"ಮಹೀರಾ', "ಗಿಲ್ಕಿ', "ತಲೆದಂಡ', "ಟೋಬಿ', "ಸಪ್ತಸಾಗರದಾಚೆ ಎಲ್ಲೋ ಸೈಡ್ ಬಿ' ಸೇರಿ ಹಲವು ಚಿತ್ರಗಳಲ್ಲಿ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಸಹಜ ಅಭಿನಯದ ಮೂಲಕ ಗಮನ ಸೆಳೆದವರು ನಟಿ ಚೈತ್ರಾ ಜೆ. ಆಚಾರ್. ಕಳೆದ ವರ್ಷ ಸಿದ್ಧಾರ್ಥ್ ನಾಯಕನಾಗಿದ್ದ "3 ಬಿಎಚ್ಕೆ' ಮೂಲಕ ತಮಿಳಿಗೆ ಪದಾರ್ಪಣೆ ಮಾಡಿದ ಅವರು, ಸದ್ಯ ಕನ್ನಡ, ತಮಿಳು ಎರಡೂ ಭಾಷೆಗಳಲ್ಲಿ ನಟಿಸುತ್ತಿದ್ದಾರೆ. ಕಳೆದ ವಾರವಷ್ಟೇ ಅವರು ಶಶಿಕುಮಾರ್ಗೆ ಜೋಡಿಯಾಗಿದ್ದ ತಮಿಳಿನ "ಮೈಲಾರ್ಡ್' ಬಿಡುಗಡೆಯಾಗಿತ್ತು. ಇದೀಗ ರಿಶಿತ್ ಶೆಟ್ಟಿ ನಿರ್ದೇಶನದಲ್ಲಿ ರಿತ್ವಿಕ್ ಮಠದ್ ಜತೆ ನಟಿಸಿರುವ "ಮಾರ್ನಮಿ' ಶುಕ್ರವಾರ ರಿಲೀಸ್ ಆಗುತ್ತಿದೆ. ಹೀಗೆ ಎರಡು ವಾರಗಳಲ್ಲಿ, ಎರಡು ಬೇರೆ ಬೇರೆ ಭಾಷೆಗಳ ಚಿತ್ರಗಳು ರಿಲೀಸ್ ಆಗುತ್ತಿರುವ ಕಾರಣ, ಚೈತ್ರಾ ಪ್ರಚಾರದಲ್ಲಿ ಬಿಜಿಯಿದ್ದಾರೆ. "ರಿಶಿತ್ "ಮಾರ್ನಮಿ' ಕಥೆ ಹೇಳಲು ಕರೆ ಮಾಡಿದ್ದರು. ಕಥೆ ಇಷ್ಟವಾಯಿತಾದರೂ ಡೇಟ್ಸ್ ಹೊಂದಾಣಿಕೆ ಆಗದ ಕಾರಣ, ಇಲ್ಲ ಎಂದಿದ್ದೆ. ತುಂಬ ಒಳ್ಳೆ ಕಥೆ ಮಿಸ್ ಆಯಿತಲ್ಲ ಅಂತ ನನಗೂ ಅನ್ನಿಸುತ್ತಿತ್ತು. ಇದಾಗಿ ಒಂದೂವರೆ ತಿಂಗಳಾದರೂ ಅವರು ಹುಡುಕಾಟ ಮುಂದುವರಿಸಿದ್ದರು. "ಮಾರ್ನಮಿ' ತಂಡಕ್ಕೆ ಹೀರೋಯಿನ್ ಬೇಕು ಅಂತ ನಾನೂ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದೆ. ಒಮ್ಮೆ ಸಂಗೀತ ನಿರ್ದೇಶಕ ಚರಣ್ ರಾಜ್ ಸಿಕ್ಕಿ "ಮಾರ್ನಮಿ' ಕಂಟೆಂಟ್ ಮತ್ತು ಪಾತ್ರ ಚೆನ್ನಾಗಿತ್ತು, ನೀವು ಮಾಡಬೇಕಿತ್ತು ಅಂದರು. ಅದೇ ರೀತಿ ಮೂರ್ನಾಲ್ಕು ಜನ ಹೇಳಿದರು. ಅಂದು ಸಂಜೆಯೇ ರಿಶಿತ್ಗೆ ಮೆಸೇಜ್ ಮಾಡಿ ನಾಯಕಿ ಸಿಕ್ಕಿದರಾ ಅಂತ ಕೇಳಿದೆ. ಇಲ್ಲ ಅಂದರು. ತಕ್ಷಣ ಡೇಟ್ಸ್ ಅಡ್ಜಸ್ಟ್ ಮಾಡಿಕೊಳ್ಳುವುದಾದರೆ ನಟಿಸುತ್ತೇನೆ ಎಂದೆ. ಅವರು ಒಪ್ಪಿದ ಕಾರಣ ತಂಡ ಸೇರಿಕೊಂಡೆ' ಎಂದು ಮಾಹಿತಿ ನೀಡುತ್ತಾರೆ.