ವಿಜಯಾನಂದ ‘ಸೂಪರ್‌ಹಿಟ್’: ಭಗವದ್ಗೀತೆಯ ಸಾಲೇ ಈ ಚಿತ್ರಕ್ಕೆ ಸ್ಫೂರ್ತಿ ಎಂದ ನಿರ್ದೇಶಕ

ಸೂಪರ್ ಹಿಟ್ ಚಿತ್ರದ ಪೋಸ್ಟರ್​
ಸೂಪರ್ ಹಿಟ್ ಚಿತ್ರದ ಪೋಸ್ಟರ್​
Published on

ಪ್ರಮುಖ ಮುಖ್ಯಾಂಶಗಳು

  • ಥ್ರಿಲ್ಲರ್, ಕಾಮಿಡಿ ಹೇಳಲು ಬಂದ ವಿಜಯಾನಂದ
  • ಗಿಲ್ಲಿ ನಟ, ಗೌರವ್​ ಶೆಟ್ಟಿ ಕಾಮಿಡಿ ಮೂಲಕ ಕಮಾಲ್
  • ಹುಬ್ಬಳಿಯಿಂದ ಬೆಂಗಳೂರಿಗೆ ಸಾಗುವ ಒಂದು ದಿನದ ಕಥೆ
ಬೆಂಗಳೂರು: ಕನ್ನಡದ ಹಲವು ಚಿತ್ರಗಳಿಗೆ ಕಥೆ, ಚಿತ್ರಕಥೆ ಬರೆದಿರುವ ಹಾಗೂ ಕಾಶೀನಾಥ ಅಭಿನಯದ ‘ಓಳ್ ಮುನ್ಸಾಮಿ’, ಅಜೇಯ್ ರಾವ್‌ರ ‘ಕೃಷ್ಣ ಟಾಕೀಸ್’ ನಿರ್ದೇಶಿಸಿದ್ದ ಆನಂದ್‌ಪ್ರಿಯ ಇದೀಗ ವಿಜಯಾನಂದ ಎಂದು ಹೆಸರು ಬದಲಾಯಿಸಿಕೊಂಡಿದ್ದಾರೆ.
ಸದ್ಯ ಅವರ ನಿರ್ದೇಶನದ ಕಾಮಿಡಿ, ಡ್ರಾಮಾ ‘ಸೂಪರ್‌ಹಿಟ್’ ಇಂದು ಬಿಡುಗಡೆಯಾಗುತ್ತಿದೆ. ಇದೇ ಖುಷಿಯಲ್ಲಿ ವಿಜಯಾನಂದ, ‘ಕನ್ನಡದಲ್ಲಿ ನಾನು ಎಲ್ಲ ರೀತಿಯ ಜಾನರ್‌ನ ಕಥೆ, ಚಿತ್ರಕಥೆ ಬರೆದಿದ್ದೇನೆ. ಹಾಸ್ಯ ನನಗೆ ತುಂಬಾ ಇಷ್ಟ. ಕನ್ನಡದಲ್ಲಿ ಸಾಕಷ್ಟು ಹಾಸ್ಯ ಸಿನಿಮಾಗಳು ಬಂದಿರಬಹುದು, ಆದರೆ, ಥ್ರಿಲ್ಲರ್ ಜತೆಗೆ ಕಾಮಿಡಿ ಚಿತ್ರಗಳು ವಿರಳ. ಅದರ ಪ್ರಯೋಗವೇ ‘ಸೂಪರ್ ಹಿಟ್’. ಹುಬ್ಬಳ್ಳಿಯಿಂದ ಬೆಂಗಳೂರಿಗೆ ಸಾಗುವ ಒಂದು ದಿನದ ಕಥೆ. ಇನ್ನು ಭಗವದ್ಗೀತೆಯಲ್ಲಿ ‘ಭಗವಂತನ ಅಪ್ಪಣೆ ಇಲ್ಲದೆ, ಒಂದು ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ’ ಎಂಬ ಸಾಲಿದೆ. ಅದುವೇ ಈ ಚಿತ್ರದ ಕಥೆ ಪ್ರೇರಣೆ. ಗಿಲ್ಲಿನಟ ಹಾಗೂ ಗೌರವ್ ಶೆಟ್ಟಿ ಉತ್ತಮ ಕಲಾವಿದರು. ನಿಂತ ಜಾಗದಲ್ಲಿಯೇ ನಮ್ಮನ್ನು ನಗಿಸುತ್ತಾರೆ. ಅವರಲ್ಲಿ ಕಾಮಿಡಿ ಪಂಚ್, ಸೆನ್ಸ್ ಇದೆ. ಹಾಗೆಯೇ ಸಾಕಷ್ಟು ಕಿರುಚಿತ್ರಗಳನ್ನು ಮಾಡಿ, ಜನತೆಯನ್ನು ನಗಿಸಿದ್ದಾರೆ. ಹಾಗಾಗಿ, ಅವರನ್ನು ಈ ಚಿತ್ರಕ್ಕೆ ಆಯ್ಕೆ ಮಾಡಿಕೊಂಡೆವು. ಈ ಇಬ್ಬರ ನಡುವೆ ಹಳ್ಳಿ ಪ್ರತಿಭೆ ಶ್ವೇತಾ ಕೂಡ ಮಿಂಚಿದ್ದಾರೆ. ನಾನಂದುಕೊಂಡ ಕಲಾವಿದರೇ ಇಲ್ಲಿ ನಟಿಸಿರುವುದಿಂದ ಸಿನಿಮಾ ಚೆನ್ನಾಗಿ ಮೂಡಿಬರಲು ಸಹಕಾರಿಯಾಯಿತು. ಅಣ್ಣ ಡಾ.ವಿ.ನಾಗೇಂದ್ರ ಪ್ರಸಾದ್ ಸಂಗೀತ, ಸಾಹಿತ್ಯ ನೀಡಿ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದಾರೆ’ ಎನ್ನುತ್ತಾರೆ. ಹೆಸರು ಬದಲಾಯಿಸಿಕೊಂಡ ಬಗ್ಗೆ ‘‘ಕೃಷ್ಣ ಟಾಕೀಸ್’ ಮುನ್ನವೇ ‘ವಿಜಯಾನಂದ’ ಎಂದು ಹೆಸರು ಬದಲಾಯಿಸಿಕೊಂಡೆ. ಆಪ್ತರೊಬ್ಬರೊಬ್ಬರು ಈ ಹೆಸರು ಸೂಚಿಸಿದ್ದರು’ ಎಂದು ಹೇಳಿಕೊಳ್ಳುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net