ರಾಣಿ ಭವ್ಯಾ: ‘ಕೊರಗಜ್ಜ’ ಚಿತ್ರದ ಪಂಜಂದಾಯಿ ಪಾತ್ರದಲ್ಲಿ ಸ್ಯಾಂಡಲ್‌ವುಡ್ ನಟಿ

ನಟಿ ಭವ್ಯಾ
ನಟಿ ಭವ್ಯಾ
Published on

ಪ್ರಮುಖ ಮುಖ್ಯಾಂಶಗಳು

  • 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಹಿರಿಯ ನಟಿ
  • ಕೊರಗಜ್ಜ ಚಿತ್ರದಲ್ಲಿ ರಾಣಿಯಾಗಿ ಕಾಣಿಸಿಕೊಂಡ ಭವ್ಯಾ
  • ಕರಾವಳಿ ದೈವಗಳ ಮೇಲೆ ನಟಿಗಿದೆ ಅಪಾರ ಭಕ್ತಿ
ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ 80, 90ರ ದಶಕಗಳಲ್ಲಿ ಧ್ರುವತಾರೆಯಂತೆ ಮಿಂಚಿದವರು ನಟಿ ಭವ್ಯಾ. 1983ರಲ್ಲಿ ತೆರೆಕಂಡ ‘ಪ್ರೇಮಪರ್ವ’ ಮೂಲಕ ಬಣ್ಣದ ಲೋಕಕ್ಕೆ ಬಂದ ಅವರು ‘ಬಡ್ಡಿ ಬಂಗಾರಮ್ಮ’, ‘ನೀ ಬರೆದ ಕಾದಂಬರಿ’, ‘ಕೃಷ್ಣ ನೀ ಬೇಗನೇ ಬಾರೋ’, ‘ಸಾಂಗ್ಲಿಯಾನ’ ಸರಣಿ, ‘ಮತ್ತೆ ಹಾಡಿತು ಕೋಗಿಲೆ’, ‘ಸೋಲಿಲ್ಲದ ಸರದಾರ’ ಸೇರಿ 43 ವರ್ಷಗಳ ಕರಿಯರ್‌ನಲ್ಲಿ 200ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇಂದಿಗೂ ಸ್ಯಾಂಡಲ್‌ವುಡ್‌ನಲ್ಲಿ ಸಕ್ರಿಯರಾಗಿರುವ ಭವ್ಯಾ, ಗೀತೆ ರಚನೆಕಾರ ಸುಧೀರ್ ಅತ್ತಾವರ ನಿರ್ದೇಶನದ ‘ಕೊರಗಜ್ಜ’ ಚಿತ್ರದಲ್ಲಿ ರಾಣಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಬಹುತೇಕ ಚಿತ್ರೀಕರಣ ಪೂರ್ಣಗೊಳಿಸಿರುವ ತಂಡ ಸದ್ಯ ರಿಲೀಸ್‌ಗ ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಅವರು ವಿಜಯವಾಣಿ ಜತೆ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು. ‘‘ಎಂಟು ನೂರು ವರ್ಷಗಳ ಹಿಂದೆ ಇದ್ದ ಪೌರಾಣಿಕ ಪುರುಷ ‘ಕೊರಗಜ್ಜ’ ಕುರಿತ ಸಿನಿಮಾ ಇದು. ಅಜ್ಜ ಹೇಗೆ ದೈವತ್ವಕ್ಕೇರಿದರು ಎಂಬುದನ್ನು ಚಿತ್ರದಲ್ಲಿ ಹೇಳಲಾಗುತ್ತಿದೆ. ಬಾಲಿವುಡ್ ನಟ ಕಬೀರ್ ಬೇಡಿ ರಾಜನ ಪಾತ್ರದಲ್ಲಿ ನಟಿಸಿದ್ದಾರೆ. ಅಂತೆಯೇ ನಾನು ಪಂಜಂದಾಯಿ ರಾಣಿ ಪಾತ್ರದಲ್ಲಿ ಅಭಿನಯಿಸಿದ್ದೇನೆ. ರಾಜ ಮತ್ತು ರಾಣಿ ತಮ್ಮ ರಾಜ್ಯವನ್ನು ಕಳೆದುಕೊಂಡು ಪರಿತಪಿಸಿಕೊಳ್ಳುತ್ತಿರುವಾಗ ಅಜ್ಜನನ್ನು ಬೇಡಿಕೊಂಡು, ಆಶೀರ್ವದಿಸಿದಾಗ ನಾನು ಅಜ್ಜನ ಭಕ್ತೆಯಾಗುತ್ತೇನೆ. 800 ವರ್ಷಗಳ ಹಿಂದಿನ ಕಥೆಯಲ್ಲಿ ನಟಿಸಿರುವುದೇ ತುಂಬಾ ವಿಶೇಷ. ಹಿಂದಿನ ಕಮರ್ಷಿಯಲ್ ಸಿನಿಮಾಗಳ ಪಾತ್ರಕ್ಕೆ ಹೋಲಿಸಿದರೆ, ಇದು ವಿಭಿನ್ನ’ ಎನ್ನುತ್ತಾರೆ ನಟಿ ಭವ್ಯಾ.

ಕರಾವಳಿ ದೈವಗಳ ಭಕ್ತೆಯಾಗಿದ್ದೇನೆ

‘ಕೊರಗಜ್ಜ’ ಚಿತ್ರದ ನಟನೆಯಿಂದಾಗಿಯೇ ಭವ್ಯಾಗೆ ಕರಾವಳಿ ದೈವಗಳ ಕುರಿತು ತುಂಬ ವಿಷಯಗಳು ಅರಿವಿಗೆ ಬಂದಿವೆಯಂತೆ. ‘ನನಗೆ ಈ ಚಿತ್ರದ ಮೂಲಕವೇ ತುಳುನಾಡಿನ ದೈವಗಳ ಬಗ್ಗೆ ಪರಿಚಯ ಸಿಕ್ಕಿದ್ದು. ಬೆಂಗಳೂರಿನವರಾದ ಕಾರಣ, ನಮಗೆ ಅಷ್ಟು ಮಾಹಿತಿ ಇರಲಿಲ್ಲ. ಇದೀಗ ಪಂಜುರ್ಲಿ, ಕಲ್ಲುರ್ಟಿ ಸೇರಿ ಹಲವು ಗುಳಿಗಗಳ ಮಹಿಮೆ ತಿಳಿದುಕೊಂಡಿದ್ದೇನೆ. ಹಾಗಾಗಿ, ನಾನೀಗ ಸಂಪೂರ್ಣ ದೈವಗಳ ಭಕ್ತೆಯಾಗಿದ್ದೇನೆ. ಕರಾವಳಿಯಲ್ಲಿ ‘ಕೊರಗಜ್ಜ’ನ ಮಹಿಮೆ ಬಗ್ಗೆ ಸಾಕಷ್ಟು ಜನ ಕೊಂಡಾಡುತ್ತಾರೆ. ಅಂತಹ ಕಾರಣಿಕ ಪುರುಷನ ಚಿತ್ರದಲ್ಲಿ ನಟಿಸಿರುವುದು ನನ್ನ ಪುಣ್ಯವೇ ಸರಿ’ ಎಂದು ಸಂತಸ ಹಂಚಿಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net