ಬೆಂಗಳೂರು : ‘ಗತವೈಭವ’ ಬಳಿಕ ನಿರ್ದೇಶಕ ಸಿಂಪಲ್ ಸುನಿ ಸ್ಯಾಂಡಲ್‌ವುಡ್‌ನಲ್ಲಿ ಮತ್ತಷ್ಟು ಬಿಜಿಯಾಗಿದ್ದಾರೆ. ಸದ್ಯ ಅವರ ನಿರ್ದೇಶನದ ಒಂದು ಸಿನಿಮಾ ರಿಲೀಸ್‌ಗಿದ್ದು, ಮೂರು ಚಿತ್ರಗಳು ಚಿತ್ರೀಕರಣ ಹಂತದಲ್ಲಿವೆ. ಈ ಮಧ್ಯೆ, ಮತ್ತೊಂದು ಬಿಗ್‌ಬಜೆಟ್‌ನ ಸಿನಿಮಾದ ಸಿದ್ಧತೆಯಲ್ಲಿದ್ದಾರೆ. ಅಂದುಕೊಂಡಂತಾದರೆ, ಈ ವರ್ಷ ಸುನಿ ನಿರ್ದೇಶನದ ಮೂರು ಸಿನಿಮಾಗಳು ರಿಲೀಸ್ ಆಗುವ ನಿರೀಕ್ಷೆಯಿದ್ದು, ಅದರಲ್ಲಿ ಮೊದಲಿಗೆ ‘ಮೋಡ ಕವಿದ ವಾತಾವರಣ’ ಚಿತ್ರ ಜೂನ್ 26ಕ್ಕೆ ಸಿನಿಮಾ ತೆರೆಗೆ ಬರಲಿದೆ. ಕಳೆದ ವರ್ಷವೇ ಶೂಟಿಂಗ್ ಮುಗಿಸಿದ್ದ ‘ಮೋಡ ಕವಿದ ವಾತಾವರಣ’ ಚಿತ್ರ ಇಷ್ಟೊತ್ತಿಗೆ ತೆರೆ ಮೇಲೆ ಬಂದಿರಬೇಕಿತ್ತು. ಆದರೆ, ಕ್ರಿಕೆಟ್ ಹಂಗಾಮಾ ಹಾಗೂ ಬಿಗ್ ಬಜೆಟ್ ಸಿನಿಮಾಗಳ ಜಂಗುಳಿಯಲ್ಲಿ ಕಳೆದುಹೋಗಬಾರದು ಎಂದು ಚಿತ್ರತಂಡ ಆರು ತಿಂಗಳು ಮುಂದಕ್ಕೆ ಹೋಗಿದೆ. ‘ಕಳೆದ ಜನವರಿ ಅಥವಾ ಪ್ರೇಮಿಗಳ ದಿನಕ್ಕೆ ‘ಮೋಡ ಕವಿದ ವಾತಾವರಣ’ ಬಿಡುಗಡೆಗೆ ನಿಶ್ಚಯಿಸಿದ್ದೆವು. ಟಿ-20 ವಿಶ್ವಕಪ್ ಆರಂಭವಾಯಿತು. ಬಳಿಕ ‘ಟಾಕ್ಸಿಕ್’, ‘ಧುರಂಧರ್ 2’ ರಿಲೀಸ್‌ಗಿದ್ದವು. ಇದೀಗ ಐಪಿಎಲ್ ಆರಂಭಗೊಂಡಿದೆ. ಹಾಗಾಗಿ, ನಾವೇ ಮುಂದೇ ಹೋಗಿ ಜೂ. 26ಕ್ಕೆ ಬಿಡುಗಡೆಗೆ ನಿಶ್ಚಿಯಿಸಿದ್ದೇವೆ. ಟೈಟಲ್ ಹೇಳುವಂತೆ ಇದೊಂದು ಭಾವನೆಗಳ ಸಮ್ಮಿಶ್ರಣಗೊಂಡ ಲವ್ ಸ್ಟೋರಿ, ಸಂತೋಷ, ಪ್ರೀತಿ, ದುಃಖ, ದುಗುಡ ತರುವ ಎಲ್ಲ ಅಂಶಗಳಿವೆ. ಮೊದಲಿಗೆ ಈ ಟೈಟಲ್ ಗೌತಮ್ ಅವರಲ್ಲಿತ್ತು. ಕೆಲ ವರ್ಷಗಳ ಹಿಂದೆಯೇ ನೋಂದಾಯಿಸಿ, ಶ್ರೀನಗರ ಕಿಟ್ಟಿಗೆ ಸಿನಿಮಾ ಮಾಡಲು ನಿಶ್ಚಯಿಸಿದ್ದರು. ನಾವು ಟೈಟಲ್ ಕೇಳಿದಾಗ ಗೌತಮ್ ನೀಡಿ ಸಹಕರಿಸಿದರು. ಇಲ್ಲಿ ನಾಯಕ ಶೀಲಂ, ನಟಿಯರಾದ ಸಾತ್ವಿಕಾ, ಮೋಕ್ಷಾ ಕುಶಾಲ್ ನಡುವೆಯೇ ಶೇ.90ರಷ್ಟು ಕಥೆ ನಡೆಯುತ್ತದೆ. ಈ ಚಿತ್ರದ ಬಳಿಕ ಈ ಮೂವರು ಚಿತ್ರರಂಗದಲ್ಲಿ ಭರವಸೆ ಮೂಡಿಸುವ ಕಲಾವಿದರಾಗುತ್ತಾರೆ ಆಶಾವಾದ ನನ್ನದು’ ಎಂಬುದು ಸಿಂಪಲ್ ಸುನಿ ಆಶಯ.