ಭಾರತೀಯ ಚಿತ್ರರಂಗದಲ್ಲಿ ಹಿರಿಯ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್ ಅವರದು ಬಹುದೊಡ್ಡ ಹೆಸರು. ಕನ್ನಡ, ಹಿಂದಿ, ತೆಲುಗು, ಮಲಯಾಳಂ, ತಮಿಳು ಸೇರಿ 60 ಸಿನಿಮಾಗಳಿಗೆ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಕನ್ನಡದಲ್ಲಿ ರಾಜ್ ಕುಮಾರ್ ಅಭಿನಯದ ‘ಹಾಲು ಜೇನು’, ‘ಚಲಿಸುವ ಮೋಡಗಳು’, ‘ಭಾಗ್ಯದ ಲಕ್ಷ್ಮೀ ಬಾರಮ್ಮ’ ‘ದೇವತಾ ಮನುಷ್ಯ’ ಮತ್ತು ಶಿವರಾಜಕುಮಾರ್ ನಟನೆಯ ಮೊದಲ ಚಿತ್ರ ‘ಆನಂದ್’, ‘ಸಂಯುಕ್ತ’, ಕಮಲ್ ಹಾಸನ್‌ರ ಮೂಕಿ ಸಿನಿಮಾ ‘ಪುಷ್ಪಕ ವಿಮಾನ’ಕ್ಕೆ ಆ್ಯಕ್ಷನ್-ಕಟ್ ಹೇಳಿದ ಹೆಗ್ಗಳಿಕೆ ಅವರಿಗೆ ಸಲ್ಲುತ್ತದೆ. ಇಂತಹ ಶ್ರೀನಿವಾಸ್‌ರಿಗೆ ಎರಡು ರಾಷ್ಟ್ರಪ್ರಶಸ್ತಿ (‘ಪುಷ್ಪಕ ವಿಮಾನ’ ಮತ್ತು ‘ದಿಕ್ಕತ್ರ ಪಾರ್ವತಿ’) ಮೂರು ಕರ್ನಾಟಕ ರಾಜ್ಯ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳು ಸಂದಿವೆ. ಪ್ರಸ್ತುತ ಸಿಂಗೀತಂ ಶ್ರೀನಿವಾಸ್ ರಾವ್ ಅವರಿಗೆ 94 ವರ್ಷ ವಯಸ್ಸು. ಈ ಇಳಿವಯಸ್ಸಿಲ್ಲೂ 19 ವರ್ಷದ ಉತ್ಸಾಹಿಯಂತೆ ಮತ್ತೆ ಡೈರೆಕ್ಟರ್ ಕ್ಯಾಪ್ ಧರಿಸಿದ್ದಾರೆ. ಹೊಸ ತೆಲುಗು ಸಿನಿಮಾ ಘೋಷಿಸಿದ್ದಾರೆ. 2013ರಲ್ಲಿ ತೆರೆಕಂಡಿದ್ದ ತೆಲುಗಿನ ‘ವೆಲ್‌ಕಂ ಒಬಾಮಾ’ ಶ್ರೀನಿವಾಸ್ ರಾವ್ ನಿರ್ದೇಶನ ಕೊನೆಯ ಸಿನಿಮಾ. ಬಳಿಕ ನಿರ್ದೇಶನದಿಂದ ದೂರ ಉಳಿದಿದ್ದರು. ಇದೀಗ 13 ವರ್ಷಗಳ ಬಳಿಕ ನಿರ್ದೇಶನಕ್ಕೆ ಮರಳಿದ್ದು, ವೃತ್ತಿ ಜೀವನದ 61ನೇ ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಟೀಸರ್ ಝಲಕ್ ಮೂಲಕ ಇತ್ತೀಚೆಗೆ ಸಿನಿಮಾ ಘೋಷಿಸಲಾಗಿದೆ. ಶೀಘ್ರದಲ್ಲಿಯೇ ಟೈಟಲ್ ಜತೆಗೆ ತಾರಾಬಳಗವನ್ನು ಅನೌನ್ಸ್ ಮಾಡಲಾಗುವುದು ಎಂದು ತಂಡ ಹೇಳಿಕೊಂಡಿದೆ. ಈಗಾಗಲೇ ಚಿತ್ರೀಕರಣ ಆರಂಭವಾಗಿದ್ದು ಚಿತ್ರಕ್ಕೆ ದೇವಿಶ್ರೀ ಪ್ರಸಾದ್ ಸಂಗೀತ ಇರಲಿದೆ. ಇನ್ನು ಸಿಂಗೀತಂ ಶ್ರೀನಿವಾಸ್ ರಾವ್ ನಿರ್ದೇಶನಕ್ಕೆ ಮರಳಿರುವುದಕ್ಕೆ ನಟ ಶಿವರಾಜಕುಮಾರ್, ನಿರ್ದೇಶಕ ಎಸ್.ಎಸ್.ರಾಜಮೌಳಿ ಸೇರಿ ಹಲವರು ಸಂತಸ ವ್ಯಕ್ತಪಡಿಸಿ, ಶುಭ ಕೋರಿದ್ದಾರೆ. -ಏಜೆನ್ಸೀಸ್