ಮೈಸೂರಿನ ಮಹಾರಾ ಕಾಲೇಜಿನ ಆಂಗ್ಲ ಪ್ರಾಧ್ಯಾಪಕ ಸುಬ್ಬರಾವ್ (ಅಜೇಯ್). ಆಸ್ಪತ್ರೆಯಲ್ಲಿ ದಾಖಲಾಗಿರುವ ಅಕ್ಕನನ್ನು (ವೀಣಾ) ನೋಡಲು ಹೋಗಿದ್ದಾಗ, ಸುಂದರಿ ಸರಳ (ಮಿಶಾ) ಆತನ ಕಣ್ಣಿಗೆ ಬೀಳುತ್ತಾಳೆ. ಆಕೆಯೋ ತುಂಟಿ, ತಿಂಡಿಪೋತಿ. ಕಣ್ಣಿಗೆ ಕಂಡಿದ್ದೆಲ್ಲ ಬೇಕು ಎನ್ನುವ ಮಗು ಮನಸ್ಸಿನ ಹುಡುಗಿ. ಸುಬ್ಬಾರಾವ್, ಸರಳಳನ್ನು ಒಪ್ಪಿಸಿ ಮದುವೆಯಾಗುತ್ತಾನೆ. ಮುಂದೆ ಇಬ್ಬರದು ದಾಂಪತ್ಯದ ಅನುರಾಗ. ಪ್ರಣಯದಿಂದ ಜೋಡಿಯ ದಾಂಪತ್ಯ ಸಾಗುತ್ತಿರುವಾಗ ಸರಳ ತಾಯಿಯಾಗುವ ಖುಷಿ ಸುದ್ದಿ ನೀಡುತ್ತಾಳೆ. ಸುಬ್ಬರಾವ್‌ಗೆ ತಂದೆಯಾಗುವ ಖುಷಿ ಒಂದೆಡೆಯಾದರೆ, ಇನ್ನೊಂದು ಕಡೆ ದುಗುಡ. ಪತ್ನಿ ಸರಳ ತಾಯ್ತನವನ್ನು ಹೇಗೆ ಎದುರಿಸುತ್ತಾಳೆ ಎಂಬ ಅಂಜಿಕೆ. ಅದೇ ವೇಳೆ ಭಾರತದಲ್ಲಿ ಯುದ್ಧದ ಭೀತಿ. ಜತೆಗೆ ಸರಳ ಮತ್ತು ಸುಬ್ಬರಾವ್ ಇಬ್ಬರ ಅಂತರಂಗದಲ್ಲಿ ಇನ್ನೊಂದು ಯುದ್ಧ ನಡೆಯುತ್ತಿರುತ್ತದೆ. ಈ ಎರಡು ಸಂಗತಿಗಳ ಮಧ್ಯೆ ‘ಸರಳ ಸುಬ್ಬರಾವ್’ ಹ್ಯಾಪಿ ಎಂಡಿಂಗ್ ಕಾಣುತ್ತಾ? ಸಿನಿಮಾ ನೋಡಿ. ಲೇಖಕಿ ತ್ರಿವೇಣಿ ಅವರ ಕಾದಂಬರಿಯಾಧಾರಿತ ಚಿತ್ರವಿದು. ಇಡೀ ಸಿನಿಮಾ ಕಾದಂಬರಿ ಓದಿದ ಅನುಭವ ನೀಡುವಂತೆಯೇ ನಿರ್ದೇಶಕರು ದೃಶ್ಯರೂಪ ನೀಡಿದ್ದಾರೆ. ಮೊದಲರ್ಧ ಸರಳ-ಸುಬ್ಬರಾವ್ ಸರಸ, ಸಲ್ಲಾಪಕ್ಕೆ ಸೀಮಿತವಾಗಿದ್ದು ದ್ವಿತೀಯಾರ್ಧದಲ್ಲಿ ಕಥೆ ಭಾವನಾತ್ಮಕ ತಿರುವು ಪಡೆದುಕೊಳ್ಳುತ್ತದೆ. ಅಜೇಯ್ ರಾವ್ ಭಾವಪೂರ್ಣ ಅಭಿನಯದ ಮೂಲಕ ಚಿತ್ರವನ್ನು ಹೊತ್ತು ಸಾಗಿದ್ದಾರೆ. ಮಿಶಾ ಅಪ್ಪಟ ಕನ್ನಡತಿಯಂತೆ ಕಂಗೊಳಿಸಿದ್ದು, ಅವರ ಮುಗ್ಧ ನಟನೆ ಇಷ್ಟವಾಗುತ್ತದೆ. ಅಜನೀಶ್ ಲೋಕನಾಥ್ ನವಿರಾದ ಸಂಗೀತ, ರಂಜಿತ್ ರೆಟ್ರೋ ವಸಾಲಂಕಾರ ಇಡೀ ಸಿನಿಮಾವನ್ನು ರೆಟ್ರೋ ಕಾಲಕ್ಕೆ ಕರೆದುಕೊಂಡು ಹೋಗುತ್ತದೆ.