ಕಳೆದ ವರ್ಷ "ಹೈನಾ', "ಹೇ ಪ್ರಭು' ಚಿತ್ರಗಳನ್ನು ನಿರ್ದೇಶಿಸಿದ್ದ ವೆಂಕಟ್ ಭಾರದ್ವಾಜ್ ಇದೀಗ ಮತ್ತೊಂದು ಹೊಸ ಕಥೆಯೊಂದಿಗೆ ವಾಪಸ್ಸಾಗಿದ್ದಾರೆ. ಹೆಸರು "ಚಾರ್ಜ್ಶೀಟ್ 03-08'. ಇದು ನೈಜ ಘಟನೆಯಾಧಾರಿತ ಇನ್ವೆಸ್ಟಿಗೇಷನ್ ಥ್ರಿಲ್ಲರ್ ಜಾನರ್ ಚಿತ್ರವಾಗಿದ್ದು, ನಿರ್ದೇಶನದ ಜತೆಗೆ ಚಿತ್ರಕಥೆ ಮತ್ತು ಸಂಭಾಷಣೆಯ ಜವಾಬ್ದಾರಿಯನ್ನೂ ವೆಂಕಟ್ ಅವರೇ ಹೊತ್ತಿದ್ದಾರೆ. ಇತ್ತೀಚೆಗಷ್ಟೆ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಂಡಿದ್ದು, "ನಿವೃತ್ತ ಪೊಲೀಸ್ ಅಧಿಕಾರಿ ಎಸ್.ಕೆ. ಉಮೇಶ್ ಬರೆದಿರುವ "ಐವಿಟ್ನೆಸ್' ಕಾದಂಬರಿ ಆಧರಿಸಿ ಈ ಸಿನಿಮಾ ಮಾಡಿದ್ದೇನೆ. ಕಲಾಸಿಪಾಳ್ಯದಲ್ಲಿ 2003ರಲ್ಲಿ ನಡೆದ ನೈಜ ಟನೆಗೆ ಅವರು ಕಾದಂಬರಿ ರೂಪ ನೀಡಿದ್ದರು. ಇದೀಗ ಅವರ ನೈಜ ಅನುಭವಗಳಿಗೆ ಸಿನಿಮಾ ರೂಪ ನೀಡುವ ಪ್ರಯತ್ನ ಮಾಡಿದ್ದೇವೆ. "ಚಾರ್ಜ್ಶೀಟ್ 03&08' ಕೇವಲ ಒಂದು ಸಿನಿಮಾ ಅಲ್ಲ. ಇದು ನ್ಯಾಯಕ್ಕಾಗಿ ನಡೆದ ಹೋರಾಟದ ದಾಖಲೆ. ಸಮಾಜದ ಕರಾಳ ಮುಖವನ್ನು, ಸತ್ಯದ ದಾರಿಯಲ್ಲಿನ ಸಂಕಷ್ಟಗಳನ್ನು ಬಿಂಬಿಸುವ ನಮ್ಮ ಚಿತ್ರ ಪ್ರೇಕ್ಷಕರ ಮನಸ್ಸನ್ನು ನಡುಗಿಸುವ ಶಕ್ತಿ ಹೊಂದಿದೆ' ಎಂದು ಮಾಹಿತಿ ನೀಡುತ್ತಾರೆ ವೆಂಕಟ್ ಭಾರದ್ವಾಜ್. ಚಿತ್ರದಲ್ಲಿ ಹಿರಿಯ ನಟ ಸುಂದರ್ ರಾಜ್, ಹರ್ಷಾರ್ಜುನ್, ಅಮರ್, ಸತ್ಯಶ್ರೀ, ಚೇತನಾ ಖೋಟ್, ಡಾ. ಪ್ರಮೋದ್ ಹಿರೇಮಠ್ ಜತೆಗೆ ವೆಂಕಟ್ ಕೂಡ ನಟಿಸಿದ್ದಾರೆ. ಉಳಿದಂತೆ ಚಿತ್ರದಲ್ಲಿ ಮೂರು ಹಾಡುಗಳಿದ್ದು ಸಮೀರ್ ಕುಲಕರ್ಣಿ ಸಂಗೀತ, ಶಮೀಕ್ ವಿ. ಭಾರದ್ವಾಜ್ ಸಂಕಲನ, ಪ್ರಮೋದ್ ಭಾರತೀಯ ಛಾಯಾಗ್ರಹಣ ಚಿತ್ರಕ್ಕಿರಲಿದೆ.