ಈ ಶುಕ್ರವಾರ ಹಳಬರ ಜತೆಗೆ ಹೊಸಬರು ಸೇರಿ ಒಟ್ಟು ಏಳು ಚಿತ್ರಗಳು ತೆರೆಗೆ ಬರುತ್ತಿವೆ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ, ಉಪೇಂದ್ರ, ರಮ್ಯಾ ಮುಖ್ಯಭೂಮಿಕೆಯಲ್ಲಿರುವ ‘ರಕ್ತ ಕಾಶ್ಮೀರ’ ಚಿತ್ರಕ್ಕೆ ಕೊನೆಗೂ ಬಿಡುಗಡೆ ಭಾಗ್ಯ ದೊರೆತಿದೆ. ದಶಕಗಳ ಹಿಂದೆ ಸಿದ್ಧವಾಗಿದ್ದ ಈ ಚಿತ್ರದ ಹಾಡಿನಲ್ಲಿ ವಿಷ್ಣುವರ್ಧನ್, ಅಂಬರೀಷ್, ಪುನೀತ್ ರಾಜಕುಮಾರ್ ಸೇರಿ 16 ಕಲಾವಿದರು ಪಾಲ್ಗೊಂಡಿರುವುದು ವಿಶೇಷ. ಕಿರುಚಿತ್ರವಾಗಿ ಗಮನ ಸೆಳೆದಿದ್ದ ಜ್ಯೋತಿರಾವ್ ಮೋಹಿತ್ ನಿರ್ದೇಶನದ ‘ಅಮೃತ ಅಂಜನ್’, ಐಟಿ ಉದ್ಯಮಿ ಪೃಥ್ವಿರಾಜ್ ಪಾಟೀಲ್ ನಟಿಸಿ, ನಿರ್ದೇಶಿಸಿರುವ ‘ವಿಕಲ್ಪ’, ದಾಸರ ಕುರಿತು ಸಿನಿಮಾಗಳನ್ನು ನಿರ್ದೇಶಿಸಿ ಗಮನ ಸೆಳೆದಿರುವ ಮಧುಸೂದನ್ ಹವಾಲ್ದಾರ್‌ರ ‘ಶ್ರೀ ಜಗನ್ನಾಥ ದಾಸರು ಭಾಗ 2’, ಹೊಸಬರಾದ ಅವಿನಾಶ್ ಬಾಬು ನಿರ್ದೇಶನದ ‘ಬೋಸ್’, ಲಕ್ಷ್ಮೀಪತಿ ಬಾಲಾಜಿ ನಟನೆಯ ‘ಮಾವುತ’, ಉತ್ತರ ಕರ್ನಾಟಕ ಕಥೆಗೆ ಕರಾವಳಿಯ ಅನೀಶ್ ವೇಣೂರು ನಿರ್ದೇಶಿಸಿರುವ ‘ಹೌದ್ದೋ ಹುಲಿಯಾ’ ಚಿತ್ರಗಳು ಈ ವಾರ ತೆರೆಕಾಣುತ್ತಿವೆ.