ವಾಟ್ಸಪ್​ ಬಳಕೆದಾರರೇ ಎಚ್ಚರ..! ತಮಗಾದ ವಂಚನೆ ಬಗ್ಗೆ ಸ್ಕ್ರೀನ್‌ಶಾಟ್‌ ಹಂಚಿಕೊಂಡ 'ಗೂಗ್ಲಿ' ನಟಿ..

 Googly
Googly
Published on
ಮುಂಬೈ: ಸ್ಯಾಂಡಲ್‌ವುಡ್ ಮತ್ತು ಬಾಲಿವುಡ್ ನಟಿ ಕೃತಿ ಕರ್ಬಂಧ ಅವರು ಇತ್ತೀಚೆಗೆ ತಮ್ಮ ಹೆಸರನ್ನು ಬಳಸಿಕೊಂಡು ನಡೆಯುತ್ತಿದ್ದ ವಾಟ್ಸಪ್ ವಂಚನೆಯ ಬಗ್ಗೆ ಅಭಿಮಾನಿಗಳನ್ನು ಎಚ್ಚರಿಸಲು ಇನ್‌ಸ್ಟಾಗ್ರಾಮ್‌ನಲ್ಲಿ ಸ್ಕ್ರೀನ್‌ಶಾಟ್‌ವೊಂದನ್ನು ಹಂಚಿಕೊಂಡಿದ್ದಾರೆ.
ಹೌದು, ಕೃತಿ ಕರ್ಬಂಧ ಅವರ ಹೆಸರನ್ನು ದುರ್ಬಳಕೆ ಮಾಡಿಕೊಂಡು ಅಪರಿಚಿತ ವ್ಯಕ್ತಿಯೊಬ್ಬರು ಚಲನಚಿತ್ರೋದ್ಯಮದ ಜನರಿಗೆ ಮತ್ತು ಸಾಮಾನ್ಯರಿಗೆ ವಾಟ್ಸಪ್ ಸಂದೇಶಗಳನ್ನು ಕಳುಹಿಸುತ್ತಿದ್ದರು. ಈ ವಂಚಕ ಕೃತಿ ಅವರ ಫೋಟೋವನ್ನೇ ತನ್ನ 'ಡಿಪಿ' (Profile Picture) ಆಗಿ ಬಳಸಿಕೊಂಡು, ತಾನು ಕೃತಿ ಕರ್ಬಂಧ ಎಂದು ನಂಬಿಸಿ ಹಣದ ಬೇಡಿಕೆ ಅಥವಾ ವೃತ್ತಿಪರ ಅವಕಾಶಗಳ ಹೆಸರಿನಲ್ಲಿ ಮೋಸ ಮಾಡಲು ಯತ್ನಿಸಿದ್ದಾನೆ.

ಸ್ಕ್ರೀನ್​ ಶಾಟ್​ ಕೃತಿ ಹಂಚಿಕೊಂಡು ಎಚ್ಚರಿಕೆ..!

ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಕೃತಿ ಅವರು ಆ ನಕಲಿ ಚಾಟ್‌ನ ಸ್ಕ್ರೀನ್‌ಶಾಟ್ ಅನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಅದಕ್ಕೆ "ಇದು ನಾನಲ್ಲ, ಎಚ್ಚರದಿಂದಿರಿ" ಎಂಬ ಸಂದೇಶವನ್ನು ಬರೆದಿದ್ದಾರೆ. ಅಲ್ಲದೆ, "ನನ್ನ ಹೆಸರಿನಲ್ಲಿ ಯಾರಾದರೂ ಸಂದೇಶ ಕಳುಹಿಸಿದರೆ ಅಥವಾ ಹಣ ಕೇಳಿದರೆ ದಯವಿಟ್ಟು ನಂಬಬೇಡಿ. ಇದು ಸಂಪೂರ್ಣವಾಗಿ ಸುಳ್ಳು ಮತ್ತು ವಂಚನೆಯ ಜಾಲ" ಎಂದು ಸ್ಪಷ್ಟಪಡಿಸಿದ್ದಾರೆ.

ಮುಂಜಾಗ್ರತೆ ಏಕೆ ಮುಖ್ಯ?

ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳ ಹೆಸರಿನಲ್ಲಿ 'ಫಿಶಿಂಗ್' ಮತ್ತು 'ಸೈಬರ್ ವಂಚನೆ'ಗಳು ಹೆಚ್ಚಾಗುತ್ತಿವೆ. ವಂಚಕರು ನಟ-ನಟಿಯರ ಆಪ್ತರು ಅಥವಾ ಮ್ಯಾನೇಜರ್‌ಗಳಂತೆ ನಟಿಸಿ ಹಣ ದೋಚುವ ಪ್ರಯತ್ನ ಮಾಡುತ್ತಾರೆ. ಕೃತಿ ಅವರು ಸಮಯೋಚಿತವಾಗಿ ಈ ಬಗ್ಗೆ ಪ್ರತಿಕ್ರಿಯಿಸಿರುವುದು ಅವರ ಅಭಿಮಾನಿಗಳು ಸಂಕಷ್ಟಕ್ಕೆ ಸಿಲುಕದಂತೆ ತಡೆಯಲು ಸಹಕಾರಿಯಾಗಿದೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net