ನಮ್ಮಿಂದ ಅದು... ಟಾಕ್ಸಿಕ್​ ಟೀಸರ್​ ವಿವಾದದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಸೆನ್ಸಾರ್ ಮಂಡಳಿ​ ಅಧ್ಯಕ್ಷ! Toxic

ಟಾಕ್ಸಿಕ್​ ಟೀಸರ್​ ವಿವಾದದ ಬಗ್ಗೆ ಸೆನ್ಸಾರ್ ಮಂಡಳಿ​ ಅಧ್ಯಕ್ಷ ಪ್ರಸೂನ್ ಜೋಶಿ ಅಭಿಪ್ರಾಯ
ಟಾಕ್ಸಿಕ್​ ಟೀಸರ್​ ವಿವಾದದ ಬಗ್ಗೆ ಸೆನ್ಸಾರ್ ಮಂಡಳಿ​ ಅಧ್ಯಕ್ಷ ಪ್ರಸೂನ್ ಜೋಶಿ ಅಭಿಪ್ರಾಯ
Published on

ಪ್ರಮುಖ ಮುಖ್ಯಾಂಶಗಳು

  • ರಾಕಿಂಗ್ ಸ್ಟಾರ್​ ಯಶ್​ ಹುಟ್ಟುಹಬ್ಬದ ಪ್ರಯುಕ್ತ ಬಿಡಗಡೆಯಾದ ಟಾಕ್ಸಿಕ್ ಸಿನಿಮಾ ಟೀಸರ್
  • ಸಾಮಾಜಿಕ​ ಜಾಲತಾಣದಲ್ಲಿ ಸಖತ್​ ಸದ್ದು ಮಾಡಿದ ಬಹುನಿರೀಕ್ಷಿತ ಸಿನಿಮಾದ ದೃಶ್ಯ ಝಲಕ್​
  • ಟಾಕ್ಸಿಕ್​ ಸಿನಿಮಾ ಟೀಸರ್​ನಲ್ಲಿರುವ ಹಸಿಬಿಸಿ ದೃಶ್ಯಗಳ ವಿರುದ್ಧ ವ್ಯಾಪಕ ಟೀಕೆ
  • ಟೀಸರ್​ ವಿವಾದದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಸೆನ್ಸಾರ್ ಮಂಡಳಿ​ ಅಧ್ಯಕ್ಷ
Toxic: ರಾಕಿಂಗ್​ ಸ್ಟಾರ್​ ಯಶ್​ ಅವರ ಹುಟ್ಟುಹಬ್ಬದ ನಿಮಿತ್ತ ಜ.8ರಂದು ಬಿಡುಗಡೆಯಾದ ಬಹುನಿರೀಕ್ಷಿತ ಟಾಕ್ಸಿಕ್​ ಸಿನಿಮಾದ ಟೀಸರ್​ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿರುವುದು ನಿಮಗೆಲ್ಲರಿಗೂ ಗೊತ್ತೇ ಇದೆ. ಟೀಸರ್​ನಲ್ಲಿನ ಅಶ್ಲೀಲ ದೃಶ್ಯದ ಬಗ್ಗೆ ಪರ-ವಿರೋಧ ಚರ್ಚೆಯಾಗುತ್ತಿದೆ. ಸೆನ್ಸಾರ್​ ಮಂಡಳಿ ಇಂತಹ ದೃಶ್ಯಗಳಿಗೆ ಕಡಿವಾಣ ಹಾಕಬೇಕು ಎಂಬ ಆಗ್ರಹಗಳು ಕೇಳಿಬಂದಿವೆ. ಇದರ ಬೆನ್ನಲ್ಲೇ ಸೆನ್ಸಾರ್​ ಮಂಡಳಿಯ ಮುಖ್ಯಸ್ಥರು ನೀಡಿರುವ ಹೇಳಿಕೆ ಎಲ್ಲರ ಹುಬ್ಬೇರಿಸಿದೆ.
ಅಂದಹಾಗೆ, ಟೀಸರ್‌ನಲ್ಲಿರುವ ಬೋಲ್ಡ್ ಕಂಟೆಂಟ್‌ನಿಂದಾಗಿ ಅನೇಕ ಜನರು ಟೀಸರ್‌ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ಆಯೋಗವು ಸಹ ಈ ಟೀಸರ್ ಬಗ್ಗೆ ಗಂಭೀರ ನಿಲುವು ತೆಗೆದುಕೊಂಡಿದೆ. ಈ ಟೀಸರ್ ಅನ್ನು ಸಾಮಾಜಿಕ ಜಾಲತಾಣದಿಂದ ತೆಗೆದು ಹಾಕಲು ಆದೇಶಗಳನ್ನು ಹೊರಡಿಸಿದೆ. ಇದಲ್ಲದೆ, ಕೆಲವು ರಾಜಕೀಯ ಪಕ್ಷಗಳು ಕೂಡ ಈ ಟೀಸರ್ ಬಗ್ಗೆ ಅಸಮಾಧಾನ ಹೊರಹಾಕಿದ್ದು, ಸೆನ್ಸಾರ್ ವಿರುದ್ಧ ಕಿಡಿಕಾರುತ್ತಿವೆ.
ಆದಾಗ್ಯೂ, ಸೆನ್ಸಾರ್ ಮಂಡಳಿಯ ಅಧ್ಯಕ್ಷ ಪ್ರಸೂನ್ ಜೋಶಿ ಮಾತ್ರ ಈ ವಿಚಾರವಾಗಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಟಾಕ್ಸಿಕ್​ ಟೀಸರ್ ವಿವಾದದ ಬಗ್ಗೆ ನಾನು ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಆದರೆ, ನಾನು ಒಂದು ವಿಷಯವನ್ನು ಹೇಳಲು ಬಯಸುತ್ತೇನೆ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ವೀಕ್ಷಿಸುವ ವಿಡಿಯೋಗಳಿಗೆ ಯಾವುದೇ ಸೆನ್ಸಾರ್ ಇಲ್ಲ ಎಂದರು.
ನಮಗೆ ಡಿಜಿಟಲ್​ ಪ್ಲಾಟ್​ಫಾರ್ಮ್​ಗಳ ಮೇಲೆ ನಿಯಂತ್ರಣವಿಲ್ಲ ಎನ್ನುವುದನ್ನು ಜನರು ತಿಳಿದುಕೊಳ್ಳಬೇಕು. ಪ್ರತಿಯೊಂದು ವಿಡಿಯೋವನ್ನು ಸೆನ್ಸಾರ್ ಮಾಡಲಾಗುತ್ತದೆ ಎಂಬ ಕಲ್ಪನೆಯನ್ನು ಮೊದಲು ಬಿಡಿ. ಅನೇಕ ಜನರು OTT ವಿಷಯವನ್ನು ಸಹ ಸೆನ್ಸಾರ್ ಮಾಡಲಾಗುತ್ತದೆ ಎಂದು ಭಾವಿಸುತ್ತಾರೆ. ಆದರೆ, ಅವು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಿದರು. ಸದ್ಯ ಪ್ರಸೂನ್​ ಜೋಶಿ ಅವರು ಮಾಡಿರುವ ಈ ಕಾಮೆಂಟ್‌ಗಳು ಉದ್ಯಮ ವಲಯಗಳಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.

ಸಖತ್​ ಸದ್ದು ಮಾಡಿದ ಟಾಕ್ಸಿಕ್​ ಟೀಸರ್​

ಅಂದಹಾಗೆ, 'ಟಾಕ್ಸಿಕ್' ಚಿತ್ರದ ಟೀಸರ್ 200 ಮಿಲಿಯನ್​ಗೂ ಅಧಿಕ ವೀಕ್ಷಣೆ ಪಡೆದು ಜಾಲತಾಣದಲ್ಲಿ ಧೂಳೆಬ್ಬಿಸಿದೆ. ಟೀಸರ್ ಮೂಲಕ ಯಶ್ ಅವರ ಪಾತ್ರದ ಹೆಸರನ್ನು 'ರಾಯ' ಎಂದು ಪರಿಚಯಿಸಲಾಗಿದೆ. ಈ ಮೊದಲಿನ ಪೋಸ್ಟರ್‌ಗಳಲ್ಲಿ ಕೇವಲ ಬೆನ್ನಿನ ಭಾಗ ಮಾತ್ರ ತೋರಿಸಲಾಗಿತ್ತು. ಈಗ ಯಶ್ ಅವರ ಪೂರ್ಣ ಖದರ್ ರಿವೀಲ್ ಆಗಿದೆ. ಯಶ್ ಅವರು ವಿಂಟೇಜ್ ಶೈಲಿಯ ಟಾಮಿ ಗನ್ ಹಿಡಿದು ವಿಲನ್‌ಗಳನ್ನು ಸದೆಬಡಿಯುವ ದೃಶ್ಯ ಫ್ಯಾನ್ಸ್‌ಗೆ ಭರ್ಜರಿ ಕಿಕ್ ನೀಡಿದೆ. ಅವರ ಸ್ಟೈಲ್ ಮತ್ತು ಗನ್ ಹಿಡಿದ ರೀತಿ ತುಂಬಾ ರಗಡ್ ಆಗಿದೆ.
ಟೀಸರ್ ಆರಂಭವಾಗುವುದೇ ಒಂದು ಸ್ಮಶಾನದ ದೃಶ್ಯದೊಂದಿಗೆ. ಅಲ್ಲಿ ನಡೆಯುತ್ತಿರುವ ಅಂತ್ಯಕ್ರಿಯೆಯ ನಡುವೆ ಯಶ್ ಅವರು ಕಾರಿನಲ್ಲಿ ಎಂಟ್ರಿ ಕೊಟ್ಟು, ಗುಂಡಿನ ಮಳೆ ಸುರಿಸುವುದೇ ಟೀಸರ್​ನ ಹೈಲೈಟ್. ಟೀಸರ್‌ನ ವಿಶುವಲ್ಸ್ ಮತ್ತು ಆಕ್ಷನ್ ಸನ್ನಿವೇಶಗಳು ಪಕ್ಕಾ ಹಾಲಿವುಡ್ ಗುಣಮಟ್ಟದಲ್ಲಿವೆ. ಸಿನಿಮಾದ ಕಲರ್ ಗ್ರೇಡಿಂಗ್ ಮತ್ತು ಕ್ಯಾಮೆರಾ ವರ್ಕ್ ಅಂತಾರಾಷ್ಟ್ರೀಯ ಮಟ್ಟದ ಚಿತ್ರಗಳನ್ನು ನೆನಪಿಸುತ್ತದೆ. ಟೀಸರ್ ಕೊನೆಯಲ್ಲಿ ಯಶ್ ಅವರು ಸಿಗಾರ್ ಹಚ್ಚುತ್ತಾ ಹೇಳುವ "Daddy's Home" ಎಂಬ ಸಂಭಾಷಣೆ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಆಗುತ್ತಿದೆ. ಅಲ್ಲದೆ, ಟೀಸರ್‌ನಲ್ಲಿ ಯಶ್ ಅವರು ಕಾರಿನ ಒಳಗೆ ಯುವತಿಯೊಟ್ಟಿಗೆ ಇರುವ ಒಂದು ಬೋಲ್ಡ್ ದೃಶ್ಯವಿದ್ದು, ಇದು ಸಿನೆಮಾ ಎಷ್ಟು 'ರಾ' (Raw) ಆಗಿರಲಿದೆ ಎಂಬುದನ್ನು ತೋರಿಸುತ್ತದೆ.
ಈಗಾಗಲೇ ಘೋಷಣೆಯಾಗಿರುವಂತೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ , ರುಕ್ಮಿಣಿ ವಸಂತ್ ಮತ್ತು ತಾರಾ ಸುತಾರಿಯಾ ಅವರ ಪಾತ್ರಗಳು ಈ ಡಾರ್ಕ್ ಜಗತ್ತಿನಲ್ಲಿ ಎಷ್ಟು ಮುಖ್ಯ ಎಂಬುದನ್ನು ಟೀಸರ್ ಬಿಂಬಿಸುತ್ತದೆ. ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ಯಶ್ ಅವರನ್ನು ಹಿಂದೆಂದೂ ಕಾಣದ ರೀತಿಯಲ್ಲಿ ತೋರಿಸಿದ್ದಾರೆ. ಕೇವಲ ಆಕ್ಷನ್ ಮಾತ್ರವಲ್ಲದೆ, ಒಂದು ಗಂಭೀರ ಮತ್ತು ತೀವ್ರವಾದ ಕಥೆ ಇದರಲ್ಲಿ ಅಡಗಿದೆ. ಟೀಸರ್‌ನ ಮ್ಯೂಸಿಕ್ ಸಖತ್ ಪವರ್‌ಫುಲ್ ಆಗಿದೆ. ಪ್ರತಿ ಶಬ್ದ ಮತ್ತು ಬಿಜಿಎಂ ದೃಶ್ಯದ ತೀವ್ರತೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.
ಟೀಸರ್​ನಲ್ಲಿ ಕೊನೆಯಲ್ಲಿ ಚಿತ್ರತಂಡ ಮತ್ತೊಮ್ಮೆ ಸಿನಿಮಾ ಬಿಡುಗಡೆಯ ದಿನಾಂಕವನ್ನು ಖಚಿತಪಡಿಸಿದೆ. ಮಾರ್ಚ್ 19, 2026 ರಂದು 'ಟಾಕ್ಸಿಕ್' ವಿಶ್ವದಾದ್ಯಂತ ತೆರೆಕಾಣಲಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net