Psychic Review - ಮಲೆನಾಡ ಸೊಬಗಲ್ಲಿ ಸರಣಿ ಕೊಲೆಗಳ ಸಸ್ಪೆನ್ಸ್​

ಸೈಕಿಕ್​
ಸೈಕಿಕ್​
Published on
Psychic Movie Review -
ಅದು ಸಕಲೇಶಪುರದ ಹಾನುಬಾಳು. ಅಲ್ಲಿ ಸಾಲಾಗಿ ಮೂರು ಕೊಲೆಗಳು ನಡೆಯುತ್ತವೆ. ಪ್ರತಿಯೊಬ್ಬರದ್ದೂ ನಾಲಗೆ ಕತ್ತರಿಸಿ, ಎದೆಗೆ ಚುಚ್ಚಿ ಕೊಲ್ಲಲಾಗಿರುತ್ತದೆ. ಪೊಲೀಸ್​ ಅಧಿಕಾರಿ ವೆಂಕಟೇಶ್​ಗೆ ಕೊಲೆಗಾರನ ಪತ್ತೆ ಸಾಧ್ಯವಾಗದ ಕಾರಣ, ಇನ್​ಸ್ಪೆಕ್ಟರ್​ ಚಂದ್ರಿಕಾ (ಹಂಸ) ತನಿಖಾಧಿಕಾರಿಯಾಗಿ ಬರುತ್ತಾರೆ. ಅದೇ ಸಮಯದಲ್ಲಿ ಗೆಳೆಯರ ತಂಡವೊಂದು ಅಲ್ಲಿನ ಹೋಮ್​ಸ್ಟೇಗೆ ಬರುತ್ತಾರೆ. ದಾರಿಯಲ್ಲಿ ಮಂದಾರ್ತಿ ಎಸ್ಟೇಟ್​ನಲ್ಲಿರುವ ಪಾಳು ಬಿದ್ದ ಮನೆಯನ್ನು ನೋಡಿ ವಿಕಾಸ್​ ಹೆದರುತ್ತಾನೆ. ಅವರಿಗೆ ಹೋಮ್​ಸ್ಟೇ ಬಳಿ ಗಾಯಗೊಂಡ ವ್ಯಕ್ತಿ ಸಿಗುತ್ತಾನೆ. ಆತನನ್ನು ರಕ್ಷಿಸಿ, ಚಿಕಿತ್ಸೆ ಕೊಡುತ್ತಾರೆ. ಅದೇ ಸಮಯದಲ್ಲಿ ಯುವತಿಯೊಬ್ಬಳು ತನ್ನ ಗಂಡ ಕಾಣಿಸುತ್ತಿಲ್ಲ ಎಂದು ಹುಡುಕುತ್ತಾ ಠಾಣೆಗೆ ಬರುತ್ತಾಳೆ. ಈ ಎಲ್ಲ ಬೆಳವಣಿಗೆಗಳ ನಡುವೆ ನಾಲ್ಕನೇ ಹೆಣವೂ ಬೀಳುತ್ತದೆ. ಪೊಲೀಸರು ಮತ್ತಷ್ಟು ಚುರುಕಾಗುತ್ತಾರೆ. ಆಗ 30 ವರ್ಷಗಳ ಹಿಂದೆ ಕಿವಿ ಕತ್ತರಿಸಿ ಜನರನ್ನು ಕೊಲ್ಲುತ್ತಿದ್ದ ಪ್ರಕರಣ ತೆರೆದುಕೊಳ್ಳುತ್ತದೆ. ಹಾಗಾದರೆ ಈಗ ನಾಲಗೆ ಕತ್ತರಿಸಿ ಕೊಲ್ಲುವ ಹಂತಕ ಯಾರು? ಆಗ ಕಿವಿ ಕತ್ತರಿಸಿ ಕೊಲ್ಲುತ್ತಿದ್ದ ಕೊಲೆಗಾರ ಯಾರು? ಕಣ್ಮರೆಯಾದ ಆ ಯುವತಿಯ ಗಂಡ ಯಾರು? ಮಂದಾರ್ತಿ ಮನೆಯ ಸೀಕ್ರೆಟ್​ ಏನು? ಎಲ್ಲ ಪ್ರಶ್ನೆಗಳಿಗೂ ಕಥೆ ಸಾಗಿದಂತೆ ಉತ್ತರ ದೊರೆಯುತ್ತದೆ.
ನಿರ್ದೇಶಕ ಪುಷ್ಕರ ಗಿರಿಗೌಡ ಅವರ "ಸೈಕಿಕ್​' ಪರಿಕಲ್ಪನೆ ಚೆನ್ನಾಗಿದೆ. ಅದಕ್ಕೆ ಗಟ್ಟಿ ಚಿತ್ರಕಥೆ ಜತೆಗೆ ಮತ್ತಷ್ಟು ಥ್ರಿಲ್ಲಿಂಗ್​ ಅಂಶಗಳನ್ನು ಸೇರಿಸಿ, ಇನ್ನಷ್ಟು ಪರಿಣಾಮಕಾರಿಯಾಗಿ ಸಿನಿಮಾ ರೂಪ ನೀಡುವ ಅವಕಾಶವಿತ್ತು. ಆದರೂ, ಅರವಿಂದ್​ ರಾಜವಿಕ್ರಮನ್​ ಹಿನ್ನೆಲೆ ಸಂಗೀತ ಚಿತ್ರವನ್ನು ನೋಡಿಸಿಕೊಂಡು ಹೋಗುತ್ತದೆ. ಸರ್ದಾರ್​ ಸತ್ಯ, ರೇಷ್ಮಾ, ಹಂಸ, ಅರವಿಂದ್​ ನಟನೆ ಗಮನ ಸೆಳೆಯುತ್ತದೆ. ಸೈಕೋ ಕಿಲ್ಲರ್​ ಹಾಗೂ ಕೆಮ್​ ಮಿಸ್ಟರಿ ಥ್ರಿಲ್ಲರ್​ ಕಥೆಗಳನ್ನು ಇಷ್ಟಪಡುವವರು "ಸೈಕಿಕ್​' ನೋಡಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net