ಏ.10ಕ್ಕೆ ‘ಗ್ಯಾಂಗ್ಸ್ ಆಫ್​ ಯುಕೆ’ : ಗ್ಯಾಂಗ್‌ಸ್ಟರ್ ಕಥೆಯಷ್ಟೇ ಅಲ್ಲ, ಹೆಣ್ಣಿನ ರಕ್ತಕಣ್ಣೀರಿನ ಕಥೆ ಎಂದ ರವಿ ಶ್ರೀವತ್ಸ

ಗ್ಯಾಂಗ್ಸ್ ಆಫ್ ಯುಕೆ ಚಿತ್ರದ ಪೋಸ್ಟರ್​
ಗ್ಯಾಂಗ್ಸ್ ಆಫ್ ಯುಕೆ ಚಿತ್ರದ ಪೋಸ್ಟರ್​
Published on
ಬೆಂಗಳೂರು: ‘ಡೆಡ್ಲಿ ಸೋಮ’ ಖ್ಯಾತಿಯ ರವಿ ಶ್ರೀವತ್ಸ ನಿರ್ದೇಶನದ ‘ಗ್ಯಾಂಗ್ಸ್ ಆಫ್​ ಯುಕೆ’ ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿದ್ದು, ಇದೇ ಏ.10ಕ್ಕೆ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಕೆಲ ದಿನಗಳ ಹಿಂದಷ್ಟೇ ಕೌರ್ಯದ ಅಂಶಗಳಿದ್ದ ಟೀಸರ್ ಮೂಲಕ ಈ ಚಿತ್ರ ಸದ್ದು ಮಾಡಿತ್ತು. ಇದೀಗ ಬಿಡುಗಡೆ ದಿನಾಂಕ ಸಮೀಪಿಸುತ್ತಿರುವಾಗಲೇ ಚಿತ್ರತಂಡ ಪ್ರಚಾರ ಕಾರ್ಯಗಳನ್ನು ಆರಂಭಿಸಿದೆ. ರವಿ ಶ್ರೀವತ್ಸ, ‘ಕಥೆಯ ಪಾತ್ರಧಾರಿಗಳು ಇಂದಿಗೂ ಜೀವಂತವಾಗಿದ್ದು, ವ್ಯವಸ್ಥೆಯ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಯಾರ ನೆರವೂ ಸಿಗದ ಕಾರಣ ರಕ್ತಕಣ್ಣೀರು ಸುರಿಸುತ್ತಿದ್ದಾರೆ. ಕಥೆಯಲ್ಲಿ ಹೊಡೆದಾಟ- ಬಡಿದಾಟ ಅಷ್ಟೇ ಅಲ್ಲ, ತಾಯಿಯ ಕಣ್ಣೀರೂ ಇದೆ. ಇದಕ್ಕೂ ಭೀಮಾತೀರದ ಹಂತಕರ ಕಥೆಗೂ ಯಾವುದೇ ಸಂಬಂಧವಿಲ್ಲ. ಒಂದು ಸಣ್ಣ ಗಲಾಟೆಯಿಂದ ಶುರುವಾಗಿ, ಜನ ಹೇಗೆ ಹೋರಾಡುತ್ತಾರೆ? ರಕ್ತ ಹೇಗೆ ಹರಿಯುತ್ತದೆ? ಎಂಬುದನ್ನು ತೋರಿಸಿದ್ದೇವೆ’ ಎಂದು ಮಾಹಿತಿ ನೀಡಿದರು. ಸಂಭಾಷಣೆಕಾರ ರಮೇಶ್, ‘ಶಾಂತಿ ಬೇಕು ಎಂದರೆ ಕ್ರಾಂತಿ ಆಗಲೇಬೇಕು ಎನ್ನುವ ಮಾತಿದೆ. ಆ ತಿರುಳು ಈ ಕಥೆಯಲ್ಲಿದೆ. ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಯಿಂದ ಸೀಕ್ವೆಲ್‌ಗೆ ಯೋಜನೆ ರೂಪುಗೊಳ್ಳುತ್ತಿದೆ. ಈಗಾಗಲೇ 30ರಷ್ಟು ಮುಂದಿನ ಭಾಗದ ಚಿತ್ರೀಕರಣವಾಗಿದೆ’ ಎಂದು ಹೇಳಿದರು. ಈ ಚಿತ್ರದಲ್ಲಿ ಒರಟ ಪ್ರಶಾಂತ್, ಮುನಿ, ಪದ್ಮಾ ವಾಸಂತಿ, ಸೋನು ಉಪಾಧ್ಯ, ಪ್ರವೀಣ್, ಉಗ್ರಂ ರೆಡ್ಡಿ, ಸತ್ಯ, ಧಿಲ್ಲಾನ್, ನವೀನ್, ಪ್ರಜ್ವಲ್ ಮಸ್ಕಿ, ಉಮೇಶ್, ವಿಕಾಸ್ ಕಲಾಬಳಗದಲ್ಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net