ಸಂಗೀತ ಬಾರ್‌ಗೆ ಜಗ್ಗೇಶ್ ಸಾಥ್ : ಟೀಸರ್ ರಿಲೀಸ್ ಮಾಡಿ, ಶುಭ ಹಾರೈಸಿದ ನಟ, ರಾಜ್ಯಸಭಾ ಸದಸ್ಯ

‘ಗುಮ್ಟಿ’ ಖ್ಯಾತಿಯ ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ, ಕೋಮಲ್, ಮೇಘನಾ ರಾಜ್, ಅನುಷಾ ರೈ ಮುಖ್ಯಭೂಮಿಕೆಯಲ್ಲಿರುವ ಸಿನಿಮಾ ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’. ಟೈಟಲ್ ವಿಚಿತ್ರವಾಗಿದ್ದರೂ, ಚಿತ್ರದ ಕಂಟೆಂಟ್ ಗಟ್ಟಿಯಾಗಿದೆ ಎನ್ನುವುದಕ್ಕೆ ಇತ್ತೀಚೆಗೆ ರಿಲೀಸ್ ಆದ ಟೀಸರ್ ಸಾಕ್ಷಿಯಾಗಿದೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿರುವ ಸಿನಿಮಾ ಸದ್ಯ ಬಿಡುಗಡೆಗೆ ಸಿದ್ಧವಾಗಿದೆ.
ಸಂಗೀತ ಬಾರ್ ಆ್ಯಂಡ್​ ರೆಸ್ಟೋರೆಂಟ್ ಚಿತ್ರತಂಡ
ಸಂಗೀತ ಬಾರ್ ಆ್ಯಂಡ್​ ರೆಸ್ಟೋರೆಂಟ್ ಚಿತ್ರತಂಡ
Published on: 

ಬೆಂಗಳೂರು: ‘ಗುಮ್ಟಿ’ ಖ್ಯಾತಿಯ ಸಂದೇಶ್ ಶೆಟ್ಟಿ ಆಜ್ರಿ ನಿರ್ದೇಶನದ, ಕೋಮಲ್, ಮೇಘನಾ ರಾಜ್, ಅನುಷಾ ರೈ ಮುಖ್ಯಭೂಮಿಕೆಯಲ್ಲಿರುವ ಸಿನಿಮಾ ‘ಸಂಗೀತ ಬಾರ್ ಆ್ಯಂಡ್ ರೆಸ್ಟೋರೆಂಟ್’. ಟೈಟಲ್ ವಿಚಿತ್ರವಾಗಿದ್ದರೂ, ಚಿತ್ರದ ಕಂಟೆಂಟ್ ಗಟ್ಟಿಯಾಗಿದೆ ಎನ್ನುವುದಕ್ಕೆ ಇತ್ತೀಚೆಗೆ ರಿಲೀಸ್ ಆದ ಟೀಸರ್ ಸಾಕ್ಷಿಯಾಗಿದೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿರುವ ಸಿನಿಮಾ ಸದ್ಯ ಬಿಡುಗಡೆಗೆ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಪ್ರಚಾರಕ್ಕೆ ಮುಂದಾಗಿದೆ. ಇತ್ತೀಚೆಗೆ ನಟ, ರಾಜ್ಯಸಭಾ ಸದಸ್ಯ ಜಗ್ಗೇಶ್ ಟೀಸರ್ ರಿಲೀಸ್ ಮಾಡಿ, ತಂಡಕ್ಕೆ ಶುಭ ಹಾರೈಸಿದರು. ಆಧುನಿಕ ಜತೆಗೆ ಪೌರಾಣಿಕ ಹಿನ್ನೆಲೆಯ ಕಥಾಹಂದರದ ಜತೆಗೆ ಧಾರ್ಮಿಕ ಸೂಕ್ಷ್ಮ ಅಂಶಗಳನ್ನು ಟೀಸರ್‌ನಲ್ಲಿ ಕಾಣಬಹುದಾಗಿದೆ. ಜಗ್ಗೇಶ್, ‘ಈ ಸಿನಿಮಾದ ಕೆಲ ಭಾಗಗಳನ್ನು ನಾನು ನೋಡಿದ್ದೇನೆ. ನಿರ್ದೇಶಕ ಸಂದೇಶ್ ಮತ್ತು ತಂಡ ಪರಿಶ್ರಮ ಹಾಕಿ ಚಿತ್ರ ಮಾಡಿರುವುದು ಪ್ರತಿ ್ರೇಮ್‌ನಲ್ಲಿಯೂ ಎದ್ದು ಕಾಣುತ್ತದೆ. ಒಂದು ಕಥಾವಸ್ತುವಿನ ಬಗ್ಗೆ ಚರ್ಚೆಗಳು ಆಗುವುದು ಒಳ್ಳೆಯದೇ’ ಎಂದು ಅಭಿಪ್ರಾಯಪಟ್ಟರು. ಇಲ್ಲಿ ಕೋಮಲ್, ಅನುಷಾ ರೈ ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕುಂದಾಪುರ, ಶಿವಮೊಗ್ಗ, ತೀರ್ಥಹಳ್ಳಿ ಸೇರಿ ಕರಾವಳಿ, ಮಲೆನಾಡು ಭಾಗದಲ್ಲಿ ಎರಡು ಹಂತಗಳಲ್ಲಿ 75 ದಿನಗಳ ಕಾಲ ಶೂಟಿಂಗ್ ನಡೆಸಲಾಗಿದೆ. ಇನ್ನು ಕುಂದಾಪುರದ ಅಂಪಾರಿನ ವಾಲೂರಿನಲ್ಲಿ ಎರಡು ಎಕರೆ ಜಾಗದಲ್ಲಿ ಏಳು ವೈವಿಧ್ಯಮಯ ಸೆಟ್‌ಗಳನ್ನು ಹಾಕಿ, ಶೂಟಿಂಗ್ ನಡೆಸಿರುವುದು ವಿಶೇಷ. ಕೋಮಲ್ ಜತೆಗೆ ಪ್ರಮೋದ್ ಶೆಟ್ಟಿ, ವಜ್ರಧೀರ್ ಜೈನ್, ಪ್ರಕಾಶ್ ತೂಮಿನಾಡು, ರಾಘು ರಾಮನಕೊಪ್ಪ, ಸಿರಿಜಾ, ಎಂ.ಕೆ.ಮಠ ಕಲಾಬಳಗದಲ್ಲಿದ್ದಾರೆ.

ಚಿತ್ರದ ಮೊದಲರ್ಧ ಬಾರ್‌ನಲ್ಲಿ ಶುರುವಾದರೆ, ದ್ವಿತೀಯಾರ್ಧ ದೇವರ ತಾಣದಲ್ಲಿ ಆರಂಭವಾಗಿ, ಅಲ್ಲೇ ಮುಗಿಯುತ್ತದೆ. ಹಾಗಾಗಿ ಚಿತ್ರದ ಮೊದಲರ್ಧಕ್ಕೆ ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಎಂಬ ಟೈಟಲ್ ಆಗಿದ್ದರೆ, ದ್ವಿತೀಯಾರ್ಧಕ್ಕೆ ‘ದೇವರ ತಾಣ’ ಅಂತಿದೆ. ಈ ಎರಡು ನಮ್ಮ ಸಿನಿಮಾದ ಟೈಟಲ್‌ಗಳು. ಸೆನ್ಸಾರ್ ನಿಯಮದಂತೆ ಸಿನಿಮಾಕ್ಕೆ ಒಂದೇ ಹೆಸರು ಇಡಬೇಕಾಗಿರುವುದರಿಂದ, ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಫೈನಲ್ ಮಾಡಿದ್ದೇವೆ.
ಸಂದೇಶ್ ಶೆಟ್ಟಿ ಅಜ್ರಿ, ನಿರ್ದೇಶಕ