ಪ್ರಿ-ಪೋನ್, ಪೋಸ್ಟ್-ಪೋನ್ ಆಟದಲ್ಲಿ...: ‘ಧುರಂಧರ್ 2’, ‘ಟಾಕ್ಸಿಕ್’ ಪರಿಣಾಮ ಸಿನಿಮಾ ಬಿಡುಗಡೆಯ ಹಾವು-ಏಣಿ ಆಟ

ಧುರಂಧರ್ 2, ಟಾಕ್ಸಿಕ್ ಪೋಸ್ಟರ್​
ಧುರಂಧರ್ 2, ಟಾಕ್ಸಿಕ್ ಪೋಸ್ಟರ್​
Published on

ಪ್ರಮುಖ ಮುಖ್ಯಾಂಶಗಳು

  • ಧುರಂಧರ್, ಟಾಕ್ಸಿಕ್ ಹೆದರಿದ ಚಿತ್ರಗಳು
  • ಮಾರ್ಚ್​ ತಿಂಗಳವೇ ಸಹವಾಸವೇ ಬೇಡ ಅಂದು ರಿಲೀಸ್ ಡೇಟ್ ಮುಂದಕ್ಕೆ
  • ಧುರಂದರ್ ಗೆ ತೊಡೆ ತಟ್ಟಿದ ಉಸ್ತಾದ್, ಡಾರ್ಲಿಂಗ್​
ಬೆಂಗಳೂರು : ಅಂದುಕೊಂಡಂತಾಗಿದ್ದರೆ, ಈ ಯುಗಾದಿಗೆ ಭಾರತೀಯ ಬಾಕ್ಸಾಫೀಸ್ ಕಳೆದ 25 ವರ್ಷಗಳಲ್ಲೇ ಅತಿ ದೊಡ್ಡ ಕಲೆಕ್ಷನ್ ಯುದ್ಧಕ್ಕೆ ಸಾಕ್ಷಿಯಾಗಬೇಕಿತ್ತು. ಅರ್ಥಾತ್ ಮಾ. 19ಕ್ಕೆ ಬಹುನಿರೀಕ್ಷಿತ ಪ್ಯಾನ್ ವರ್ಲ್ಡ್ ಸಿನಿಮಾ ಯಶ್ ನಟನೆಯ ‘ಟಾಕ್ಸಿಕ್’ ಮತ್ತು ರಣವೀರ್ ಸಿಂಗ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರ ಸೂಪರ್‌ಹಿಟ್ ‘ಧುರಂಧರ್’ ಸೀಕ್ವೆಲ್‌ಗಳು ತೆರೆಗೆ ಬರಬೇಕಿತ್ತು. ಆದರೆ, ಇಸ್ರೇಲ್ ಮತ್ತು ಇರಾನ್ ನಡುವಿನ ಸಮರ, ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಬಿಕ್ಕಟ್ಟು ಉಂಟು ಮಾಡಿರುವ ಕಾರಣ, ‘ಟಾಕ್ಸಿಕ್’ಅನ್ನು ಎರಡೂವರೆ ತಿಂಗಳು ಮುಂದಕ್ಕೆ ಅರ್ಥಾತ್ ಜೂ. 4ಕ್ಕೆ ಮುಂದೂಡಲಾಗಿದೆ. ಆದರೆ, ‘ಧುರಂಧರ್ 2’ ಯಾವ ಯುದ್ಧಕ್ಕೂ ಹೆದರದೆ ಮೊದಲು ೋಷಿಸಿದ ದಿನಾಂಕದಂದೇ ರಿಲೀಸ್ ಆಗುತ್ತಿದೆ. ‘ಟಾಕ್ಸಿಕ್’ ಮತ್ತು ‘ಧುರಂಧರ್ 2’ ಚಿತ್ರಗಳಿಂದಾಗಿ ಮಾರ್ಚ್ ತಿಂಗಳ ಸಹವಾಸವೇ ಬೇಡ ಅಂತಿದ್ದ ಚಿತ್ರತಂಡಗಳು, ‘ಟಾಕ್ಸಿಕ್’ ಮುಂದೂಡಲ್ಪಟ್ಟ ಹಿನ್ನೆಲೆಯಲ್ಲಿ ಇದೀಗ ಪ್ರಿ-ಪೋನ್, ಪೋಸ್ಟ್-ಪೋನ್ ಆಟದಲ್ಲಿ ತೊಡಗಿವೆ. ‘ಟಾಕ್ಸಿಕ್’ ಮುಂದೆ ಹೋದ ಲಾಭ ಗಳಿಸಲು ಕೆಲ ಸಿನಿಮಾಗಳು ರಿಲೀಸ್ ಡೇಟ್ ಹಿಂದಕ್ಕೆ ಹಾಕಿಕೊಂಡರೆ, ಇನ್ನು ಜೂನ್‌ನಲ್ಲಿ ರಿಲೀಸ್ ಆಗಬೇಕಿದ್ದ ಕೆಲ ಚಿತ್ರಗಳು ಯಶ್ ಚಿತ್ರಕ್ಕೆ ಹೆದರಿ ಮತ್ತಷ್ಟು ಮುಂದಕ್ಕೆ ಹೋಗಿದೆ. ಹೀಗೆ ‘ಧುರಂಧರ್ 2’ ಮತ್ತು ‘ಟಾಕ್ಸಿಕ್’ ಸಿನಿಮಾಗಳು ಹಲವು ಚಿತ್ರಗಳ ಮೇಲೆ ಪರಿಣಾಮ ಬೀರಿದ್ದು, ಹಾವು-ಏಣಿ ಆಟ ನಡೆಯುತ್ತಿದೆ.

ಯುಗಾದಿಗೆ ‘ಲವ್ ಮಾಕ್ಟೇಲ್’, ‘ಉಸ್ತಾದ್’

‘ಟಾಕ್ಸಿಕ್’ ಬಿಡುಗಡೆ ದಿನಾಂಕ ಮುಂದೂಡಿರುವುದರಿಂದ ಮಾ.19ರ ಯುಗಾದಿ ಹಬ್ಬದ ಲಾಭ ಗಳಿಸಲು ಎರಡು ಸಿನಿಮಾಗಳು ರಿಲೀಸ್ ಡೇಟ್ ಪ್ರಿಪೋನ್ ಮಾಡಿಕೊಂಡಿವೆ. ಡಾರ್ಲಿಂಗ್ ಕೃಷ್ಣ ನಟಿಸಿ, ನಿರ್ದೇಶಿಸಿರುವ ‘ಲವ್ ಮಾಕ್ಟೇಲ್ 3’ ಮೊದಲು ಏ.10ಕ್ಕೆ ತೆರೆ ಮೇಲೆ ಬರುವುದಾಗಿ ಘೋಷಿಸಿತ್ತು. ಯಾವಾಗ ‘ಟಾಕ್ಸಿಕ್’ ಮುಂದೆ ಹೋಯಿತೋ ಜಾಣತನ ತೋರಿದ ಕೃಷ್ಣ ಮಾ.19ಕ್ಕೆ ಬರುವುದಾಗಿ ಘೋಷಿಸಿದ್ದಾರೆ. ಹಾಗೆಯೇ ಪವನ್ ಕಲ್ಯಾಣ್ ಅಭಿನಯದ ‘ಉಸ್ತಾದ್ ಭಗತ್ ಸಿಂಗ್’ ಕೂಡ ಮಾ.26ರಿಂದ ಮಾ.19ಕ್ಕೆ ಪ್ರಿ-ಪೋನ್ ಮಾಡಿಕೊಂಡಿದೆ. ಆ ಮೂಲಕ ಯುಗಾದಿಗೆ ‘ಧುರಂಧರ್ 2’ಗೆ ಟಕ್ಕರ್ ಕೊಡಲು ದಕ್ಷಿಣದ ಎರಡು ಸಿನಿಮಾಗಳು ಸಿದ್ಧತೆ ನಡೆಸಿವೆ.

‘ಧುರಂಧರ್’ಗೆ ಹೆದರಿದವರು

ಸದ್ಯ ಭಾರತೀಯ ಚಿತ್ರರಂಗದಲ್ಲಿ ಆದಿತ್ಯ ಧರ್ ನಿರ್ದೇಶನದ ‘ಧುರಂಧರ್: ದ ರಿವೆಂಜ್’ ಚಿತ್ರ ಸೃಷ್ಟಿಸಿರುವ ಹವಾ ತುಂಬಾ ದೊಡ್ಡದು. ಈಗಾಗಲೇ ಪ್ರಿ-ಬುಕಿಂಗ್ ಆರಂಭವಾಗಿದ್ದು, ಮಾ. 18ರ ಪೇಯ್ಡ ಪ್ರೀಮಿಯರ್ ಶೋಗಳು ಬಹುತೇಕ ಹೌಸ್‌ಫುಲ್ ಆಗಿವೆ. ಮೊದಲ ವಾರದ ಟಿಕೆಟ್ ದರ 2400ವರೆಗೂ ಹೆಚ್ಚಿಸಲಾಗಿದೆ. ಈ ಚಿತ್ರ ಸೃಷ್ಟಿಸಿರುವ ಭಯಕ್ಕೆ ಹಲವು ಚಿತ್ರಗಳು ಮುಂದಕ್ಕೆ ಹೋಗಿವೆ. ಏ.17ಕ್ಕೆ ರಿಲೀಸ್ ಆಗಬೇಕಿದ್ದ ಆಲಿಯಾ ಭಟ್ ನಟಿಸಿರುವ ‘ಆಲ್ಫಾ’ ಚಿತ್ರ ಜುಲೈ 10ಕ್ಕೆ ತೆರೆಗೆ ಬರಲು ನಿರ್ಧರಿಸಿದೆ. ಅಕ್ಷಯ್ ಕುಮಾರ್ ನಟನೆಯ ‘ಭೂತ್ ಬಂಗ್ಲಾ’ ಚಿತ್ರ ಈವರೆಗೆ ಮೂರು ಬಾರಿ ರಿಲೀಸ್ ಡೇಟ್ ಬದಲಾಯಿಸಿದೆ. ಮೊದಲು ಮೇ 15ಕ್ಕೆ ಬರುವುದಾಗಿ ೋಷಿಸಿದ್ದ ಚಿತ್ರ ಬಳಿಕ ‘ಧುರಂಧರ್’, ‘ಟಾಕ್ಸಿಕ್’ ಯಾರೇ ಬಂದರೂ ಹೆದರಲ್ಲ ಎಂದು, ಏ.2ಕ್ಕೆ ರಿಲೀಸ್ ಮಾಡುವುದಾಗಿ ಒಂದು ತಿಂಗಳು ಹಿಂದೆ ಬಂದಿದ್ದರು. ಆದರೆ, ಇದೀಗ ಮತ್ತೆ ಒಂದು ವಾರ ಮುಂದಕ್ಕೆ ಹೋಗಿರುವ ಚಿತ್ರತಂಡ ಏ.10 ರಿಲೀಸ್ ಡೇಟ್ ಫೈನಲ್ ಮಾಡಿದೆ. ಇದಕ್ಕೂ ಮುನ್ನ ‘ಧುರಂಧರ್ 2’ ಮತ್ತು ‘ಟಾಕ್ಸಿಕ್’ ಕ್ರೇಜ್‌ನಲ್ಲಿ ಕಳೆದುಹೋಗಬಾರದು ಎಂದು ರಾವಚರಣ್ ತೇಜ ನಟನೆಯ ‘ಪೆದ್ದಿ’ (ಏ.30), ಅಡಿವಿ ಶೇಷ್ ಅಭಿನಯದ ‘ಡಕಾಯಿತ್’ (ಏ.10) ಮತ್ತು ನಾನಿಯ ‘ಪ್ಯಾರಡೈಸ್’ ಆ.21ಕ್ಕೆ ಬರಲು ನಿರ್ಧರಿಸಿವೆ.

‘ಟಾಕ್ಸಿಕ್’ ಸಂಚಲನ

ರಿಲೀಸ್ ಡೇಟ್ ಮುಂದೂಡಿದರೂ ಯಶ್ ನಟನೆಯ ‘ಟಾಕ್ಸಿಕ್’ ಸೃಷ್ಟಿಸಿರುವ ಸಂಚಲನ ಬಹುದೊಡ್ಡದು. ಇದೀಗ ಜೂನ್ 4ಕ್ಕೆ ತೆರೆ ಬರಲು ಸಿದ್ಧವಾಗಿರುವಾಗಲೇ ‘ಟಾಕ್ಸಿಕ್’ಗೆ ಭಯಗೊಂಡು ಹಿಂದಿ ಚಿತ್ರವೊಂದು ಒಂದು ವಾರಕ್ಕೆ ಪೋಸ್ಟ್ -ಪೋನ್ ಮಾಡಿದೆ. ವರುಣ್ ಧವನ್, ಪೂಜಾ ಹೆಗ್ಡೆ, ಮೃಣಾಲ್ ಠಾಕೂರ್ ಕಲಾ ಬಳಗದಲ್ಲಿರುವ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಜೂ.5ಕ್ಕೆ ರಿಲೀಸ್ ಆಗುವುದಿತ್ತು. ಇದೀಗ ಅದಕ್ಕೂ ಒಂದು ದಿನ ಮುಂಚೆ ‘ಟಾಕ್ಸಿಕ್’ ಬರುವುದರಿಂದ ಜೂ.12ಕ್ಕೆ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net