅಷ್ಟೇ ಹಂಬಲಿಸುತ್ತಿದ್ದೇನೆ. ಆದರೆ 'ಟಾಕ್ಸಿಕ್' ಸಿನಿಮಾ ಸರಿಯಾದ ಸಮಯಕ್ಕೆ ನಿಮ್ಮ ಮುಂದೆ ಬರಬೇಕಿರುವುದರಿಂದ ನಾನು ಕೆಲಸದಲ್ಲಿ ಮುಳುಗಿದ್ದೇನೆ. ಆದ್ದರಿಂದ ಈ ಬಾರಿ ಭೇಟಿಯಾಗಲು ಸಾಧ್ಯವಾಗುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.

ಅಭಿಮಾನಿಗಳಿಗೆ ಸಿಗಲಿದೆ ಬಿಗ್ ಗಿಫ್ಟ್!

ನೇರ ಭೇಟಿ ಸಾಧ್ಯವಾಗದಿದ್ದರೂ, ಅಭಿಮಾನಿಗಳಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ 'ಟಾಕ್ಸಿಕ್' ಸಿನಿಮಾದ ಟೀಸರ್ ನಾಳೆ ಬೆಳಿಗ್ಗೆ 10:10ಕ್ಕೆ ಬಿಡುಗಡೆಯಾಗಲಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರದಲ್ಲಿ ನಯನತಾರಾ, ಕಿಯಾರಾ ಅಡ್ವಾಣಿ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.
ಬೆಂಗಳೂರಿನ ಮೆಟ್ರೋ ರೈಲುಗಳ ಮೇಲೆ ಯಶ್ ಪೋಸ್ಟರ್‌ಗಳನ್ನು ಅಂಟಿಸುವ ಮೂಲಕ ಅಭಿಮಾನಿಗಳು ಈಗಾಗಲೇ ಸಂಭ್ರಮ ಆರಂಭಿಸಿದ್ದಾರೆ. ಭೇಟಿಯಾಗದಿದ್ದರೂ ಸದ್ಯದಲ್ಲೇ ದೊಡ್ಡ ಮಟ್ಟದಲ್ಲಿ ನಿಮ್ಮನ್ನು ಭೇಟಿ ಮಾಡುತ್ತೇನೆ ಎಂದು ಯಶ್ ಭರವಸೆ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net