ಸಾಮಾನ್ಯವಾಗಿ ಹೆಸರಾಂತ ಸ್ಟಾರ್ಗಳ ಹಾಲಿವುಡ್ ಸಿನಿಮಾಗಳು ಭಾರತದಲ್ಲಿ ಬಿಡುಗಡೆಯಾಗುತ್ತಿವೆ ಅಂದರೆ, ಆ ಡೇಟ್ನಲ್ಲಿ ಬಾಲಿವುಡ್ ಚಿತ್ರಗಳು ರಿಲೀಸ್ ಆಗುತ್ತಿರಲಿಲ್ಲ. ಕೆಲ ವರ್ಷಗಳ ಹಿಂದಿನವರೆಗೂ ಹಾಲಿವುಡ್ ಚಿತ್ರಗಳ ರಿಲೀಸ್ ನೋಡಿಕೊಂಡು ಭಾರತೀಯ ಸಿನಿಮಾಗಳು ಬಿಡುಗಡೆಯಾಗಬೇಕಿತ್ತು. ಆದರೆ, ಇದೇ ಮೊದಲ ಬಾರಿಗೆ "ಧುರಂಧರ್ 2' ಹಾಲಿವುಡ್ ಚಿತ್ರಕ್ಕೆ ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಸವಾಲು ಹಾಕಿದೆ. ಹೌದು, ರಿಯಾನ್ ಗೋಸ್ಲಿಂಗ್ ನಟಿಸಿರುವ ಫಿಲ್ ಲಾರ್ಡ್ ಮತ್ತು ಕ್ರಿಸ್ಟೋಫರ್ ಮಿಲ್ಲರ್ ನಿರ್ದೇಶನದ ಸೈನ್ಸ್ ಫಿಕ್ಷನ್ ಅಡ್ವೆಂಚರ್ ಸಿನಿಮಾ "ಪ್ರಾಜೆಕ್ಟ್ ಹೈಲ್ ಮೇರಿ' ಅಮೆರಿಕ ಸೇರಿ ವಿವಿಧೆಡೆ ಮಾ. 19ರಂದು ರಿಲೀಸ್ ಆಗಿತ್ತು. ಆದರೆ, ಭಾರತದಾದ್ಯಂತ "ಧುರಂಧರ್ 2' ಕ್ರೇಜ್ ನೋಡಿದ ಚಿತ್ರತಂಡ, ಇಲ್ಲಿ ಒಂದು ವಾರ ತಡವಾಗಿ ಮಾ. 26ರ ಗುರುವಾರ ಬಿಡುಗಡೆ ಮಾಡುತ್ತಿದೆ. ಮತ್ತೊಂದೆಡೆ ಹಾಲಿವುಡ್ ಜನ್ಮಸ್ಥಳವಾದ ಅಮೆರಿಕದಲ್ಲೂ "ಧುರಂಧರ್ 2' ಅದ್ಭುತ ಯಶಸ್ಸು ಕಂಡಿದ್ದು, ಟಾಪ್ ಎರಡನೇ ಸ್ಥಾನದಲ್ಲಿ ಪ್ರದರ್ಶನ ಕಾಣುತ್ತಿದೆ.