ರೀಲ್ಸ್ ವಿವಾದ, ಸುಧೀರ್ ಸ್ಪಷ್ಟನೆ : ದೈವದ ಕುರಿತಲ್ಲ, ಹಾಡುಗಳಿಗೆ ರೀಲ್ಸ್ ಮಾಡಿ ಎಂದಿದ್ದೇವೆ ಎಂದ ನಿರ್ದೇಶಕ

ಸುಧೀರ್ ಅತ್ತಾವರ
ಸುಧೀರ್ ಅತ್ತಾವರ
Published on

ಪ್ರಮುಖ ಮುಖ್ಯಾಂಶಗಳು

  • ‘ಜೀ ಮ್ಯೂಸಿಕ್’ನಲ್ಲಿ ಕೊರಗಜ್ಜ ಹಾಡು ಟ್ರೆಂಡಿಂಗ್​
  • ಹಾಡುಗಳಿಗೆ ರೀಲ್ಸ್ ಮಾಡಿದರೆ ಬಹುಮಾನ ಘೋಷಿಸಿದ್ದ ಚಿತ್ರತಂಡ
  • ಕೆಲವೆಡೆ ವಿರೋಧ, ಸಷ್ಟನೆ ನೀಡಲು ಮುಂದಾದ ನಿರ್ದೇಶಕ ಸುಧೀರ್ ಅತ್ತಾವರ
ಬೆಂಗಳೂರು: ಗೀತರಚನೆಕಾರ ಸುಧೀರ್ ಅತ್ತಾವರ ನಿರ್ದೇಶನದ ‘ಕೊರಗಜ್ಜ’ ಸಿನಿಮಾ ರಿಲೀಸ್‌ಗೆ ಸಿದ್ಧವಾಗಿದೆ. ಈಗಾಗಲೇ ‘ಜೀ ಮ್ಯೂಸಿಕ್’ನಲ್ಲಿ ಬಿಡುಗಡೆಯಾಗಿರುವ ಸಿನಿಮಾದ ಎಲ್ಲ ಹಾಡುಗಳು ವೈರಲ್ ಆಗಿ, ಜಾಲತಾಣದಲ್ಲಿ ಟ್ರೆಂಡಿಂಗ್‌ನಲ್ಲಿವೆ. ಈ ಮಧ್ಯೆ ಚಿತ್ರತಂಡವು ಹಾಡುಗಳಿಗೆ ಸಂಬಂಧಿಸಿದಂತೆ ರೀಲ್ಸ್ ಸ್ಪರ್ಧೆ ಆಯೋಜಿಸಿ, ಬಹುಮಾನ ಘೋಷಿಸಿತ್ತು. ಅದನ್ನು ಕೆಲವರು ವಿರೋಧ ವ್ಯಕ್ತಪಡಿಸಿ, ರೀಲ್ಸ್ ಮೂಲಕ ದೈವಗಳಿಗೆ ಅಪಮಾನ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ಇದಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಸುಧೀರ್ ಅತ್ತಾವರ ಸ್ಪಷ್ಟನೆ ನೀಡಿದ್ದು, ‘ನಾವು ದೈವದ ಬಗ್ಗೆ ರೀಲ್ಸ್ ಮಾಡಿ ಎಂದು ಹೇಳಿಲ್ಲ. ನಮ್ಮ ಸಿನಿಮಾದ ಹಾಡುಗಳಿಗೆ ಸೃಜನಶೀಲವಾಗಿ ವಿಡಿಯೋ ಮಾಡಿ ಎಂದಿದ್ದೇವೆ ಅಷ್ಟೇ’ ಎಂದು ಪ್ರತಿಕ್ರಿಯಿಸಿದ್ದಾರೆ. ‘ರೀಲ್ಸ್ ಎಂದರೆ ವಿಡಿಯೋ ತುಣುಕುಗಳು ಅಷ್ಟೇ. ಈಗಾಗಲೇ ದೈವಗಳ ಬಗ್ಗೆ ಹಾಗೂ ದೈವಾರಾಧನಾ ಕ್ರಮಗಳಾದ ಕೋಲ, ನೇಮ, ತಂಬಿಲ, ಅಗೆಲು.. ಹೀಗೆ ದೈವದ ವಿಚಾರವಾಗಿ ಸಹಸ್ರಾರು ರೀಲ್ಸ್ ಮಾಡಿ ಜಾಲತಾಣದಲ್ಲಿ ಹರಿಬಿಡಲಾಗುತ್ತಿದೆ. ಹೀಗಿರುವಾಗ, ನಾವು ಚಿತ್ರದ ಹಾಡುಗಳಿಗೆ ರೀಲ್ಸ್ ಸ್ಪರ್ಧೆ ಆಯೋಜಿಸಿದರೆ ತಪ್ಪೇನು? ಆದಾಗ್ಯೂ ಅಶ್ಲೀಲ, ಅಸಂಬದ್ಧ ಮತ್ತು ಅಪಹಾಸ್ಯ ಮಾಡುವ ರೀತಿಯ ರೀಲ್ಸ್​ ಗಳ ವಿರುದ್ಧ ಕಾನೂನು ಕ್ರಮ ಎದುರಿಸಬೇಕಾದೀತು ಎನ್ನುವ ಎಚ್ಚರಿಕೆಯನ್ನು ನಾವೀಗಾಗಲೇ ಕೊಟ್ಟಿದ್ದೇವೆ. ಚಿತ್ರದ ಹಾಡುಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಈ ರೀಲ್ಸ್ ಸ್ಪರ್ಧೆ ಆಯೋಜಿಸಿದ್ದೇವೆ. ಇದಕ್ಕೂ ಆಕ್ಷೇಪಣೆ ಕೇಳಿಬಂದಿದೆ’ ಎಂದಿದ್ದಾರೆ.
ಪ್ರತಿ ಹಂತದಲ್ಲೂ ಸಮಸ್ಯೆ: ರೀಲ್ಸ್ ಸ್ಪರ್ಧೆಯ ಬಗ್ಗೆ ವಿವಾದ ಸೃಷ್ಟಿಯಾಗಿರುವ ಕಾರಣ ಬೇಸರ ವ್ಯಕ್ತಪಡಿಸಿರುವ ನಿರ್ದೇಶಕ ಸುಧೀರ್ ಅತ್ತಾವರ, ‘ನಮ್ಮ ಸಿನಿಮಾಗೆ ಪ್ರತಿ ಹಂತದಲ್ಲೂ ತೊಂದರೆ ಕೊಡುವುದು, ವಿರೋಧಿಸುವುದು ನಡೆಯುತ್ತಲೇ ಇದೆ. ಕಳಸದಲ್ಲಿ ಶೂಟಿಂಗ್ ಸಮಯದಲ್ಲೇ ಕೆಲವರು ಲಾಂಗ-ಮಚ್ಚುಗಳನ್ನು ತಂದು ಚಿತ್ರೀಕರಣ ನಿಲ್ಲಿಸಿ, ಇಲ್ಲದ ರಗಳೆ ಸೃಷ್ಟಿಸಿ, ಲಕ್ಷಾಂತರ ರೂಪಾಯಿ ನಷ್ಟವಾಗುವಂತೆ ಮಾಡಿದ್ದರು. ಈಗ ರೀಲ್ಸ್ ಸ್ಪರ್ಧೆಯನ್ನೂ ವಿರೋಧಿಸುತ್ತಿದ್ದಾರೆ. ಆದರೆಮ ಕೊರಗಜ್ಜ ದೈವದ ಆಶಿರ್ವಾದದಿಂದಲೇ ಇಂತಹ ಹಲವು ಅಗ್ನಿಪರೀಕ್ಷೆಗಳನ್ನು ದಾಟಿ ಸಿನಿಮಾ ರಿಲೀಸ್ ಹಂತಕ್ಕೆ ಬಂದಿದೆ’ ಎಂದು ಹೇಳಿಕೊಂಡಿದ್ದಾರೆ. ತ್ರಿವಿಕ್ರಮ್ ಸಪಲ್ಯ ನಿರ್ಮಾಣದ ‘ಕೊರಗಜ್ಜ’ ಚಿತ್ರದಲ್ಲಿ ಬಾಲಿವುಡ್ ನಟರಾದ ಕಬೀರ್ ಬೇಡಿ, ಸಂದೀಪ್ ಸೋಪರ್ಕರ್, ಗಣೇಶ್ ಆಚಾರ್ಯ, ನಟಿಯರಾದ ಭವ್ಯಾ, ಶ್ರುತಿ ಕಲಾಬಳಗದಲ್ಲಿದ್ದಾರೆ. ವಿದ್ಯಾಧರ್ ಶೆಟ್ಟಿ ಚಿತ್ರದ ಕಾರ್ಯಕಾರಿ ನಿರ್ಮಾಪಕರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net