ಬೆಂಗಳೂರು : ಕನ್ನಡದ ಹಲವು ನಟರು ಅಭಿನಯದ ಜತೆಗೆ ಸಿನಿಮಾ ನಿರ್ಮಾಣಕ್ಕಿಳಿಯುತ್ತಿದ್ದಾರೆ. ರಾಜ್ ಬಿ. ಶೆಟ್ಟಿ, ಪ್ರಜ್ವಲ್ ದೇವರಾಜ್, ರಾಜವರ್ಧನ್ ಸೇರಿ ಹಲವು ನಟರು ತಮ್ಮ ಚಿತ್ರಗಳ ಜತೆಗೆ ಬೇರೆಯವರ ಸಿನಿಮಾಗಳನ್ನು ನಿರ್ಮಿಸಿದ್ದರು. ಇದೀಗ ಈ ಸಾಲಿಗೆ ‘ಜಸ್ಟ್ ಮ್ಯಾರೀಡ್’ ಖ್ಯಾತಿಯ ಶೈನ್ ಶರಶ್ ಶೆಟ್ಟಿ ಸೇರುತ್ತಿದ್ದಾರೆ. ಹೌದು, ನಟ ಶೈನ್ ಇದೀಗ ನಿರ್ಮಾಪಕರಾಗಿದ್ದು, ‘ಶಂಕರಾಭರಣ’ ಚಿತ್ರದ ಜತೆಗೆ ‘ಫೈರ್’ ಎಂಬ ಮ್ಯೂಸಿಕ್ ವಿಡಿಯೋವನ್ನು ನಿರ್ಮಿಸಿ, ಭರವಸೆಯಲ್ಲಿದ್ದಾರೆ. ‘ಸಿನಿಮಾ ನಿರ್ಮಾಣ ಮಾಡಬೇಕೆಂಬುದು ಬಹುದಿನಗಳ ಕನಸು ಇದೀಗ ನೆರವೇರಿದೆ. ಈ ನನ್ನ ಕನಸಿಗೆ ಉಡುಪಿ ಸ್ನೇಹಿತರು ಬೆಂಬಲವಾಗಿ ನಿಂತಿದ್ದಾರೆ. ಇನ್ನು ರಿಷಬ್, ರಕ್ಷಿತ್, ರಾಜ್, ದುನಿಯಾ ವಿಜಯ್ ಸೇರಿ ಹಲವರು ನಟನೆ ಜತೆಗೆ ನಿರ್ದೇಶನ, ನಿರ್ಮಾಣಕ್ಕಿಳಿದಾಗ ನನಗೂ ಅದೇ ರೀತಿ ಎಲ್ಲ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳಬೇಕು ಎಂಬ ಕಿಡಿ ನನ್ನೊಳಗಿತ್ತು. ಇದೀಗ ‘ಶಂಕರಾಭರಣ’ ಮತ್ತು ‘ಫೈರ್’ ಮೂಲಕ ಸಾಧ್ಯವಾಗಿದೆ. ‘ಶಂಕರಾಭರಣ’ ಉಡುಪಿ ಭಾಗದಲ್ಲಿ ನಡೆಯುವ ಕಥೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿ, ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ನಡೆಯುತ್ತಿವೆ. ಅದರಲ್ಲಿ ಬಿಜಿಯಾಗಿದ್ದೇನೆ. ಇತ್ತೀಚೆಗಷ್ಟೇ ಪೋಸ್ಟರ್ ರಿಲೀಸ್ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಎಲ್ಲ ಮಾಹಿತಿ ಹಂಚಿಕೊಳ್ಳಲಿದ್ದೇನೆ. ಹಾಗೆಯೇ ‘ಫೈರ್’ ಎನ್ನುವುದು ಮ್ಯೂಸಿಕ್ ವಿಡಿಯೋ. ಜೀವನದಲ್ಲಿ ಎಲ್ಲ ಕಳೆದುಕೊಂಡಾಗ ನಮಗೊಂದು ಸ್ಫೂರ್ತಿಯ ಕಿಡಿ ಬೇಕಾಗುತ್ತದೆ. ಆ ಸಮಯದಲ್ಲಿ ಹೊಸ ಕೆಲಸ, ಜಾಗ ಅಥವಾ ಇನ್ಯಾವುದಕ್ಕೋ ಹುಡುಕಾಟ ನಡೆಸುತ್ತಿರುತ್ತೇವೆ. ಆ ಹುಡುಕಾಟವೇ ‘ಫೈರ್’. ಅವಿನಾಶ್ ಬಲೆಕ್ಕಿಲ ಸಾಹಿತ್ಯ ರಚಿಸಿದ್ದು, ಬಕ್ಕೇಶ್ ರೋಣದ್ ಮತ್ತು ಕಾರ್ತಿಕ್ ರಾವ್ ಸಂಗೀತ ಸಂಯೋಜಿಸಿದ್ದಾರೆ. ಈ ಮ್ಯೂಸಿಕ್ ಅಲ್ಬಂನಲ್ಲಿ ನಾನೇ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದೇನೆ. ಇದೇ ತಿಂಗಳು ರಿಲೀಸ್ ಮಾಡಲಿದ್ದೇವೆ. ನಿರ್ಮಾಣ ಹೊಸ ಸಾಹಸ. ಇದರಿಂದ ಸಾಕಷ್ಟು ಕಲಿತಿದ್ದೇನೆ’ ಎಂದು ಶೈನ್ ಸಂತಸವ್ಯಕ್ತಪಡಿಸುತ್ತಾರೆ.