ಬೆಂಗಳೂರು : ‘ಕಾಂತಾರ’ ಸರಣಿಯ ದೊಡ್ಡ ಯಶಸ್ಸಿನ ಬಳಿಕ ನಟ, ನಿರ್ದೇಶಕ ರಿಷಬ್ ಶೆಟ್ಟಿ ಐತಿಹಾಸಿಕ, ಪೌರಾಣಿಕ ಸಿನಿಮಾಗಳಿಗೆ ಸೀಮಿತರಾದರಾ ಅಂತ ಅನಿಸದೇ ಇರದು. ಸದ್ಯ ಅವರು ತೆಲುಗಿನಲ್ಲಿ ಪ್ರದೀಪ್ ವರ್ಮಾ ನಿರ್ದೇಶನದ ‘ಜೈ ಹನುಮಾನ್’ ಸಿನಿಮಾ ಒಪ್ಪಿಕೊಂಡಿದ್ದು, ಇತ್ತೀಚೆಗಷ್ಟೇ ಹಂಪಿ ಸಮೀಪದ ಅಂಜನಾದ್ರಿ ಬೆಟ್ಟದಲ್ಲಿ ಮುಹೂರ್ತ ನೆರವೇರಿಸಲಾಗಿದೆ. ಏತ್ಮನ್ಮಧ್ಯೆ, ‘ಕಾಂತಾರ ಅಧ್ಯಾಯ 1’ ಶೂಟಿಂಗ್‌ನಲ್ಲಿರುವಾಗಲೇ ರಿಷಬ್, ಬಾಲಿವುಡ್‌ನ ನಿರ್ದೇಶಕ ಸಂದೀಪ್ ಸಿಂಗ್ ಸಾರಥ್ಯದಲ್ಲಿ ಮೂಡಿಬರಲಿರುವ ಐತಿಹಾಸಿಕ ‘ಛತ್ರಪತಿ ಶಿವಾಜಿ: ದ ಪ್ರೈಡ್ ಆಫ್ ಭಾರತ್’ ಘೋಷಿಸಿದ್ದರು. ಈ ಚಿತ್ರ ಇನ್ನಷ್ಟೇ ಸೆಟ್ಟೇರಬೇಕಿದೆ. ಈ ಎರಡು ಸಿನಿಮಾಗಳ ಜತೆಗೆ ರಿಷಬ್, ನಿರ್ದೇಶಕ ಅಶ್ವಿನ್ ಗಂಗರಾಜು ಜತೆ ಮತ್ತೊಂದು ಸಿನಿಮಾ ಘೋಷಿಸಿ, ಅಚ್ಚರಿ ಮೂಡಿಸಿದ್ದರು. ಇದು ಕೂಡ ಸ್ವಾತಂತ್ರ್ಯಪೂರ್ವ ಕಥೆ ಎಂಬುದು ವಿಶೇಷ. ಹಾಗಾದರೆ ರಿಷಬ್, ಐತಿಹಾಸಿಕ, ಪೌರಾಣಿಕ ಸಿನಿಮಾಗಳಿಗೆ ಸೀಮಿತಾರಾದರಾ? ಎನ್ನುತ್ತಿರುವಾಗಲೇ ಇತ್ತೀಚೆಗಷ್ಟೆ ಹೊಸ ಸಿನಿಮಾ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ಈ ಮೂರು ಸಿನಿಮಾಗಳ ನಡುವೆ ರಿಷಬ್ ತಾವೇ ನಿರ್ದೇಶಿಸಲಿರುವ ಹೊಸ ಚಿತ್ರದ ಕೆಲಸದಲ್ಲಿ ತೊಡಗಿದ್ದಾರಂತೆ. ಅದು ಕೂಡ ಪೌರಾಣಿಕ ಹಿನ್ನೆಲೆ ಕಥೆ ಎಂದು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ. ಇತ್ತೀಚೆಗೆ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, ‘ನಾಲ್ಕು ವರ್ಷಗಳ ಕಾಲ ‘ಕಾಂತಾರ’ ಜಗತ್ತಿನಲ್ಲಿ ಬಿಜಿಯಾಗಿದ್ದೆ. ಸದ್ಯ ನಾನು ನಿರ್ದೇಶನಕ್ಕೆ ಅಲ್ಪ ವಿರಾಮ ನೀಡಿ, ಕೆಲ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ. ‘ಜೈ ಹನುಮಾನ್’ ಚಿತ್ರದ ಶೂಟಿಂಗ್ ಆರಂಭಿಸಿದ್ದೇನೆ. ಮುಂದಿನ ವರ್ಷ ಆ ಸಿನಿಮಾ ರಿಲೀಸ್ ಆಗಲಿದೆ. ಇನ್ನು ನನ್ನ ನಿರ್ದೇಶನದ ಬಗ್ಗೆ ಹೇಳುವುದಾದರೆ, ನಾನು ಈವರೆಗೂ ಎಲ್ಲಿಯೂ ರಿವೀಲ್ ಮಾಡಿಲ್ಲ. ಸದ್ಯ ನಾನು ನಿರ್ದೇಶಿಸಲಿರುವ ಹೊಸ ಸಿನಿಮಾ ಕೆಲಸಗಳು ನಡೆಯುತ್ತಿವೆ. ನಾನು ಈ ಬಾರಿ ಇನ್ನೊಂದು ಪೌರಾಣಿಕ ಕಥೆಯನ್ನು ನಿರ್ದೇಶಿಸಲಿದ್ದೇನೆ’ ಎಂದು ರಿಷಬ್ ಶೆಟ್ಟಿ ಹೇಳಿಕೊಂಡಿದ್ದಾರೆ. ಹಾಗಾದರೆ, ರಿಷಬ್ ಮುಂದಿನ ನಿರ್ದೇಶಿಸಲಿರುವ ಪೌರಾಣಿಕ ಕಥೆ ಯಾವುದು ಎನ್ನುವುದೇ ಸದ್ಯದ ಗುಟ್ಟು.