ಮೈಸೂರು ದಸರಾಕ್ಕೆ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಬರುತ್ತಿರುವುದರಿಂದ ಪುಷ್ಪಗಿರಿ ಪೊಲೀಸ್ ಠಾಣೆಯ ಬಹುತೇಕ ಪೊಲೀಸರನ್ನು ಭದ್ರತೆ ನಿಯೋಜನೆಗೆ ಕಳುಹಿಸಲಾಗುತ್ತದೆ. ಇನ್ನು ಠಾಣೆಯಲ್ಲಿದ್ದ ಅಧಿಕಾರಿ ಆ್ಯಂಟನಿ ವರ್ಗಿಸ್ (ಪ್ರಮೋದ್) ಡ್ಯೂಟಿ ಮುಗಿಸಿ ಮನೆಗೆ ಹೋಗುತ್ತಾನೆ. ಮನೆಗೆ ಹೋದ ಅಧಿಕಾರಿಯನ್ನು ಯಾರೋ ಅಪರಿಚಿತರು ಅಪಹರಿಸಿ, ಕೊಲೆ ಮಾಡುತ್ತಾರೆ. ಬಳಿಕ ಗೀತಾ (ಅರ್ಚನಾ), ಸ್ಯಾಂಡಿ ಹೀಗೆ ಮೂವರು ಒಂದೇ ರೀತಿಯಲ್ಲಿ ಕೊಲೆಯಾಗುತ್ತಾರೆ. ಇದು ಪುಷ್ಪಗಿರಿ ಪೊಲೀಸ್ ಠಾಣೆಯ ಎಸ್‌ಐ ದಾಸ್‌ಗೆ (ಜಾನ್) ಚಾಲೆಂಜ್ ಆಗುತ್ತದೆ. ಇದರ ಮಧ್ಯೆ ಆ ಅಪರಿಚಿತರ ಮುಖ್ಯ ಟಾರ್ಗೆಟ್ ಎಸ್‌ಐ ದಾಸ್. ಅಷ್ಟಕ್ಕೂ ಪೊಲೀಸ್ ಅಧಿಕಾರಿಗಳೇ ಟಾರ್ಗೆಟ್ ಆಗಿದ್ದೇಕೆ? ಎಸ್‌ಐ ದಾಸ್ ಆ ಕಾಣದ ಕೈಗಳಿಗೆ ಬಲಿಯಾಗುತ್ತಾನಾ? ಪೊಲೀಸರನ್ನು ಕೊಂದವರ ಬೇಡಿಕೆಗಳೇನು? ತಿಳಿಯಲು ‘ಶೇಷ 2016’ ನೋಡಬೇಕಷ್ಟೇ. ಕರಾಳ ರಾತ್ರಿ, ಬಿಡದೆ ಸುರಿಯುವ ಮಳೆ, ಕಾರ್ಯಾಚರಣೆ ಇವೆಲ್ಲದರ ಜತೆಗೆ ಭೀಕರ ಅನಿಸುವ ಸರಣಿ ಕೊಲೆಗಳ ಮೂಲಕ ನಿರ್ದೇಶಕ ಪ್ರದೀಪ್ ಅರಸೀಕೆರೆ ಸಂಪೂರ್ಣ ಕ್ರೈಮ್ ಥ್ರಿಲ್ಲರ್ ತೆರೆ ಮೇಲೆ ತಂದಿದ್ದಾರೆ. ಮೊದಲ ಹತ್ತು ನಿಮಿಷ ವಿಶೇಷ ಅನಿಸುವ ದೃಶ್ಯಗಳಿವೆ. ಕ್ಲೈಮ್ಯಾಕ್ಸ್‌ವರೆಗೆ ಕಥೆಯನ್ನು ಬಿಟ್ಟುಕೊಟ್ಟಿಲ್ಲ. ಅಷ್ಟರ ಮಟ್ಟಿಗೆ ಕುತೂಹಲ ಕಾಯ್ದುಕೊಂಡಿದ್ದಾರೆ. ಮಧ್ಯಂತರದ ವೇಳೆ ಒಂದೆಡೆ ಕಥೆ ಸಾಗುವುದರಿಂದ ನಿಧಾನ ಅನಿಸುತ್ತದೆ. ಜಾನ್ ಕೈಪ್ಪಲಲ್ಲಿ, ಪ್ರಮೋದ್ ಶೆಟ್ಟಿ, ಅರ್ಚನಾ ಕೊಟ್ಟಿಗೆ ಪೊಲೀಸ್ ಸಮವಸದಲ್ಲಿ ಮಿಂಚಿದ್ದಾರೆ. ದೇವರಾಜ್, ಸಿದ್ಲಿಂಗು ಶ್ರೀಧರ್ ಅವರಂತಹ ಹಿರಿಯರ ಜತೆಗೆ ಹಲವು ಹೊಸಬರು ತಾರಾಗಣದಲ್ಲಿದ್ದು, ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಚಿತ್ರದ ಹೈಲೈಟ್.