ರುಜು ಮಾಡಿದ ಶುಭ್ರ : ಸಿಂಪಲ್ ಸುನಿ ನಿರ್ದೇಶನದ ಚಿತ್ರದಲ್ಲಿ ವಜ್ರಕಾಯ ನಟಿ

ಶುಭ್ರ ಅಯ್ಯಪ್ಪ
ಶುಭ್ರ ಅಯ್ಯಪ್ಪ
Published on

ಪ್ರಮುಖ ಮುಖ್ಯಾಂಶಗಳು

  • ಎರಡು ವರ್ಷಗಳ ಬಳಿಕ ಕನ್ನಡ ಚಿತ್ರದಲ್ಲಿ ಶುಭ್ರ ಅಯ್ಯಪ್ಪ
  • ನವವಧುವಿನ ಪಾತ್ರದಲ್ಲಿ ಕೊಡಗು ಮೂಲದ ನಟಿ
  • ವಿರಾಜ್ ಜತೆ ತೆರೆಹಂಚಿಕೊಳ್ಳಲಿದ್ದಾರೆ ವಜ್ರಕಾಯ ನಟಿ
ಬೆಂಗಳೂರು: ವೃತ್ತಿ ಜೀವನದಲ್ಲಿ ಬೆರಳಣಿಕೆ ಸಂಖ್ಯೆಯ ಸಿನಿಮಾಗಳಲ್ಲಿ ನಟಿಸಿದ್ದರೂ, ಪಾತ್ರದ ಮೂಲಕ ಗಮನ ಸೆಳೆದವರು ನಟಿ ಶುಭ್ರ ಅಯ್ಯಪ್ಪ. ಕೊಡಗು ಮೂಲದ ಅವರು ತೆಲುಗಿನ ‘ಪ್ರತಿನಿಧಿ’, ತಮಿಳಿನ ‘ಸಗಪ್ತಂ’ ಚಿತ್ರಗಳಲ್ಲಿ ನಟಿಸಿ, ನಂತರ ಶಿವರಾಜಕುಮಾರ್ ಅಭಿನಯದ ‘ವಜ್ರಕಾಯ’ ಮೂಲಕ ಶುಭ್ರ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಶುಭ್ರ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಬಳಿಕ ‘ತಿಮ್ಮಯ್ಯ ಆ್ಯಂಡ್ ತಿಮ್ಮಯ್ಯ’, ‘ರಾಮನ ಅವತಾರ’ ಚಿತ್ರಗಳಲ್ಲಿ ನಟಿಸಿದ್ದರು. ಆ ನಂತರ ಅವರು ಮತ್ತೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡಿರಲಿಲ್ಲ. ಇದೀಗ ಎರಡು ವರ್ಷಗಳ ಬಳಿಕ ಶುಭ್ರ ಕನ್ನಡ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಅದೇ ಸಿಂಪಲ್ ಸುನಿ ನಿರ್ದೇಶಿಸುತ್ತಿರುವ ‘ದೇವರು ರುಜು ಮಾಡಿದನು’. ಈಗಾಗಲೇ ಬಹುತೇಕ ಶೂಟಿಂಗ್ ಪೂರ್ಣಗೊಳಿಸಿರುವ ಚಿತ್ರತಂಡ, ಸದ್ಯ ತೆರೆಗೆ ಬರಲು ಸಿದ್ಧವಾಗಿದೆ. ಇದೀಗ ಈ ತಂಡವನ್ನು ಶುಭ್ರ ಅಯ್ಯಪ್ಪ ಸೇರಿಕೊಂಡಿದ್ದಾರೆ. ಶುಕ್ರವಾರ (ಏ. 24) ನಟಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಅವರ ಪಾತ್ರದ ಸ್ಟ್ ಲುಕ್ ರಿಲೀಸ್ ಮಾಡಲಾಗಿದೆ. ಶುಭ್ರ ಅಯ್ಯಪ್ಪ ಇಲ್ಲಿ ನವ ವಧುವಿನ ಪಾತ್ರದಲ್ಲಿದ್ದು, ಚಿತ್ರದ ಮೊದಲ ಹಾಗೂ ಕೊನೆಯ ದೃಶ್ಯದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪಾತ್ರಕ್ಕೆ ಗೋವಾ ಕರ್ನಾಟಕ ಭಾಗದ ಲುಕ್ ಇರುವ ಹುಡುಗಿ ಬೇಕಾಗಿತ್ತು. ಹಾಗಾಗಿ, ಶುಭ್ರ ಸೂಕ್ತ ಆಯ್ಕೆ ಎಂದು ಸೇರಿಸಿಕೊಳ್ಳಲಾಯಿತು ಎಂದು ನಿರ್ದೇಶಕ ಸಿಂಪಲ್ ಸುನಿ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯ ಶೇ.80ರಷ್ಟು ಶೂಟಿಂಗ್ ಪೂರ್ಣಗೊಳಿಸಿರುವ ಚಿತ್ರತಂಡವು ಇದೇ ಅಕ್ಟೋಬರ್‌ಗೆ ತೆರೆಗೆ ತರಲು ಸಿದ್ಧತೆ ನಡೆಸಿದೆ. ‘ದೇವರು ರುಜು ಮಾಡಿದನು’ ಚಿತ್ರದಲ್ಲಿ ವಿರಾಜ್ ಮುಖ್ಯಭೂಮಿಕೆಯಲ್ಲಿದ್ದು, ಅವರಿಗೆ ಕೀರ್ತಿ ಕೃಷ್ಣ, ದಿವಿತಾ ರೈ ಜೋಡಿಯಾಗಿದ್ದಾರೆ. ಇದೀಗ ಮತ್ತೊಬ್ಬ ನಾಯಕಿಯಾಗಿ ಶುಭ್ರ ಆಗಮಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net