ಕಲೆಯಲ್ಲಿ ಭಯ, ಭೀತಿ ಇರದೆ, ಅಭಿವ್ಯಕ್ತಿ ಇರಲಿ: ದಿನೇಶ್ ಗುಂಡೂರಾವ್ ಅಭಿಮತ

ಹಂಸಲೇಖಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ
ಹಂಸಲೇಖಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ
Published on

ಪ್ರಮುಖ ಮುಖ್ಯಾಂಶಗಳು

  • ಪ್ರಜಾಪ್ರಭುತ್ವ ಉಳಿಸುವ ಜವಾಬ್ದಾರಿ ಕಲೆಯ ಮೇಲಿದೆ
  • ಯಾರ ಹಂಗೂ ಇಲ್ಲದೆ ವ್ಯವಸ್ಥೆಯನ್ನು ಧೈರ್ಯದಿಂದ ಪ್ರಶ್ನಿಸಿ
  • ಕಲಾವಿದರು ಜವಾಬ್ದಾರಿ ಅರಿತು ಕೆಲಸ ಮಾಡಲಿ
ಬೆಂಗಳೂರು : ಕಳೆದ ಎಂಟು ದಿನಗಳಿಂದ ನಡೆಯುತ್ತಿದ್ದ 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವವು ಶುಕ್ರವಾರಕ್ಕೆ ಸಂಪನ್ನಗೊಂಡಿತು. ದೇವೇಂದ್ರ ಬಡಿಗೇರ್ ನಿರ್ದೇಶನದ ‘ವನ್ಯ’ ಚಿತ್ರವು ಕನ್ನಡದ ಅತ್ಯುತ್ತಮ ಸಿನಿಮಾ ಆಗಿ ಹೊರಹೊಮ್ಮಿತು. ಪ್ರತಿ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದ ಸಿನಿಮಾಗೆ 10 ಲಕ್ಷ ರೂ., ದ್ವಿತೀಯ 5 ಲಕ್ಷ ರೂ. ಹಾಗೂ ತೃತೀಯ ಸ್ಥಾನಕ್ಕೆ 2 ಲಕ್ಷ ರೂ. ನೀಡಲಾಯಿತು.
ಲುಲು ಮಾಲ್‌ನಲ್ಲಿ ಸಂಜೆ ಆಯೋಜಿಸಿದ್ದ ಸಮಾರೋಪದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶಸ್ತಿ ಪ್ರದಾನ ಮಾಡಿದರು. ಬಳಿಕ ಮಾತನಾಡಿದ ಅವರು, ಕಲೆಯನ್ನು ಉತ್ಕೃಷ್ಟ ಮಟ್ಟಕ್ಕೆ ಒಯ್ಯುವ ಉದ್ದೇಶ ಈ ಚಿತ್ರೋತ್ಸವದಿಂದ ಸಾಧ್ಯವಾಗಿದೆ. ಪ್ರಜಾಪ್ರಭುತ್ವ ಉಳಿಸುವ ಜವಾಬ್ದಾರಿ ಕಲೆಯ ಮೇಲಿದೆ ಎಂಬ ಮಾತು ಒಪ್ಪುವೆ. ಕಮರ್ಷಿಯಲ್, ಕಲಾತ್ಮಕ ಸೇರಿ ಎಲ್ಲ ರೀತಿಯಲ್ಲಿ ಬರಬೇಕು. ಕಲೆಯಲ್ಲಿ ಭಯ, ಭೀತಿ ಇರದೆ, ಅಭಿವ್ಯಕ್ತಿ, ಸ್ವಾತಂತ್ರ್ಯ ಇರಬೇಕು. ಕನ್ನಡದಲ್ಲಿ ಯಾರ ಹಂಗೂ ಇಲ್ಲದೆ ವ್ಯವಸ್ಥೆಯನ್ನು ಧೈರ್ಯದಿಂದ ಪ್ರಶ್ನಿಸುವ ಸಿನಿಮಾಗಳು ಬರುವಂತಾಗಲಿ. ಕಲಾವಿದರು ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದು ಹೇಳಿದರು.
ಪ್ರಜಾಪ್ರಭುತ್ವ ಉಳಿಸುವ ಕೆಲಸವಾಗಲಿ
ಕನ್ನಡ ಚಿತ್ರರಂಗದಲ್ಲಿ ಅನನ್ಯವಾದ ಸಾಧನೆ ಪರಿಗಣಿಸಿ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ವೇಳೆ ಮಾತನಾಡಿದ ಅವರು, ಕಲೆಗೆ ಸಂಬಂಧಿಸಿದ ಸಮಾರಂಭಕ್ಕೆ ಸಮಾರೋಪ ಇರುವುದಿಲ್ಲ. ಅದು ಆರಂಭವಷ್ಟೇ. ಸೃಷ್ಟಿ ಕಾರ್ಯ ನಿರಂತರ. ಸಿನಿಮಾ ಎನ್ನುವುದು ಸಾಮೂಹಿಕ ಕೃಷಿ. ನಾವು ನಾಡು, ಭಾಷೆಗೆ ಋಣಿಯಾಗಿರಬೇಕು. ಬೇಂದ್ರೆ ಅವರು ‘ಉತ್ತರ ಧ್ರುವದಿಂದ ದಕ್ಷಿಣ ಧ್ರುವಕೂ’ ಎಂದು ಹೇಳಿದರೆ, ‘ಕಾಂತಾರ’ ಮತ್ತು ‘ಕೆಜಿಎಫ್’ ಚಿತ್ರಗಳು ಇಡೀ ಉತ್ತರವನ್ನು ದಕ್ಷಿಣಕ್ಕೆ ತಂದು ನಿಲ್ಲಿಸಿವೆ. ಪ್ರಜಾಪ್ರಭುತ್ವದ ಬೀಜ ಬಿತ್ತಿದ ಬಸವ ನಾಡಿನಲ್ಲಿ ಪ್ರಜಾಪ್ರಭುತ್ವ ರಕ್ಷಿಸುವ ಕೆಲಸ ಸಿನಿಮಾದವರಿಂದ ಆಗಬೇಕು ಎಂದು ಸಲಹೆ ನೀಡಿದರು.

ಸಮಾಜಕ್ಕಾದ ನೋವು ದಾಖಲಿಸಿ

ಭಾಷೆ ಹಲವಾದರೂ ಭಾವನೆ ಒಂದೇ. ಮನುಷ್ಯ ವಿಕಾಸದಲ್ಲಿ ಸಿನಿಮಾ ಹೊಸ ಭಾಷೆಯಾಗಿದೆ. ಸಂಸ್ಕೃತಿ, ನೋವು, ಅಳಲನ್ನು ಅದು ದಾಖಲಿಸುತ್ತದೆ. ಚಿತ್ರೋತ್ಸವವೆನ್ನುವುದು ಪ್ರಪಂಚದ ಬೇರೆ ಬೇರೆ ಮಾನವೀಯ ಗ್ರಹಿಕೆಗಳನ್ನು ಹಂಚಿಕೊಳ್ಳುವ ವೇದಿಕೆ. ದೇಶಕ್ಕೆ, ಸಮಾಜಕ್ಕೆ ಆದ ನೋವು ದೊಡ್ಡ ನೋವು. ಅಂತಹ ನೋವುಗಳನ್ನು ಸಿನಿಮಾಗಳು ದಾಖಲಿಸಬೇಕು. ಈ ನಿಟ್ಟಿನಲ್ಲಿ ಈ ಚಿತ್ರೋತ್ಸವ ಉತ್ಸವವಾಗಿದೆ. ಹಂಸಲೇಖ ಅವರನ್ನು ಸನ್ಮಾನಿಸಿ ಉತ್ಸವದ ಅರ್ಥವನ್ನು ಹೆಚ್ಚಿಸಿಕೊಂಡಿದೆ ಎಂದು ಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರಾಜ್ ಹೇಳಿದರು.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ.ಜಯಮಾಲಾ, ಕರ್ನಾಟಕ ಚಲನಚಿತ್ರ ಆಕಾಡೆಮಿ ಅಧ್ಯಕ್ಷ ಡಾ. ಸಾಧುಕೋಕಿಲಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್, ವಾರ್ತಾ ಮತ್ತು ಸಾರ್ವಜನಿಕ ಇಲಾಖೆಯ ಕಾರ್ಯದರ್ಶಿ ಬಿ.ಬಿ. ಕಾವೇರಿ, ಚಲನಚಿತ್ರ ಅಕಾಡೆಮಿಯ ರಿಜಿಸ್ಟ್ರಾರ್ ವಿನೋದ್ ಚಂದ್ರ, ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಮುರಳಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net