ಖಾಸಗಿ ವಿಡಿಯೋ ಸೋರಿಕೆ ಹಿಂದಿನ ಅಸಲಿ ಕತೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಇನ್​ಸ್ಟಾ ಸುಂದರಿ ಸೋನು! Sonu Srinivas Gowda

ಖಾಸಗಿ ವಿಡಿಯೋ ಸೋರಿಕೆ ಹಿಂದಿನ ಅಸಲಿ ಕತೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಇನ್​ಸ್ಟಾ ಸುಂದರಿ ಸೋನು! Sonu Srinivas Gowda
ಖಾಸಗಿ ವಿಡಿಯೋ ಸೋರಿಕೆ ಹಿಂದಿನ ಅಸಲಿ ಕತೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಇನ್​ಸ್ಟಾ ಸುಂದರಿ ಸೋನು! Sonu Srinivas Gowda
Published on

ಪ್ರಮುಖ ಮುಖ್ಯಾಂಶಗಳು

  • ತಮ್ಮ ಇನ್​ಸ್ಟಾಗ್ರಾಂನಲ್ಲಿ ತನ್ನ ಜೀವನದ ಬಗ್ಗೆ ಸೋನು ಶ್ರೀನಿವಾಸ ಗೌಡ ಸರಣಿ ವಿಡಿಯೋಗಳನ್ನು ಮಾಡಿದ್ದಾರೆ
  • ಇದುವರೆಗೂ ಒಟ್ಟು 11 ಎಪಿಸೋಡ್​ ಪೋಸ್ಟ್​ ಮಾಡಿರುವ ಸೋನು ತಮ್ಮ ಜೀವನವನ್ನು ತೆರೆದಿಟ್ಟಿದ್ದಾರೆ
  • ತನ್ನ ಖಾಸಗಿ ವಿಡಿಯೋ ಸೋರಿಕೆ ಹಿಂದಿನ ಕರಾಳ ಸತ್ಯವನ್ನು ಸೋನು ಜನರ ಮುಂದಿಟ್ಟಿದ್ದಾಳೆ
Sonu Srinivas Gowda : ಸೋನು ಶ್ರೀನಿವಾಸ​ ಗೌಡ... ಈ ಹೆಸರಿಗೆ ಪರಿಚಯದ ಅಗತ್ಯವೇ ಇಲ್ಲ. ವಿವಾದಗಳಿಂದಲೇ ಸುದ್ದಿಯಾದ ಸೋಶಿಯಲ್​ ಮೀಡಿಯಾ ಇನ್ಫ್ಲುಯೆನ್ಸರ್ ಈಕೆ. ಅಷ್ಟೇ ಅಲ್ಲ, ಮಾಜಿ ಬಿಗ್​ಬಾಸ್​ ಸ್ಪರ್ಧಿಯೂ ಹೌದು. ತನ್ನ ಖಾಸಗಿ ವಿಡಿಯೋ ಸೋರಿಕೆ ಮೂಲಕ ವಿವಾದದ ಬಿರುಗಾಳಿಗೆ ಸಿಲುಕಿದ ಈಕೆ, ಟ್ರೋಲಿಗರ ಫೇವರಿಟ್​ ಅಂತಾನೇ ಹೇಳಬಹುದು. ಒಂದು ಪುಟ್ಟ ಹುಡುಗಿಯನ್ನು ದತ್ತು ಪಡೆಯಲು ಹೋಗಿ ಮತ್ತೊಂದು ವಿವಾದದಲ್ಲಿ ಸಿಲುಕಿದ್ದಳು. ಬಿಕಿನಿ ವಿಡಿಯೋ ಹಾಗೂ ಹಾಟ್​ ಫೋಟೋಗಳ ಮೂಲಕವೇ ಜಾಲತಾಣದಲ್ಲಿ ಸದ್ದು ಮಾಡುವ ಈಕೆ ಇತ್ತೀಚೆಗೆ ತನ್ನ ಜೀವನದಲ್ಲಾದ ಕಹಿ ಘಟನೆಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ. ತನ್ನ ಖಾಸಗಿ ವಿಡಿಯೋ ಸೋರಿಕೆ ಹಿಂದಿನ ಕರಾಳ ಸತ್ಯವನ್ನು ಜನರ ಮುಂದಿಟ್ಟಿದ್ದಾಳೆ.
ಹೌದು, ತಮ್ಮ ಇನ್​ಸ್ಟಾಗ್ರಾಂನಲ್ಲಿ ತನ್ನ ಜೀವನದ ಬಗ್ಗೆ ಸೋನು ಶ್ರೀನಿವಾಸ ಗೌಡ ಸರಣಿ ವಿಡಿಯೋಗಳನ್ನು ಮಾಡಿದ್ದಾರೆ. ಇದುವರೆಗೂ ಒಟ್ಟು 11 ಎಪಿಸೋಡ್​ ಪೋಸ್ಟ್​ ಮಾಡಿರುವ ಸೋನು, ತಮ್ಮ ಜೀವನವನ್ನು ತನ್ನ ಫಾಲೋವರ್ಸ್​ ಮುಂದೆ ತೆರೆದಿಟ್ಟಿದ್ದಾರೆ. ಶಾಲಾ ಶಿಕ್ಷಣ, ಅಮ್ಮನ ಪ್ರೀತಿ, ಅಜ್ಜಿಯ ಆಸರೆ, ತನ್ನ ಮೇಲೆ ತಾಯಿಗಿದ್ದ ಕೋಪ, ಕಾಲೇಜು ಶಿಕ್ಷಣ, ಸೋಶಿಯಲ್​ ಮೀಡಿಯಾ ಲೈಫ್​ ಸೇರಿದಂತೆ ಎಲ್ಲದರ ಬಗ್ಗೆಯೂ ಸೋನು ಮಾತನಾಡಿದ್ದಾರೆ. ಅದರಲ್ಲೂ ಮುಖ್ಯವಾಗಿ ತನ್ನ ಜೀವನದಲ್ಲಿ ಎದುರಾದ ಖಾಸಗಿ ವಿಡಿಯೋ ಸೋರಿಕೆಯ ಬಗ್ಗೆ ಎಲ್ಲವನ್ನು ಬಹಿರಂಗಪಡಿಸಿದ್ದಾಳೆ. ಆ ಕುರಿತಾದ ಕಂಪ್ಲೀಟ್​ ಮಾಹಿತಿ ಇಲ್ಲಿದೆ.

ಅಜ್ಜಿಯೇ ನನಗೆ ಸಂಸ್ಕಾರ ಕಲಿಸಿದರು

ಎಪಿಸೋಡ್​ ಒಂದರಲ್ಲಿ ಮಾತನಾಡಿರುವ ಸೋನು ಶ್ರೀನಿವಾಸ ಗೌಡ, ನನ್ನ ಜೀವನದಲ್ಲಿ ಏನೆಲ್ಲ ಆಯ್ತು ಅನ್ನೋದನ್ನು ನಾನು ಈ ವಿಡಿಯೋದಲ್ಲಿ ನಿಮಗೆ ತಿಳಿಸಿಕೊಡುತ್ತೇನೆ. ಎಲ್ಲರಿಗೂ ಅಪ್ಪ-ಅಮ್ಮನೇ ಜೀವ ಆದರೆ, ನನಗೆ ನಮ್ಮ ಅಜ್ಜಿನೇ ಆಗಿದ್ದರು. ಒಂಬತ್ತು ತಿಂಗಳು ಇದ್ದಾಗಲೇ ನನ್ನ ಅಮ್ಮ ಹಾಲನ್ನು ಬಿಡಿಸಿ, ಅಜ್ಜಿಯ ಬಳಿ ಬಿಟ್ಟಿದ್ದರು. ಅಜ್ಜಿಯೇ ನನಗೆ ಸಂಸ್ಕಾರ ಕಲಿಸಿ, ಎಲ್ಲರ ಜೊತೆ ಹೇಗೆ ಮಾತನಾಡಬೇಕು ಎನ್ನುವುದನ್ನು ಹೇಳಿಕೊಟ್ಟರು. ಬೆಳೆಯುತ್ತಾ ಹೋದಂತೆ, ಅಜ್ಜಿಗೆ ತನ್ನ ಮೊಮ್ಮಗಳು ದೊಡ್ಡವಳಾಗಿ ತನ್ನನ್ನು ಚೆನ್ನಾಗಿ ಆರೈಕೆ ಮಾಡಲಿ ಎಂಬ ಆಸೆ ಇತ್ತು. 7ನೇ ತರಗತಿಯಲ್ಲಿ ಇದ್ದಾಗ ಅಜ್ಜಿ ತೀರಿಕೊಂಡರು. ಅದು ನನಗೆ ದೊಡ್ಡ ಆಘಾತವನ್ನು ನೀಡಿತು. ನಂತರ ಹತ್ತಿರದವರ ಸಹಾಯದಿಂದ 9ನೇ ತರಗತಿಯನ್ನು ಊರಿನಲ್ಲೇ ಮುಗಿಸಿದೆ. 10ನೇ ತರಗತಿಗೆ ಬಂದಾಗ ಅಮ್ಮನ ಪ್ರೀತಿ ಮತ್ತು ಅಮ್ಮನ ಹತ್ತಿರ ಇರಬೇಕು ಎಂಬ ಆಸೆಯಿಂದ ಅಮ್ಮನ ಬಳಿಗೆ ಹೋದೆನು. ಆದರೆ, ಅಮ್ಮ ನಾನು ಚೆನ್ನಾಗಿ ಓದಲಿ, ಒಳ್ಳೆಯ ಅಂಕಗಳನ್ನು ಪಡೆಯಲಿ ಎಂಬ ಕಾರಣಕ್ಕೆ ನನ್ನನ್ನು ಹಾಸ್ಟೆಲ್‌ಗೆ ಸೇರಿಸಿದರು ಎಂದು ಹೇಳಿದರು.

ಫೋನ್ ಕೂಡ ಇರಲಿಲ್ಲ

ಎರಡನೇ ಎಪಿಸೋಡ್​ನಲ್ಲಿ ತನ್ನ ಹಾಸ್ಟೆಲ್​ ದಿನಗಳ ಬಗ್ಗೆ ಮಾತನಾಡಿರುವ ಸೋನು, ಹತ್ತನೇ ತರಗತಿಯ ನಂತರ ಹಾಸ್ಟೆಲ್ ಸೇರಿ ಚೆನ್ನಾಗಿ ಓದಿದ ಕಾರಣ ಅವರಿಗೆ ಉತ್ತಮ ಅಂಕಗಳು ಬಂದವು. ಅಮ್ಮನ ಜೊತೆಗಿರಬಹುದು ಎಂಬ ಸಂಭ್ರಮದಲ್ಲಿದ್ದಾಗ, ಮನೆಯವರ ಒತ್ತಾಯಕ್ಕೆ ಮಣಿದು ಇಷ್ಟವಿಲ್ಲದಿದ್ದರೂ ವಿಜ್ಞಾನ ವಿಭಾಗಕ್ಕೆ ಸೇರಬೇಕಾಯಿತು. ಪಿಸಿಎಂಬಿ (PCMB) ಓದುವುದು ತುಂಬಾ ಕಷ್ಟವಾದಾಗ, ಅದನ್ನು ಅರ್ಧಕ್ಕೇ ನಿಲ್ಲಿಸಿ ನಂತರ ಡಿಪ್ಲೋಮಾ ಸೇರಿದರು. ಆ ಸಮಯದಲ್ಲಿ ತಾವು ಈಗಿನಂತೆ ಇರಲಿಲ್ಲ, ಯಾರೊಂದಿಗೂ ಹೆಚ್ಚು ಮಾತನಾಡುತ್ತಿರಲಿಲ್ಲ ಮತ್ತು ಕಾಲೇಜಿಗೆ ಒಂದು ಕಡೆ ಸುಮಾರು 35 ರಿಂದ 50 ಕಿಲೋಮೀಟರ್ ದೂರ ಪ್ರಯಾಣ ಮಾಡಬೇಕಾಗುತ್ತಿತ್ತು. ಅಷ್ಟೇ ಅಲ್ಲದೆ, ಅಂದು ತಮ್ಮ ಬಳಿ ಫೋನ್ ಕೂಡ ಇರಲಿಲ್ಲ ಎಂದು ಸೋನು ವಿವರಿಸಿದ್ದಾರೆ.

ಮೊದಲ ಪ್ರಮೋಷನ್‌ನಿಂದ 500 ರೂ.

ಮೂರನೇ ಎಪಿಸೋಡ್​ನಲ್ಲಿ ತನಗೆ 19 ವರ್ಷ ಆಗುವವರೆಗೂ ಸ್ವಂತ ಫೋನ್ ಇರಲಿಲ್ಲವೆಂದು ಮತ್ತು ಆಗೊಮ್ಮೆ ಈಗೊಮ್ಮೆ ತಾಯಿಯ ಫೋನ್ ಬಳಸುತ್ತಿದ್ದಾಗಿ ಸೋನು ಹೇಳಿಕೊಂಡಿದ್ದಾರೆ. ನಂತರ ವಿದ್ಯಾಭ್ಯಾಸ ಮುಗಿಸಿ ಬೆಳಗಾವಿಯ 'ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್' (BEL) ಸಂಸ್ಥೆಯಲ್ಲಿ ಒಂದು ವರ್ಷ ಕೆಲಸ ಮಾಡಿದ್ದಾಗಿ ತಿಳಿಸಿದ್ದಾರೆ. ಆ ಕೆಲಸ ಬಿಟ್ಟ ನಂತರ ಟಿಕ್‌ಟಾಕ್ ಮೂಲಕ ತಮ್ಮ ಸಾಮಾಜಿಕ ಜಾಲತಾಣದ ಪಯಣ ಆರಂಭವಾಯಿತೆಂದೂ, ಮೊದಲ ಪ್ರಮೋಷನ್‌ನಿಂದ 500 ರೂಪಾಯಿ ಆದಾಯ ಬಂದಾಗ ಹಣ ಗಳಿಸುವ ಆಸಕ್ತಿ ಹೆಚ್ಚಾಯಿತೆಂದೂ ವಿವರಿಸಿದ್ದಾರೆ. ಆದರೆ, ಸರಿಯಾಗಿ ತಮ್ಮ ಹುಟ್ಟುಹಬ್ಬದಂದೇ ಟಿಕ್‌ಟಾಕ್ ಬ್ಯಾನ್ ಆದಾಗ ತುಂಬಾ ಬೇಸರವಾಗಿತ್ತೆಂದು, ನಂತರ ಇನ್‌ಸ್ಟಾಗ್ರಾಮ್ ರೀಲ್ಸ್ ಮಾಡಲು ಶುರುಮಾಡಿದ್ದಾಗಿ ಹಾಗೂ ಆ ಸಮಯದಲ್ಲಿ ಎದುರಿಸಿದ ಟ್ರೋಲ್ ಮತ್ತು ವೈಯಕ್ತಿಕ ಜೀವನದ ಏರಿಳಿತಗಳ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಸುವುದಾಗಿ ಹೇಳುತ್ತಾ ಮೂರನೇ ಎಪಿಸೋಡ್​ ವಿಡಿಯೋ ಮುಕ್ತಾಯಗೊಳಿಸಿದರು.

ಬೆನ್ನೆಲುಬಾಗಿ ನಿಂತಿದ್ದು ಸಹೋದರ

ತನ್ನ ನಾಲ್ಕನೇ ಎಪಿಸೋಡ್​ನಲ್ಲಿ ಸೋಶಿಯಲ್ ಮೀಡಿಯಾ ಟ್ರೋಲ್‌ಗಳಿಂದಾಗಿ ತನ್ನ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳು ಎದುರಾಗಿವೆ ಎಂದು ಸೋನು ಭಾವುಕರಾದರು. ಈ ಟ್ರೋಲ್​ಗಳಿಂದ ತನ್ನ ಪ್ರೇಮ ಜೀವನ ಮತ್ತು ಕುಟುಂಬದಲ್ಲಿ ಜಗಳಗಳು ಶುರುವಾದವು ಮತ್ತು ನನ್ನ ತಾಯಿ ಆರು ತಿಂಗಳ ಕಾಲ ಮಾತನಾಡಿಸಿರಲಿಲ್ಲ ಎಂದು ಸೋನು ನೋವು ಹಂಚಿಕೊಂಡಿದ್ದಾರೆ. ಆದರೆ, ಈ ಕಷ್ಟದ ಸಮಯದಲ್ಲಿ ಸಹೋದರ ಸಾಗರ್ ಬೆನ್ನೆಲುಬಾಗಿ ನಿಂತು ಪ್ರೋತ್ಸಾಹಿಸಿದನು. ನನ್ನ ಪ್ರಿಯಕರ ಮಾನಸಿಕವಾಗಿ ತುಂಬಾ ಹಿಂಸೆ ನೀಡುತ್ತಿದ್ದ, ಪ್ರತಿ ವಿಷಯಕ್ಕೂ ನೆಗೆಟಿವ್ ಆಗಿ ಮಾತನಾಡುತ್ತಿದ್ದ ಮತ್ತು ಇತರರ ಜೊತೆ ಮಾತನಾಡಲು ಬಿಡುತ್ತಿರಲಿಲ್ಲ. ಈ ಎಲ್ಲಾ ಕಿರುಕುಳಗಳಿಂದ ಬೇಸತ್ತು ಒಮ್ಮೆ ಆತನಿಂದ ದೂರಾಗಿದ್ದರೂ ಮತ್ತೆ ಒಂದಾಗಬೇಕಾಯಿತು. ಆ ನಂತರ ನಡೆದ ಘಟನೆಗಳನ್ನು ಮುಂದಿನ ಭಾಗದಲ್ಲಿ ತಿಳಿಸುತ್ತೇನೆ ಎಂದು ವಿಡಿಯೋ ಮುಗಿಸಿದಳು.

ಟ್ರೋಲ್‌ಗಳ ಬಗ್ಗೆ ಮಾತು

ತನ್ನ ಐದನೇ ಎಪಿಸೋಡ್​ನಲ್ಲಿ ಹಳೆಯ ಸಂಬಂಧದ ಬಗ್ಗೆ ಮಾತನಾಡಿರುವ ಸೋನು, ತನ್ನ ಮಾಜಿ ಗೆಳೆಯ ತನ್ನನ್ನು ಕೀಳಾಗಿ ಕಾಣುತ್ತಿದ್ದ. ನಾನು ಆತನಿಗೆ ಅತಿಯಾದ ನಿಷ್ಠೆ ತೋರಿಸಿದ್ದೇ ಇದಕ್ಕೆ ಕಾರಣವಿರಬಹುದು ಎಂದು ಹೇಳಿದ್ದಾರೆ. ಬೇರೆ ಯಾರೊಂದಿಗೂ ನಾನು ಮಾತನಾಡಬಾರದೆಂದು ನಿರ್ಬಂಧಿಸುತ್ತಿದ್ದನು ಎಂದು ನೆನಪಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತನ್ನ ಬಗ್ಗೆ ಬರುತ್ತಿರುವ ನೆಗೆಟಿವ್ ಕಾಮೆಂಟ್‌ಗಳು ಮತ್ತು ಟ್ರೋಲ್‌ಗಳ ಬಗ್ಗೆಯೂ ಸೋನು ಪ್ರತಿಕ್ರಿಯಿಸಿದ್ದಾರೆ. ತಾವು ಹಳೆಯದನ್ನೆಲ್ಲ ಮರೆತು ಹೊಸ ಜೀವನ ಆರಂಭಿಸಿರುವುದಾಗಿ ತಿಳಿಸಿರುವ ಸೋನು, ಟ್ರೋಲ್ ಮಾಡುವವರು ಬೇರೆಯವರ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ತಮ್ಮ ಪೋಷಕರ ಕಡೆ ಗಮನಹರಿಸಲಿ ಎಂದು ಸಲಹೆ ನೀಡಿದ್ದಾರೆ. ಒಮ್ಮೆ ಇವರು ನಕಲಿ ಖಾತೆಯ ಮೂಲಕ ಟ್ರೋಲ್ ಪುಟವೊಂದಕ್ಕೆ 'ಯಾಕೆ ಹೀಗೆ ಮಾಡುತ್ತೀರಿ?' ಎಂದು ಕೇಳಿದಾಗ, 'ಲೈಕ್ಸ್ ಮತ್ತು ವ್ಯೂಸ್ ಜಾಸ್ತಿ ಬರುತ್ತದೆ' ಎಂಬ ಉತ್ತರ ಬಂದಿತ್ತಂತೆ. ಇದನ್ನು ಕೇಳಿ ಇವರು ಸಿಟ್ಟಾಗದೆ, ತನ್ನಿಂದ ಯಾರಿಗಾದರೂ ಹಣ ಗಳಿಸಲು ಅಥವಾ ಜೀವನ ನಡೆಸಲು ಸಹಾಯವಾಗುತ್ತಿದ್ದರೆ ಆಗಲಿ ಎಂದು ಸಮಾಧಾನ ಪಟ್ಟುಕೊಂಡಿದ್ದಾಗಿ ಹೇಳಿದ್ದಾರೆ. ವಿಡಿಯೋದ ಕೊನೆಯಲ್ಲಿ ತನ್ನ ಹಳೆಯ ಗೆಳೆಯನ ಬಗ್ಗೆ ಇನ್ನೂ ಹೆಚ್ಚಿನ ವಿಚಾರಗಳನ್ನು ಮುಂದಿನ ವಿಡಿಯೋದಲ್ಲಿ ಹಂಚಿಕೊಳ್ಳುವುದಾಗಿ ತಿಳಿಸಿ, ಐದನೇ ಎಪಿಸೋಡ್​ ಮುಗಿಸಿದರು.

ಬ್ರೇಕಪ್​ ಸ್ಟೋರಿ

ತನ್ನ ಆರನೇ ಎಪಿಸೋಡ್​ನಲ್ಲಿ ತನ್ನ ಹಳೆಯ ಪ್ರೀತಿಯಲ್ಲಿನ ಮನಸ್ತಾಪಗಳ ಬಗ್ಗೆ ಸೋನು ಮಾತನಾಡಿದ್ದಾರೆ. ತನ್ನ ಪ್ರಿಯಕರ ಆತನ ಮಾಜಿ ಪ್ರೇಯಸಿಯೊಂದಿಗೆ ಸಂಪರ್ಕದಲ್ಲಿದ್ದುದು ಮತ್ತು ಜಗಳದ ಸಮಯದಲ್ಲಿ ಆತ ತನ್ನ ಕುಟುಂಬದವರ ಬಗ್ಗೆ ಹಗುರವಾಗಿ ಮಾತನಾಡಿದ್ದರಿಂದ ಬೇಸತ್ತು ಆ ಸಂಬಂಧವನ್ನು ಮುರಿದುಕೊಂಡಿದ್ದಾಗಿ ಸೋನು ತಿಳಿಸಿದ್ದಾರೆ. ಸುಮಾರು ಆರು ತಿಂಗಳ ಕಾಲ ಅವರಿಬ್ಬರ ನಡುವೆ ಯಾವುದೇ ಸಂಪರ್ಕವಿರಲಿಲ್ಲ ಮತ್ತು ಹಳೆಯ ನೆನಪುಗಳಿಂದ ಹೊರಬರಲು ಆಕೆ ಸಾಕಷ್ಟು ಪ್ರಯತ್ನಿಸಿದಳಂತೆ. ಅದೇ ಸಮಯದಲ್ಲಿ ಆಕೆಗೆ ಇನ್‌ಸ್ಟಾಗ್ರಾಂ ಮೂಲಕ ಮತ್ತೊಬ್ಬ ಯುವಕನ ಪರಿಚಯವಾಗುತ್ತೆ. ಆರಂಭದ ಮಾತುಕತೆ, ನಂತರ ಪ್ರೀತಿಗೆ ತಿರುಗುತ್ತದೆ.

ಹೊಸ ಪ್ರೀತಿ ಆರಂಭ

ಏಳನೇ ಎಪಿಸೋಡ್​ನಲ್ಲಿ ತನ್ನ ಎರಡನೇ ಪ್ರೀತಿಯ ಬಗ್ಗೆ ಮಾತನಾಡಿರುವ ಸೋನು, ಮೊದಲ ಪ್ರೀತಿಯಲ್ಲಿ ಸಿಗದ ನಂಬಿಕೆ ಮತ್ತು ಗೌರವವನ್ನು ಪಡೆಯಲು ಎರಡನೇ ಪ್ರೀತಿ ಅನಿವಾರ್ಯವಾಯಿತು ಎಂದಿದ್ದಾರೆ. ಇದು ಒಂದು ಆನ್‌ಲೈನ್ ಪ್ರೇಮಕಥೆಯಾಗಿದ್ದು, ಅವರಿಬ್ಬರೂ ಬೇರೆ ಬೇರೆ ದೇಶಗಳಲ್ಲಿ ವಾಸಿಸುತ್ತಿದ್ದರಿಂದ ಇದುವರೆಗೂ ಮುಖಾಮುಖಿಯಾಗಿ ಭೇಟಿಯಾಗಿಲ್ಲ. ಆದರೂ ಫೋನ್ ಕರೆಯಲ್ಲಿ ದೀರ್ಘಕಾಲ ಮಾತನಾಡುತ್ತಾ, ಒಬ್ಬರಿಗೊಬ್ಬರು ಸಮಯ ನೀಡುತ್ತಾ ಈ ಸಂಬಂಧವನ್ನು ಸುಂದರವಾಗಿ ಮುನ್ನಡೆಸುತ್ತಿದ್ದೆವು. ಇಬ್ಬರೂ ತಮ್ಮ ಹಳೆಯ ಸಂಬಂಧಗಳ (Ex) ಬಗ್ಗೆ ಪರಸ್ಪರ ಹಂಚಿಕೊಂಡಿದ್ದು, ಅದನ್ನು ಗೌರವದಿಂದ ಸ್ವೀಕರಿಸಿದ್ದೆವು. ಕೊನೆಯಲ್ಲಿ, ಆತ ವಿಡಿಯೋ ಕಾಲ್ ಮಾಡಲು ಕೇಳಿದಾಗ ಆಕೆ ಏನು ಹೇಳಿದಳು ಎಂಬುದನ್ನು ತಿಳಿಸುವುದಾಗಿ ಹೇಳಿ 7ನೇ ಎಪಿಸೋಡ್​ ಮುಗಿಸಿದರು.

ನಂಬಿಕೆ ಇಟ್ಟು ಒಪ್ಪಿಕೊಂಡೆ

ತನ್ನ 8ನೇ ಎಪಿಸೋಡ್​ನಲ್ಲಿ ತಮ್ಮ ಜೀವನದ ಒಂದು ಕಹಿ ಘಟನೆಯನ್ನು ಸೋನು ಹಂಚಿಕೊಂಡಿದ್ದಾರೆ. ಮೊದಲ ಪ್ರೀತಿ ವಿಫಲವಾದ ನಂತರ ಮತ್ತೊಬ್ಬರೊಂದಿಗೆ ವಿಡಿಯೋ ಕಾಲ್ ಮೂಲಕ ಪರಿಚಯವಾಗಿ, ಅದು ಕ್ರಮೇಣ ಪ್ರೀತಿಗೆ ತಿರುಗುತ್ತದೆ. ಈ ಹೊಸ ಸಂಬಂಧವು ತಮಗೆ ಮೊದಲೇ ಸಿಗಬಾರದಿತ್ತೇ ಎಂದು ನಾನು ಭಾವಿಸಿದ್ದೆ. ಅಷ್ಟರ ಮಟ್ಟಿಗೆ ನಾವಿಬ್ಬರು ಹತ್ತಿರವಾಗಿದ್ದೆವು. ಆದರೆ, ಒಂದು ದಿನ ಆ ವ್ಯಕ್ತಿ ವಿಡಿಯೋ ಕಾಲ್‌ನಲ್ಲಿ ಅತಿರೇಕದ ಬೇಡಿಕೆಯನ್ನಿಟ್ಟಾಗ, ಮೊದಲು ನಿರಾಕರಿಸಿದರೂ ನಂತರ ಅವರ ಮೇಲಿನ ನಂಬಿಕೆಯಿಂದ ಒಪ್ಪಿಕೊಂಡೆ. ಆದರೆ ಕಾಲಾನಂತರದಲ್ಲಿ ಆ ವ್ಯಕ್ತಿಯು ಅದೇ ವಿಡಿಯೋವನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ. "ಯಾರನ್ನೂ ಅತಿಯಾಗಿ ನಂಬಬಾರದು" ಎಂಬುದು ಆ ಬಳಿಕ ಗೊತ್ತಾಯಿತು ಎಂದು ಸೋನು ಹೇಳಿದ್ದಾರೆ.

ಹಣಕ್ಕಾಗಿ ಬ್ಲಾಕ್​ಮೇಲ್​ ಶುರು

ತಮ್ಮ 9ನೇ ಎಪಿಸೋಡ್​ನಲ್ಲಿ ತನಗಾದ ಬ್ಲ್ಯಾಕ್‌ಮೇಲ್ ಅನುಭವವನ್ನು ಸೋನು ಹಂಚಿಕೊಂಡಿದ್ದಾರೆ. ಆ ಯುವಕ ಆಕೆಗೆ ಹಣ ನೀಡುವಂತೆ ಪೀಡಿಸುತ್ತಾ, ಇಲ್ಲದಿದ್ದರೆ ಆಕೆಯ ಜೀವನ ಹಾಳುಮಾಡುವುದಾಗಿ ಬೆದರಿಕೆ ಹಾಕಲು ಪ್ರಾರಂಭಿಸಿದನು. ಮೊದಮೊದಲು ಆಕೆ ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೂ, ನಂತರ ಆತ ವಾಟ್ಸ್​ಆ್ಯಪ್‌ನಲ್ಲಿ ಆಕೆಗೆ ಸಂಬಂಧಿಸಿದ ಐದು ಸೆಕೆಂಡಿನ ಅಶ್ಲೀಲ ವಿಡಿಯೋ ಒಂದನ್ನು ಕಳುಹಿಸಿದಾಗ ಸೋನು ಬೆಚ್ಚಿಬಿದ್ದರಂತೆ. ಇದರಿಂದ ಗಾಬರಿಗೊಂಡ ಆಕೆ ಸ್ವಲ್ಪ ಹಣವನ್ನು ನೀಡಿದರೂ ಸಹ, ಆತ ಪದೇಪದೆ ಹಣಕ್ಕಾಗಿ ಪೀಡಿಸತೊಡಗಿದನು. ಇದರಿಂದ ಬೇಸತ್ತು ಅಂತಿಮವಾಗಿ ಆಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಆ ವ್ಯಕ್ತಿಯ ಹೆಸರು, ಫೋಟೋ ಮತ್ತು ವಿಳಾಸದ ಮಾಹಿತಿಯನ್ನು ನೀಡಿದರು. ದೂರು ನೀಡಿದ ಪ್ರತಿಯನ್ನು ಆ ವ್ಯಕ್ತಿಗೆ ಕಳುಹಿಸಿದ ನಂತರ ಆತನಿಂದ ಮರಳಿ ಸಂದೇಶ ಬಂದಿದ್ದು, ಮುಂದೇನಾಯಿತು ಎಂಬುದನ್ನು 10ನೇ ಸಂಚಿಕೆಯಲ್ಲಿ ತಿಳಿಸುವುದಾಗಿ ಹೇಳಿ ವಿಡಿಯೋ ಮುಗಿಸಿದಳು.

ಸಾರ್ವಜನಿಕವಾಗಿ ವಿಡಿಯೋ ಪಬ್ಲಿಷ್

ತನ್ನ 10ನೇ ಎಪಿಸೋಡ್​ನಲ್ಲಿ ತನ್ನ ನೋವಿನ ಅನುಭವವನ್ನು ಸೋನು ಹಂಚಿಕೊಂಡಿದ್ದಾರೆ. ತಾನು ದೂರು ನೀಡಿದ ಬೆನ್ನಲ್ಲೇ ಆತ ಮತ್ತೊಂದು ವಿಡಿಯೋವನ್ನು ಮರಳಿ ಕಳುಹಿಸಿದ. ಇದರಿಂದ ನಾನು ತುಂಬಾ ಗಾಬರಿಗೊಂಡೆ. ಆ ಕ್ಷಣದಲ್ಲಿ ಕೈಯಿಂದ ಫೋನ್ ಕೆಳಗೆ ಬಿದ್ದಷ್ಟು ಆತಂಕವಾಗಿತ್ತು. ಪ್ರೀತಿಗಾಗಿ ನಾನು ಮಾಡಿದ್ದು ತಪ್ಪೋ ಅಥವಾ ಸರಿಯೋ ಎಂಬ ಗೊಂದಲದ ಜೊತೆಗೆ, ಯಾರ ಬಳಿಯೂ ಹೇಳಿಕೊಳ್ಳಲಾಗದ ಅಸಹಾಯಕ ಸ್ಥಿತಿಯಲ್ಲಿ ದಿನಕ್ಕೊಂದು ಮೆಸೇಜ್ ಬರುತ್ತಿದ್ದಂತೆ ನಾನು ಮಾನಸಿಕವಾಗಿ ಕುಗ್ಗಿ ಹೋಗಿದೆ. ಇಂತಹ ಕಷ್ಟದ ಸಮಯದಲ್ಲಿ ನನ್ನ ಮನೆಯಲ್ಲಿದ್ದ ಪುಟ್ಟ ನಾಯಿ 'ಬ್ರೀಜರ್' ನನಗೆ ಅತ್ಯುತ್ತಮ ಸ್ನೇಹಿತನಾಗಿ ಸಾಂತ್ವನ ನೀಡಿತು. ಕೊನೆಯಲ್ಲಿ, ನಾನು ನಂಬರ್ ಬ್ಲಾಕ್ ಮಾಡಿದ್ದಕ್ಕೆ ಸಿಟ್ಟಾದ ಆತ, ನನ್ನ ವಿಡಿಯೋವನ್ನು ಸಾರ್ವಜನಿಕವಾಗಿ ಪಬ್ಲಿಷ್ ಮಾಡಿದ ಎಂದು ಸೋನು ಹೇಳಿದ್ದಾರೆ.

ಪೊರಕೆ ತೆಗೆದುಕೊಂಡು ಬಾರಿಸಿದ ಅಮ್ಮ

ಹನ್ನೊಂದನೇ ಎಪಿಸೋಡ್​ನಲ್ಲಿ ಮಾತನಾಡಿರುವ ಸೋನು, ಖಾಸಗಿ ವಿಡಿಯೋ ಸಾರ್ವಜನಿಕವಾಗಿ ಹಂಚಿಕೆಯಾದಾಗ ನಾನು ಬಹಳಷ್ಟು ನೋವು ಅನುಭವಿಸಿದೆ. ಈ ವಿಷಯ ನನ್ನ ಅಮ್ಮ ಮತ್ತು ತಮ್ಮನಿಗೆ ತಿಳಿದರೆ ಅವರು ಹೇಗೆ ಪ್ರತಿಕ್ರಿಯಿಸಬಹುದು ಎಂಬ ಆತಂಕ ನನ್ನಲ್ಲಿತ್ತು. ಆದರೆ ನನ್ನ ತಮ್ಮ ಬೆಂಬಲವಾಗಿ ನಿಂತನು. ಇದು ನಿನ್ನ ತಪ್ಪಲ್ಲ, ನಿನ್ನ ನಂಬಿಕೆಗೆ ದ್ರೋಹವಾಗಿದೆ ಎಂದು ಸಮಾಧಾನಪಡಿಸಿದನು. ಹಳ್ಳಿಯ ಜನರ ಟೀಕೆಗಳಿಂದ ನನ್ನ ತಾಯಿ ಕೂಡ ಮಾನಸಿಕವಾಗಿ ತೊಂದರೆಗೊಳಗಾಗಿದ್ದರು. ಕೊನೆಗೆ ನಾನು ನನ್ನ ತಾಯಿಯನ್ನು ಬೆಂಗಳೂರಿಗೆ ಕರೆಸಿಕೊಂಡು, ನಡೆದ ಘಟನೆಗಳ ಬಗ್ಗೆ ವಿವರವಾಗಿ ತಿಳಿಸಿ ಕ್ಷಮೆ ಕೇಳಿದೆ. ಆಗ ನನ್ನ ತಾಯಿ ಕೋಪದಿಂದ ನನಗೆ ಪೊರಕೆ ತೆಗೆದುಕೊಂಡು ಹೊಡೆದರು ಎಂದು ಸೋನು ಹೇಳಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net