ಬೆಂಗಳೂರು: ‘ಮ್ಯಾಕ್ಸ್’ ಬಳಿಕ ನಟ ಸುದೀಪ್ ಹಾಗೂ ನಿರ್ದೇಶಕ ವಿಜಯ್ ಕಾರ್ತಿಕೇಯನ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ ಚಿತ್ರ ‘ಮಾರ್ಕ್’. ಕಳೆದ ಡಿ.25ರಂದು ರಾಜ್ಯಾದ್ಯಂತ ರಿಲೀಸ್ ಆಗಿದ್ದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಹಾಗೆಯೇ ತೆರೆಕಂಡ ಮೊದಲ ವಾರವೇ 35 ಕೋಟಿ ಅಧಿಕ ಗಳಿಕೆ ಮಾಡಿ ಬಾಕ್ಸಾಫೀಸ್‌ನಲ್ಲೂ ಸದ್ದು ಮಾಡಿತ್ತು. ಈ ಮೂಲಕ ಕ್ರಿಸ್ಮಸ್, ಹೊಸ ವರ್ಷದ ವೈಬ್‌ನ್ನು ಚಿತ್ರತಂಡ ಸದುಪಯೋಗಪಡಿಸಿಕೊಂಡಿತ್ತು. ಇದೀಗ ‘ಮಾರ್ಕ್’ ಚಿತ್ರವು ಯಶಸ್ವಿ 25 ದಿನಗಳನ್ನು ಪೂರೈಸಿದೆ. ಇದೇ ಖುಷಿಯಲ್ಲಿ ಚಿತ್ರತಂಡ ಮತ್ತೊಂದು ಮಹತ್ವದ ಮಾಹಿತಿ ಹಂಚಿಕೊಂಡಿದ್ದು, ಒಟಿಟಿ ಸ್ಟ್ರೀಮಿಂಗ್ ವೇದಿಕೆ ಹಾಗೂ ಪ್ರದರ್ಶನ ದಿನಾಂಕವನ್ನು ಘೋಷಿಸಿದೆ. ಇದೇ 23ರ ಶುಕ್ರವಾರದಂದು ಮಾರ್ಕ್’ ಚಿತ್ರ ‘ಜಿಯೋ ಹಾಟ್‌ಸ್ಟಾರ್’ನಲ್ಲಿ ಸ್ಟ್ರೀಮಿಂಗ್ ಆಗಲಿದ್ದು, ಥಿಯೇಟರ್‌ನಲ್ಲಿ ಕಿಚ್ಚನ ಮಾಸ್ ಆ್ಯಕ್ಟಿಂಗ್ ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ನೋಡಬಹುದಾಗಿದೆ. ಸುದೀಪ್ ಜತೆ ತಮಿಳಿನ ಯೋಗಿಬಾಬು, ಮಲಯಾಳಂನ ಶೈನ್ ಟಾಮ್ ಚಾಕೋ, ನವೀನ್ ಚಂದ್ರ, ರೋಶಿನಿ ಪ್ರಕಾಶ್, ಪ್ರತಾಪ್ ನಾರಾಯಣ್ ಕಲಾಬಳಗದಲ್ಲಿದ್ದರು.