ಹೊಂಬಾಳೆ ಅಷ್ಟೇ ಅಲ್ಲ, ರುಕ್ಮಿಣಿ ವಸಂತ್ ಅವರನ್ನೂ ಅನ್‌ಫಾಲೋ ಮಾಡಿದ ರಿಷಬ್! ಅಸಲಿಗೆ ಕಾರಣವೇನು? | RishabShetty

RishabShetty
RishabShetty
Published on
ಬೆಂಗಳೂರು: ಕನ್ನಡ ಚಿತ್ರರಂಗದ ಹೆಮ್ಮೆಯ ಸಿನಿಮಾ 'ಕಾಂತಾರ' ಮೂಲಕ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿದ್ದ ನಟ, ನಿರ್ದೇಶಕ ರಿಷಬ್ ಶೆಟ್ಟಿ(RishabShetty) ಹಾಗೂ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯ ನಡುವೆ ಎಲ್ಲವೂ ಸರಿಯಿಲ್ಲವೇ? ಎಂಬ ಅನುಮಾನಗಳು ಈಗ ಗಟ್ಟಿಯಾಗುತ್ತಿವೆ. ರಿಷಬ್ ಶೆಟ್ಟಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹೊಂಬಾಳೆ ಫಿಲ್ಮ್ಸ್ ಸೇರಿದಂತೆ ತಮ್ಮ ಆಪ್ತ ಸಹೋದ್ಯೋಗಿಗಳನ್ನು ಅನ್‌ಫಾಲೋ ಮಾಡಿರುವುದು ಈಗ ಗಾಂಧಿನಗರದ ಹೊಸ ಚರ್ಚಾ ವಿಷಯವಾಗಿದೆ.

ಅನ್‌ಫಾಲೋ ಸಂಚಲನ!

ಮೂಲಗಳ ಪ್ರಕಾರ, ಮಾರ್ಚ್ 19ರ ಸುಮಾರಿಗೆ ರಿಷಬ್ ಶೆಟ್ಟಿ ಅವರು ಹೊಂಬಾಳೆ ಫಿಲ್ಮ್ಸ್ ಮತ್ತು ಅಧಿಕೃತ 'ಕಾಂತಾರ' ಪೇಜ್‌ಗಳನ್ನು ಅನ್‌ಫಾಲೋ ಮಾಡಿದ್ದಾರೆ. ಕೇವಲ ನಿರ್ಮಾಣ ಸಂಸ್ಥೆ ಮಾತ್ರವಲ್ಲದೆ, 'ಕಾಂತಾರ' ಚಿತ್ರದ ಪ್ರಮುಖ ಕಲಾವಿದರಾದ ರಾಜ್ ಬಿ. ಶೆಟ್ಟಿ ಹಾಗೂ ನಟಿ ರುಕ್ಮಿಣಿ ವಸಂತ್ ಅವರನ್ನೂ ಸಹ ರಿಷಬ್ ಅನ್‌ಫಾಲೋ ಮಾಡಿರುವುದು ಕುತೂಹಲ ಮೂಡಿಸಿದೆ.

'ಅಧ್ಯಾಯ 2' ರಹಸ್ಯವೇನು?

ಯುಗಾದಿ ಹಬ್ಬದ ಮುನ್ನಾದಿನ ಅಂದರೆ ಮಾರ್ಚ್ 21 ರಂದು ರಿಷಬ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ "ಅಧ್ಯಾಯ 2 ಇಲ್ಲಿಂದ ಶುರು" (Chapter Two Begins from Here) ಎಂಬ ನಿಗೂಢ ಪೋಸ್ಟ್ ಹಂಚಿಕೊಂಡಿದ್ದರು. ಇದು ಅವರ ವೃತ್ತಿಜೀವನದ ಮುಂದಿನ ದೊಡ್ಡ ಬದಲಾವಣೆಯ ಮುನ್ಸೂಚನೆ ಇರಬಹುದು ಎಂದು ಅಭಿಮಾನಿಗಳು ಭಾವಿಸಿದ್ದಾರೆ.
ಮೈತ್ರಿ ಸಂಸ್ಥೆಯ ಜೊತೆ ಹೊಸ ಪ್ರಾಜೆಕ್ಟ್?
ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು 'ಕಾಂತಾರ'ದ ಮುಂದುವರಿದ ಭಾಗ ಅಥವಾ ಅದಕ್ಕೆ ಸಂಬಂಧಿಸಿದ ಮತ್ತೊಂದು ಥ್ರಿಲ್ಲರ್ ಸಿನಿಮಾವನ್ನು ಆಫರ್ ಮಾಡಿತ್ತು. ಆದರೆ ರಿಷಬ್ ಅದನ್ನು ತಿರಸ್ಕರಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದರ ಬದಲಾಗಿ ಅವರು 'ಮೈತ್ರಿ ಮೂವಿ ಮೇಕರ್ಸ್' ಸಂಸ್ಥೆಯ ಜೊತೆಗೂಡಿ 'ಹನುಮಾನ್' ಎಂಬ ಶೀರ್ಷಿಕೆಯ ಹೊಸ ಚಿತ್ರಕ್ಕೆ ಕೈಹಾಕಿದ್ದಾರೆ ಎನ್ನಲಾಗುತ್ತಿದೆ.

ಫ್ಯಾನ್ಸ್ ನಡುವೆ ಭಾರಿ ಚರ್ಚೆ

ಸಾಮಾಜಿಕ ಜಾಲತಾಣಗಳಲ್ಲಿ ರಿಷಬ್ ಅವರ ಈ ನಡೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲವರು ಇದು ಕೇವಲ ಪಿಆರ್ (PR) ತಂತ್ರ ಅಥವಾ ತಂಡದಲ್ಲಿನ ಬದಲಾವಣೆ ಇರಬಹುದು ಎನ್ನುತ್ತಿದ್ದರೆ, ಇನ್ನು ಕೆಲವರು ಹಣಕಾಸು ಮತ್ತು ಸೃಜನಶೀಲ ಭಿನ್ನಾಭಿಪ್ರಾಯಗಳೇ ಇದಕ್ಕೆ ಕಾರಣವಿರಬಹುದು ಎಂದು ಊಹಿಸುತ್ತಿದ್ದಾರೆ. ವಿಶೇಷವೆಂದರೆ, ರಿಷಬ್ ಶೆಟ್ಟಿ ಅವರು ಹೊಂಬಾಳೆ ಮಾಲೀಕ ವಿಜಯ್ ಕಿರಗಂದೂರು ಅವರನ್ನು ಇನ್ನು ಫಾಲೋ ಮಾಡುತ್ತಿರುವುದು ಸಂಬಂಧ ಸಂಪೂರ್ಣವಾಗಿ ಮುರಿದು ಬಿದ್ದಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದೆ.
ಈವರೆಗೂ ಈ ಬಗ್ಗೆ ರಿಷಬ್ ಶೆಟ್ಟಿ ಅಥವಾ ಹೊಂಬಾಳೆ ಫಿಲ್ಮ್ಸ್ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net