‘ಜೈ ಹನುಮಾನ್’ಗೆ ಮುಹೂರ್ತ: ಆಂಜನೇಯನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದಲ್ಲಿ ರಿಷಬ್ ಶೆಟ್ಟಿ ಚಿತ್ರಕ್ಕೆ ಚಾಲನೆ

ಜೈ ಹನುಮಾನ್ ಚಿತ್ರಕ್ಕೆ ಮುಹೂರ್ತ
ಜೈ ಹನುಮಾನ್ ಚಿತ್ರಕ್ಕೆ ಮುಹೂರ್ತ
Published on

ಪ್ರಮುಖ ಮುಖ್ಯಾಂಶಗಳು

  • ಅಂಜನಾದ್ರಿ ಬೆಟ್ಟದಲ್ಲಿ ಜೈ ಹನುಮಾನ್ ಚಿತ್ರಕ್ಕೆ ಚಾಲನೆ
  • ರಿಷಬ್​ ಶೆಟ್ಟಿ ನಟನೆ, ಪ್ರಶಾಂತ್ ವರ್ಮಾ ನಿರ್ದೇಶನದ ಸಿನಿಮಾ
  • ಶೀಘ್ರವೇ ಶೂಟಿಂಗ್ ಆರಂಭ
ಗಂಗಾವತಿ : ‘ಕಾಂತಾರ’ ಸರಣಿ ಮೂಲಕ ಇಡೀ ಭಾರತೀಯ ಚಿತ್ರರಂಗವನ್ನೇ ತನ್ನತ್ತ ಸೆಳೆದವರು ನಟ, ನಿರ್ದೇಶಕ ರಿಷಬ್ ಶೆಟ್ಟಿ. ಆ ಬಳಿಕ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಹೊರಹೊಮ್ಮಿದ್ದು, ದೇಶಾದ್ಯಂತ ಅಭಿಮಾನಿ ಬಳಗವನ್ನು ಗಳಿಸಿದ್ದಾರೆ. ‘ಕಾಂತಾರ ಅಧ್ಯಾಯ 1’ ಬಳಿಕ ರಿಷಬ್ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಮೂರು ಉತ್ತರಗಳು ದೊರೆತಿದ್ದವು. ಪ್ರಶಾಂತ್ ವರ್ಮಾ ನಿರ್ದೇಶನದಲ್ಲಿ ‘ಜೈ ಹನುಮಾನ್’ ಮತ್ತು ನಿರ್ದೇಶಕ ಸಂದೀಪ್ ಸಿಂಗ್ ಜತೆ ‘ಛತ್ರಪತಿ ಶಿವಾಜಿ ಮಹಾರಾಜ್: ದ ಫ್ರೈಡ್ ಆಫ್​ ಭಾರತ್’ ಹಾಗೂ ಅಶ್ವಿನ್ ಗಂಗರಾಜು ಜತೆ ಇನ್ನೊಂದು ಸಿನಿಮಾ ಫೋಷಿಸಿದ್ದರು. ಅವುಗಳಲ್ಲಿ ಮೊದಲು ಯಾವುದು ಎಂಬುದಕ್ಕೆ ಇದೀಗ ಉತ್ತರ ದೊರೆತಿದೆ. ಭಾನುವಾರ ಹನುಮಂತನ ಜನ್ಮಸ್ಥಳ ಅಂಜನಾದ್ರಿ ಬೆಟ್ಟದಲ್ಲಿ ‘ಜೈ ಹನುಮಾನ್’ ಚಿತ್ರದ ಮುಹೂರ್ತ ನೆರವೇರಿಸಲಾಗಿದೆ. ಟಿ-ಸಿರೀಸ್ ಮುಖ್ಯಸ್ಥ ಭೂಷಣ್ ಕುಮಾರ್ ಕ್ಲ್ಯಾಪ್ ಮಾಡಿದರೆ, ವಿತರಕ ಅನಿಲ್ ತದಾನಿ ಕ್ಯಾಮರಾಗೆ ಚಾಲನೆ ನೀಡಿದರು. ‘ಜೈ ಹನುಮಾನ್’ ಚಿತ್ರಕ್ಕೆ ‘ಹನುಮ್ಯಾನ್’ ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಪ್ರಶಾಂತ್ ವರ್ಮಾ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಪ್ರಶಾಂತ್ ವರ್ಮಾ ಪೌರಾಣಿಕ ಸಿನಿಮಾಗಳ ಯೂನಿವರ್ಸ್ ಸೃಷ್ಟಿಸುತ್ತಿದ್ದು ‘ಜೈ ಹನುಮಾನ್’, ‘ಹನು-ಮ್ಯಾನ್’ ಚಿತ್ರದ ಸೀಕ್ವೆಲ್ ಆಗಿರಲಿದೆ. ಶೀಘ್ರದಲ್ಲಿಯೇ ಶೂಟಿಂಗ್ ಆರಂಭವಾಗಲಿದೆ. ಮುಹೂರ್ತ ಸಮಾರಂಭದಲ್ಲಿ ರಿಷಬ್ ಶೆಟ್ಟಿ, ಪತ್ನಿ ಪ್ರಗತಿ ರಿಷಬ್, ತೇಜಾ ಸಜ್ಜಾ, ನಿರ್ಮಾಪಕರಾದ ನವೀನ್ ಯೆರ್ನೇನಿ, ವೈ. ರವಿಶಂಕರ್ ಪಾಲ್ಗೊಂಡಿದ್ದರು. ‘ಆಸ್ಕರ್ ವಿಜೇತ’ ಎಂ.ಎಂ.ಕೀರವಾಣಿ ಸಂಗೀತ, ಎಸ್.ತಿರುನಾವುಕ್ಕರಸು ಛಾಯಾಗ್ರಹಣ ಚಿತ್ರಕ್ಕಿರಲಿದೆ.
ಹನುಮನ ಸೇವೆಗೆ ಅವಕಾಶ
ಜೈ ಹನುಮಾನ್’ ಮುಹೂರ್ತದ ಬಳಿಕ ನಟ ರಿಷಬ್ ಶೆಟ್ಟಿ ಚಿತ್ರದ ಬಗ್ಗೆ, ‘‘ಕಾಂತಾರ’ದ ನಂತರ ಅಂಜನಾದ್ರಿ ಬೆಟ್ಟಕ್ಕೆ ಬಂದು ದೇವರ ಆಶೀರ್ವಾದ ತೆಗೆದುಕೊಂಡ ಬಳಿಕವೇ ‘ಜೈ ಹನುಮಾನ್’ ಕೆಲಸಗಳನ್ನು ಆರಂಭಿಸಿದ್ದೆ. ಆಂಜನೇಯನ ಜನ್ಮ ಸ್ಥಳದಲ್ಲಿಯೇ ಚಿತ್ರದ ಮುಹೂರ್ತ ನೆರವೇರಿಸೋಣ ಎಂದು ತಂಡಕ್ಕೆ ಹೇಳಿದ್ದೆ, ಅದರಂತೆ ಮುಹೂರ್ತ ನೆರವೇರಿಸಿದ್ದೇವೆ. ಇದು ರಾಮ ಮತ್ತು ಹನುಮನ ಆರಾಧಕರು ಭಕ್ತಿಯಿಂದ ನೋಡುವಂತಹ ಅದ್ಭುತ ಸಿನಿಮಾ ಆಗಲಿದೆ. ಹಾಗಾಗಿ, ಈ ಪ್ರಾಜೆಕ್ಟ್ ಬಗ್ಗೆ ಹೆಚ್ಚು ಉತ್ಸುಕರಾಗಿದ್ದೇವೆ. ಹನುಮನ ಪಾದಕ್ಕೆ ನಮಸ್ಕರಿಸಿ ಕೆಲಸ ಆರಂಭಿಸಿದ್ದೇವೆ. ಈ ಪಾತ್ರವು ಹನುಮಂತನಿಗೆ ಸೇವೆ ಮಾಡಲು ಸಿಕ್ಕ ಅವಕಾಶ ಎಂದೇ ಭಾವಿಸುವೆ’ ಎಂದು ಸಂತಸ ಹಂಚಿಕೊಂಡರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net